Advertisement

Mundugaru:ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಪೇಜಾವರ ಶ್ರೀಗಳ ಸಂಚಾರ; ಕಾಡಿನಲ್ಲಿ ರಾಮಮಂತ್ರ ಘೋಷ

07:10 PM Dec 14, 2024 | Team Udayavani |

ಚಿಕ್ಕಮಗಳೂರು (ಮುಂಡುಗಾರು):  ನಕ್ಸಲ್‌ ಪೀಡಿತ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಮುಂಡುಗಾರು ಮತ್ತು ಆಸುಪಾಸಿನ ಕಾಡು ಹಾದಿಯ ದುರ್ಗಮ ಹಳ್ಳಿಗಳಿಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿ ಗಿರಿಜನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Advertisement

ಶನಿವಾರ ಪೇಜಾವರ ಶ್ರೀಗಳು ಮುಂಡುಗಾರಿಗೆ ಭೇಟಿ ನೀಡಿದಾಗ ಅಲ್ಲಿನ ಗ್ರಾಮಸ್ಥರು ಭಕ್ತಿ ಆದರದಿಂದ ಬರಮಾಡಿಕೊಂಡರು. ಮೈಲುದೂರ ನೂರಾರು ಮಹಿಳೆಯರು, ಪುರುಷರು ರಾಮಮಂತ್ರ ಘೋಷ ಭಜನೆಗಳೊಂದಿಗೆ ಪೂರ್ಣ ಕುಂಭಗಳ ಸಹಿತ ಶ್ರೀಗಳವರನ್ನು ಕಾಲ್ನಡಿಗೆಯಲ್ಲಿ ವನಮೆರವಣಿಗೆ ನಡೆಸಿ ಬರಮಾಡಿಕೊಂಡರು.

ಬಳಿಕ ನಡೆದ ಗಿರಿಜನ ಜಾಗೃತಿ ಕಾರ್ಯಕ್ರಮದಲ್ಲಿ ಕೆಲ ಹೊತ್ತು ಸಂಘಟನೆಗಳು ಹಾಗೂ ಗ್ರಾಮಸ್ಥರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಕುಂದು ಕೊರತೆಗಳ ಆಲಿಸಿದರು. ಗ್ರಾಮಸ್ಥರು ಸಲ್ಲಿಸಿದ ಲಿಖಿತ ಅಹವಾಲು ಸ್ವೀಕರಿಸಿದ ಶ್ರೀಗಳು ಶ್ರೀಮಠದಿಂದ ಮತ್ತು ಭಕ್ತರ ನೆರವಿನೊಂದಿಗೆ ಸಹಕರಿಸುವುದರ ಜೊತೆಗೆ  ಕೆಲವು ವಿಚಾರಗಳನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಶ್ರೀಮಠದಿಂದ ಸದಾ ಸ್ಪಂದನೆ:

ಸುಮಾರು ಹತ್ತು ವರ್ಷಗಳ ಹಿಂದೆಯೂ ಪೇಜಾವರ ಮಠದ ಹಿರಿಯ ಗುರುಗಳಾದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಕಾಡಿನಲ್ಲೇ ಪಟ್ಟದ ದೇವರ ಪೂಜೆ ನೆರವೇರಿಸಿ ಅನೇಕ ಸೌಲಭ್ಯ, ಸವಲತ್ತುಗಳ ಶ್ರೀಮಠದಿಂದ ಒದಗಿಸಿರುವುದನ್ನೂ ಗ್ರಾಮದ ಪ್ರಮುಖರು ಸ್ಮರಿಸಿಕೊಂಡರು. ಮುಂದಿನ ದಿನಗಳಲ್ಲೂ ಶ್ರೀಮಠ ಗಿರಿಜನ ಬಂಧುಗಳ ನೆಮ್ಮದಿಯ ಬದುಕಿಗೆ ಸದಾ ಸ್ಪಂದಿಸಲಿದೆ. ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮ ಶಿಕ್ಷಣ, ಸಂಸ್ಕಾರಗಳನ್ನು ನೀಡಿ ಬೆಳೆಸುವಂತೆಯೂ ಶ್ರೀಗಳು ಕಿವಿಮಾತು ಹೇಳಿ ಎಲ್ಲರಿಗೂ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಕಾಡು ಉತ್ಪತ್ತಿ ಸಮರ್ಪಣೆ:
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ ಕಾನನವಾಸಿಗಳ ಬವಣೆಗಳ ಕುರಿತು ಶ್ರೀಗಳ ಗಮನಸೆಳೆದರು. ಈ ಕಾಡು ಪ್ರದೇಶಕ್ಕೆ ಆಗಮಿಸಿ ಗ್ರಾಮಸ್ಥರಲ್ಲಿ ಸಂತಸ, ಉತ್ಸಾಹ,  ಭರವಸೆಗಳ ತುಂಬಿದ್ದಕ್ಕೆ ಶ್ರೀಗಳು ಅಭಿನಂದಿಸಿದರು. ಇದೇ ವೇಳೆ ಶ್ರೀಗಳಿಗೆ ಪಾದಪೂಜೆ ನೆರವೇರಿಸಿ ಕಾಡಿನಲ್ಲಿ ಬೆಳೆದ ಫಲವಸ್ತು, ಜೇನು ತುಪ್ಪ ಇತ್ಯಾದಿಗಳ ತಾವೇ ತಯಾರಿಸಿದ ಬೆತ್ತದ ಬುಟ್ಟಿಯಲ್ಲಿಟ್ಟು ಸಮರ್ಪಿಸಿದರು.

Advertisement

ಇತ್ತೀಚೆಗೆ ಕೆಲವು ನಕ್ಸಲರು ಮುಂಡುಗಾರು ಪ್ರದೇಶಗಳಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿನ ಕೆಲವು ಸಂಘಟನೆಗಳು ಮತ್ತು ಗ್ರಾಮಸ್ಥರು ಪೇಜಾವರ ಶ್ರೀಗಳ ಆಹ್ವಾನಿಸಿದ್ದರಿಂದ ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next