Advertisement

ಅಂಗನವಾಡಿ ಅಭಿವೃದ್ಧಿಗೆ ಮುಂದಾದ ನಗರಸಭೆ

02:49 PM Nov 19, 2017 | Team Udayavani |

ನಗರ: ನಗರಸಭೆ ವ್ಯಾಪ್ತಿಯ 39 ಅಂಗನವಾಡಿಗಳ ಪೈಕಿ 36 ಅಂಗನವಾಡಿಗಳ ದುರಸ್ತಿ ಕಾರ್ಯಕ್ಕೆ 31 ಲಕ್ಷ ರೂ. ಅನುದಾನ ನಿಗದಿ ಮಾಡಲಾಗಿದೆ. ಬಾಲ ವಿಕಾಸ ಸಮಿತಿ ಅಧ್ಯಕ್ಷರು ಆಯಾ ವಾರ್ಡ್‌ ಅಧ್ಯಕ್ಷರೇ ಆಗಿರುವುದರಿಂದ, ಅವರ ಮೂಲಕ ದುರಸ್ತಿಯ ಪಟ್ಟಿ ನೀಡುವಂತೆ ಮನವಿ ಮಾಡಿಕೊಳ್ಳಲಾಯಿತು.

Advertisement

ನಗರಸಭೆ ವ್ಯಾಪ್ತಿಯ ಅಂಗನವಾಡಿಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ಶನಿವಾರ ಪುತ್ತೂರು ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಯಿತು.

ಟೆಂಡರ್‌ ಕರೆಯಲಾಗುವುದು
ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತನಾಡಿದ ನಗರಸಭೆ ಸದಸ್ಯ ಮಹಮ್ಮದ್‌ ಆಲಿ, ಗ್ರಾಮೀಣ ಭಾಗದ ಅಂಗನವಾಡಿಗಳ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್‌ ಅನುದಾನ ನೀಡುತ್ತದೆ. ಆದರೆ ನಗರ ವ್ಯಾಪ್ತಿಯನ್ನು ಕೈಬಿಡುತ್ತದೆ. ಇದರಿಂದಾಗಿ ನಗರಸಭೆ ವ್ಯಾಪ್ತಿಯ ಹೆಚ್ಚಿನ ಅಂಗನವಾಡಿಗಳು ದುರಸ್ತಿ ಕಾರ್ಯ ಎದುರು ನೋಡುತ್ತಿದೆ. ಮಾತ್ರವಲ್ಲ ನಗರಸಭೆ ಸದಸ್ಯರೇ ಬಾಲವಿಕಾಸ ಸಮಿತಿ ಅಧ್ಯಕ್ಷರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಸಭೆ ಅಂಗನವಾಡಿ ಅಭಿವೃದ್ಧಿಗೆ ಮುಂದಾಗಿದೆ. ನಗರಸಭೆ ಅನುದಾನದಲ್ಲಿ ತುರ್ತು ಕಾಮಗಾರಿ ನಡೆಸಲಾಗುವುದು. ಅಗತ್ಯ ಕಾಮಗಾರಿಗಳ ಪಟ್ಟಿಯನ್ನು ನಗರಸಭೆ ಸದಸ್ಯರು ತಯಾರಿಸಿ, ನೀಡಬೇಕು. ಇಲ್ಲಿ ಕಾಮಗಾರಿಯ ಸಾಧಕ- ಬಾಧಕದ ಬಗ್ಗೆ ಚರ್ಚಿಸಿ ಟೆಂಡರ್‌ ಕರೆಯಲಾಗುವುದು ಎಂದರು.

ಉಪಾಧ್ಯಕ್ಷ ವಿಶ್ವನಾಥ ಗೌಡ ಮಾತನಾಡಿ, ಆಯಾ ಭಾಗದ ಅಂಗನವಾಡಿಗಳ ದುರಸ್ತಿಯನ್ನು ನಗರಸಭೆ ಸದಸ್ಯರ ಗಮನಕ್ಕೆ ತರಬೇಕು. ಅದನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.

ಸಿಡಿಪಿಒ ಶಾಂತಿ ಹೆಗ್ಡೆ ಮಾತನಾಡಿ, ನಗರಸಭೆ ಅಂಗನವಾಡಿ ದುರಸ್ತಿಗೆ ಮುಂದಾಗಿರುವುದು ರಾಜ್ಯದಲ್ಲೇ ಪ್ರಥಮ. ಕಾಮಗಾರಿಗೆ ಅನುದಾನ ಮೀಸಲಿಟ್ಟಿರುವ ನಗರಸಭೆ, ದುರಸ್ತಿಗೆ ಮೊದಲ ಆದ್ಯತೆ ನೀಡಲಿದೆ. ಮುಕ್ರಂಪಾಡಿಯಂತಹ ಅಂಗನವಾಡಿಗಳಲ್ಲಿ ಹಲವು ಅವಘಡ ನಡೆದಿದೆ. ಹಂಚು, ಕಿಟಕಿ, ಬಾಗಿಲು ರಿಪೇರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.

Advertisement

ಮೂರು ಅಂಗನವಾಡಿಗಳನ್ನು ದುರಸ್ತಿ ಕಾರ್ಯದಿಂದ ಕೈಬಿಟ್ಟಿರುವುದು ಯಾಕೆ ಎಂದು ನಗರಸಭೆ ಸದಸ್ಯ ರಮೇಶ್‌ ರೈ ಪ್ರಶ್ನಿಸಿದರು. ಬಾಲವನದ ಅಂಗನವಾಡಿಯಂತೆಯೇ ಮೂರು ಅಂಗನವಾಡಿಗಳು ಉತ್ತಮ ಸ್ಥಿತಿಯಲ್ಲಿವೆ. ಆದ್ದರಿಂದ ಕೈ ಬಿಟ್ಟಿದ್ದೇವೆ. ಅಗತ್ಯ ಕಾಮಗಾರಿ ಬೇಕಿದ್ದರೆ ಮಾಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಲಾಯಿತು. ನಗರಸಭೆ ಅಧ್ಯಕ್ಷೆ ಜಯಂತಿ ಬಲಾ°ಡ್‌ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತೆ ರೂಪಾ ಶೆಟ್ಟಿ ವಂದಿಸಿದರು.

ದುರಸ್ತಿಗೆ ಮೊದಲ ಆದ್ಯತೆ
ದುರಸ್ತಿಗೆ ಮೊದಲ ಆದ್ಯತೆ ನೀಡಿದ್ದು, ಸೌಕರ್ಯಕ್ಕೆ ದ್ವಿತೀಯ ಆದ್ಯತೆ ನೀಡಲಾಗುವುದು. ಹಲವು ಅಂಗನವಾಡಿಗಳಲ್ಲಿ ಅವಘಡ ನಡೆದ ನಿದರ್ಶನ ಕಣ್ಣ ಮುಂದಿದೆ. ಕೆಲವು ಅಂಗನವಾಡಿಗಳ ಹಂಚು ಬೀಳುವ ಸ್ಥಿತಿಯಲ್ಲಿದೆ. ಇವುಗಳಿಗೆ ಮೊದಲ ಆದ್ಯತೆ ನೀಡಿದ್ದೇವೆ. ಎಲ್ಲ ಅಂಗನವಾಡಿ ಕಾರ್ಯಕರ್ತೆಯರು, ಇಲಾಖೆ ಈ ನಿಟ್ಟಿನಲ್ಲಿ ಸಹಕರಿಸಬೇಕು. ಪಕ್ಕದ ಅಂಗನವಾಡಿಯ ಸ್ಥಿತಿಯನ್ನು ಗಮನಿಸಿಕೊಳ್ಳಿ ಎಂದು ಸಭೆಯಲ್ಲಿ ಸಲಹೆ ನೀಡಲಾಯಿತು.

ವಿದ್ಯುತ್‌ ಬಿಲ್‌ ಪಾವತಿ ಸಾಧ್ಯವಿಲ್ಲ
ಅಂಗನವಾಡಿಯ ವಿದ್ಯುತ್‌ ಬಿಲ್‌ ಪಾವತಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸಾಧ್ಯವೇ ಎಂದು ಕಾರ್ಯಕರ್ತೆಯೊಬ್ಬರು ಪ್ರಶ್ನಿಸಿದರು. ನಗರಸಭೆ ವತಿಯಿಂದ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇಲಾಖೆಯೇ ಈ ಬಗ್ಗೆ ಗಮನ ಹರಿಸಬೇಕು ಎಂದು ಉಪಾಧ್ಯಕ್ಷ ವಿಶ್ವನಾಥ ಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next