Advertisement

Manada Kadalu: ಯುವ ಜೋಡಿಗಳ ʼಮನದ ಕಡಲುʼ; ಮತ್ತೆ ಒಂದಾದ ಮುಂಗಾರು ಮಳೆ ಟೀಂ

11:18 AM Nov 29, 2024 | Team Udayavani |

“ಮುಂಗಾರು ಮಳೆ’- ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ಸಿನಿಮಾ. ಆ ಚಿತ್ರದ ಗೆಲುವು ಪರಭಾಷಾ ಚಿತ್ರರಂಗ ಕೂಡಾ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದು ಸುಳ್ಳಲ್ಲ. 18 ವರ್ಷಗಳ ಹಿಂದೆ ನಿರ್ದೇಶಕ ಯೋಗರಾಜ್‌ ಭಟ್‌ ಹಾಗೂ ನಿರ್ಮಾಪಕ ಇ.ಕೃಷ್ಣಪ್ಪ ಅವರ ಕಾಂಬಿನೇಶನ್‌ ನಲ್ಲಿ ಬಂದ ಚಿತ್ರವದು. ಈಗ ಈ ಜೋಡಿ ಮತ್ತೆ ಒಂದಾಗಿದೆ. ಹೊಸದೊಂದು ಸಿನಿಮಾ ಮಾಡಿದೆ. ಅದೇ “ಮನದ ಕಡಲು’.

Advertisement

ಇತ್ತೀಚೆಗೆ ಈ ಚಿತ್ರದ ಟೈಟಲ್‌ ಲಾಂಚ್‌ ಕಾರ್ಯಕ್ರಮ ನಡೆಯಿತು. ನಿರ್ಮಾಪಕ ಕೃಷ್ಣಪ್ಪ ಅವರು ಈ ಬಾರಿಯೂ ಹೊಸ ಕುದುರೆಯ ಹಿಂದೆಯೇ ನಾನು ಹೋಗುತ್ತೇನೆ ಎನ್ನುವ ಮೂಲಕ ಭಟ್ಟರು ಕೂಡಾ ಸಂಪೂರ್ಣ ಹೊಸ ನಾಯಕ, ನಾಯಕಿಯೊಂದಿಗೆ ಒಂದು ಮುದ್ದಾದ ಲವ್‌ಸ್ಟೋರಿಯನ್ನು ಹೆಣೆದಿದ್ದಾರೆ. ಚಿತ್ರದಲ್ಲಿ ಸುಮುಖ ನಾಯಕನಾದರೆ, ರಾಶಿಕಾ ಶೆಟ್ಟಿ ಹಾಗೂ ಅಂಜಲಿ ನಾಯಕಿಯರು.

“ಮನದ ಕಡಲು’ ಸಿನಿಮಾ ಆರಂಭವಾದ ಬಗ್ಗೆ ಮಾತನಾಡುವ ಯೋಗರಾಜ್‌ ಭಟ್‌, “ಮುಂಗಾರು ಮಳೆ’ ನಂತರ ಇ. ಕೃಷ್ಣಪ್ಪ ನಿರ್ಮಾಣದಲ್ಲಿ ಇನ್ನೊಂದು ಚಿತ್ರ ನಿರ್ದೇಶನ ಮಾಡುವ ಯೋಚನೆ ಇತ್ತು. ಆದರೆ, ಅವರು ರಾಜಕೀಯದಲ್ಲಿ ಮತ್ತು ನಾನು ಬೇರೆ ಸಿನಿಮಾಗಳಲ್ಲಿ ಬಿಝಿಯಾದೆ. ಕೊರೋನಾ ನಂತರ ಮತ್ತೆ ಒಟ್ಟಿಗೆ ಚಿತ್ರ ಮಾಡುವುದು ನಿರ್ಧಾರವಾಯಿತು. ಕೃಷ್ಣಪ್ಪ ಅವರು ಮೊದಲೇ ತಾವು ಹೊಸ ಕುದುರೆ ಜೊತೆಗೇ ಸಿನಿಮಾ ಮಾಡೋಣ ಎಂದರು. ಹೊಸಬರ ಜೊತೆಗೆ ಸಿನಿಮಾ ಮಾಡೋದು ಸುಲಭವಲ್ಲ. ಏನು ವರ್ಕ್‌ ಆಗುತ್ತದೆ, ಪರದೆಗೆ ಏನು ಬೇಕು, ಎರಡೂವರೆ ಗಂಟೆ ಅವರಿಗೆ ಪ್ರೇಕ್ಷಕರನ್ನು ಕೂರಿಸಿಕೊಳ್ಳುವುದಕ್ಕೆ ಸಾಧ್ಯವಾ? ಪ್ರೇಕ್ಷಕರ ಜೊತೆಗೆ ಹೊಸಬರು ಕನೆಕ್ಟ್ ಆಗುತ್ತಾರಾ? ಅವರಿಗೆ ಪ್ಯಾಶನ್‌ ಮತ್ತು ಹಸಿವು ಇರಬೇಕು. ಇವೆಲ್ಲವನ್ನೂ ಯೋಚಿಸಬೇಕು. ಹೊಸಬರ ಜೊತೆಗೆ ಕೆಲಸ ಮಾಡುವುದರಿಂದ ತುಂಬಾ ಕಲಿಯುತ್ತೇವೆ. ಅವರ ಎನರ್ಜಿ ಲೆವೆಲ್‌ ಅದ್ಭುತವಾಗಿರುತ್ತದೆ. ಇವತ್ತಿನ ಯುವಕರ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದರೆ ಅವರ ಸಹವಾಸ ಮಾಡಬೇಕು. ಅದರಂತೆ ಈ ಸಿನಿಮಾ ಮಾಡಿದ್ದೇನೆ. ಈ ಚಿತ್ರಕ್ಕಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅದರಲ್ಲೂ ಕರ್ನಾಟಕದ 12 ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಮಹಾರಾಷ್ಟ್ರದ ಮುರುಡ್‌ ಜಂಜೀರ ಎಂಬ ಸಮುದ್ರದ ಮಧ್ಯದ ಕೋಟೆಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅದಕ್ಕೆ 15 ರೀತಿಯ ಪರ್ಮಿಷನ್‌ ಬೇಕು. ಅದೊಂದು ಯುದ್ಧ ಮಾಡಿದ ಅನುಭವ. ಈಗಾಗಲೇ ಶೇ. 95ರಷ್ಟು ಚಿತ್ರೀಕರಣ ಮುಗಿದಿದೆ’ ಎನ್ನುತ್ತಾರೆ.

ಚಿತ್ರದ ಕಥೆಯ ಬಗ್ಗೆ ಮಾತನಾಡುವ ಅವರು, “ಕಡಲಿಗೆ ಒಂದು ಕಾವು ಇದೆ. ಅದು ಸಿಹಿಯಲ್ಲ. ನದಿ ಅಥವಾ ಫಾಲ್ಸ್ ತರಹ ಮಧುರವಲ್ಲ. ಕಡಲಿನ ಮುಂದೆ ನಿಂತಾಗ ನಮಗೆ ಕೀಳರಿಮೆ ಬರುತ್ತದೆ. ಪ್ರಕೃತಿ ಮುಂದೆ ನಾವೆಷ್ಟು ಚಿಕ್ಕವರು ಎನಿಸುತ್ತದೆ. ಆರಂಭ, ಇಂಟರ್ವೆಲ್‌ ಮತ್ತು ಕ್ಲೈಮ್ಯಾಕ್ಸ್‌ ಸೀನ್‌ಗಳಲ್ಲಿ ಕಡಲು ಬರುತ್ತದೆ’ ಎಂದು ವಿವರ ನೀಡಿದರು.

Advertisement

ನಿರ್ಮಾಪಕ ಇ. ಕೃಷ್ಣಪ್ಪ ಅವರು ಕೂಡಾ ಈ ಸಿನಿಮಾ ನಿರೀಕ್ಷೆ ಇಟ್ಟಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, “ಕಥೆ ಚೆನ್ನಾಗಿರಬೇಕು. ಕನ್ನಡಿಗರು ಮೆಚ್ಚುವ ಹಾಗೆ ಮಾಡಬೇಕು. ಇದೊಂದು ಪ್ರಾಮಾಣಿಕ ಪ್ರಯತ್ನ’ ಎನ್ನುತ್ತಾರೆ. ನಾಯಕ ನಟ ಸುಮುಖ ಈಗಿನ ಕಾಲದ ನವಯುವಕನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. “ಈಗಿನವರು ಜೀನದಲ್ಲಿ ಏನು ಮಾಡಬೇಕು ಎಂಬ ಗೊಂದಲದಲ್ಲಿರುತ್ತಾರೆ. ಅದು ಈ ಚಿತ್ರದಲ್ಲಿದೆ’ ಎಂದರು. ನಾಯಕಿಯರಾದ ರಾಶಿಕಾ ಹಾಗೂ ಅಂಜಲಿ ಕೂಡಾ ಚಿತ್ರದ ಬಗ್ಗೆ ಮಾತನಾಡಿದರು.

ಚಿತ್ರದಲ್ಲಿ ರಂಗಾಯಣ, ಹಿರಿಯ ನಟ ದತ್ತಣ್ಣ 100 ವರ್ಷ ಆದರೆ, 70ರ ಚೈತನ್ಯ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಸಂಗೀತ ನಿರ್ದೇಶಕ ಹರಿಕೃಷ್ಣ, ಸಾಹಿತ್ಯ ಬರೆದ ಜಯಂತ್‌ ಕಾಯ್ಕಿಣಿ ಕೂಡಾ ತಮ್ಮ ಅನುಭವ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next