ಶಿವಮೊಗ್ಗ : ಶಂಕಿತ ಉಗ್ರ ಮಾಜ್ ತಂದೆ ಮುನೀರ್ ಅಹಮದ್ ನಿಧನ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮುನೀರ್ ಅಹಮದ್ (57) ಚಿಕಿತ್ಸೆ ಫಲಿಸದೆ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ. ಮಂಗಳೂರಿನಲ್ಲಿಯೇ ನೆಲೆಸಿದ್ದ ಮುನೀರ್ ಅಹಮದ್.
ತೀರ್ಥಹಳ್ಳಿ ಮೂಲದವರಾದ ಮುನೀರ್ ಅಹಮದ್ ತಮ್ಮ ಮಕ್ಕಳ ಶಿಕ್ಷಣದ ಕಾರಣದಿಂದ ಮಂಗಳೂರಿನಲ್ಲಿಯೇ ನೆಲೆಸಿದ್ದರು. ಮಗ ಮಾಜ್ ಉಗ್ರರೊಂದಿಗೆ ನಂಟು ಹೊಂದಿದ ವಿಷಯ ಕೇಳಿ ಮುನೀರ್ ಅಹಮದ್ ನೊಂದಿದ್ದರು.ಇದೇ ಕಾರಣದಿಂದಾಗಿ ಹೃದಯಾಘಾತ ಸಂಭವಿಸಿರಬಹುದು ಎನ್ನಲಾಗುತ್ತಿದೆ.
ತೀರ್ಥಹಳ್ಳಿಯ ಪ್ರತಿಷ್ಠಿತ ಕುಟುಂಬದ ಮುನೀರ್ ಅಹಮದ್ ಅವರ ತಂದೆ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಸದಸ್ಯರಾಗಿದ್ದರು.
ತೀರ್ಥಹಳ್ಳಿಯಲ್ಲಿ ಹೋಲ್ ಸೇಲ್ ಮೀನು ವ್ಯಾಪಾರಿಯಾಗಿದ್ದ ಮಾಜ್ ಮಂಗಳೂರಿನಲ್ಲಿಯೂ ತಮ್ಮ ಉದ್ಯಮ ಮುಂದುವರಿಸಿದ್ದರು.ನಾಳೆ ಮ್ಯಾಜಿಸ್ಟ್ರೇಟ್ ಅನುಮತಿ ಪಡೆದು ಶಂಕಿತ ಉಗ್ರ ಮಾಜ್ ನನ್ನು ತಂದೆಯ ಅಂತಿಮ ದರ್ಶನಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗದಲ್ಲಿ ಸೆರೆಯಾದ ಇಬ್ಬರು ಶಂಕಿತ ಉಗ್ರರಲ್ಲಿ ಒಬ್ಬನಾದ ಮಾಜ್ ಐಸಿಸ್ ಪ್ರೇರಿತ ಅಲ್-ಹಿಂದ್ ಸಂಘಟನೆಯ ಸದಸ್ಯರಾಗಿದ್ದು, ರಾಜ್ಯದಲ್ಲಿ ಹಿಂದೂ ಮುಖಂಡರು ಮತ್ತು ಹಿಂದೂಪರ ಇರುವ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಸಂಗತಿ ತನಿಖಾ ಸಂಸ್ಥೆಗಳ ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಇದರ ಮಧ್ಯೆ ಪ್ರಕರಣವನ್ನು ಎನ್‌ಐಎ ಕೈಗೆತ್ತಿಕೊಂಡಿದೆ.