Advertisement

ಬತ್ತಿದ ಮುಂಡ್ಲಿ: ಕಾರ್ಕಳ ನಗರಕ್ಕೆ ನೀರಿನ ಕೊರತೆ

10:17 PM Apr 30, 2019 | Team Udayavani |

ಕಾರ್ಕಳ: ಇಲ್ಲಿನ ಪುರಸಭೆಗೆ ನೀರಿನ ಮೂಲ ಮುಂಡ್ಲಿ ನದಿ. ಈ ನದಿಯಲ್ಲಿ ನೀರು ಬತ್ತಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಕುಂಬ್ರಿಪದವು, ಹಿರಿಯಂಗಡಿ-ಕೃಷ್ಣಗಿರಿ, ಬಂಗ್ಲೆಗುಡ್ಡೆ, ಕಾಬೆಟ್ಟು ಮೊದಲಾದ ಎತ್ತರದ ಪ್ರದೇಶಗಳಿಗೆ ನೀರು ತಲುಪದ ಕಾರಣ ಈ ಭಾಗದ ಜನತೆ ಪರಿತಪಿಸುತ್ತಿದ್ದಾರೆ. ಹಿಂದೆ ಮುಂಡ್ಲಿ ನದಿಯಿಂದ 4.3 ಎಂಎಲ್‌ಡಿ (125 ಎಚ್‌ಪಿ ಪಂಪ್‌) ಮೂಲಕ ಪುರಸಭೆ ವ್ಯಾಪ್ತಿಗೆ ನೀರು ಸರಬರಾಜಾಗುತ್ತಿತ್ತು. ಇದೀಗ ಸಂಪೂರ್ಣ ಸ್ಥಗಿತಗೊಂಡ ಪರಿಣಾಮ ಪುರಸಭೆ ರಾಮಸಮುದ್ರದ ನೀರು ಮತ್ತು ಕೊಳವೆ ಬಾವಿಗಳನ್ನು ಬಳಸುತ್ತಿದೆ. ಇನ್ನು ಒಂದು ತಿಂಗಳೊಳಗೆ ಮಳೆ ಬಾರದಿದ್ದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಲಿದೆ.

Advertisement

ಎರಡು ದಿನಕ್ಕೊಮ್ಮೆ ನೀರು
ಕಾರ್ಕಳ ಪುರಸಭೆ ಈಗ ಎರಡು ದಿನಕ್ಕೊಮ್ಮೆ ನೀರು ಪೂರೈಸುತ್ತಿದೆ. ಎತ್ತರದ ಪ್ರದೇಶಗಳಿಗೆ ನೀರು ಪೂರೈಕೆ ಸರಿಯಾಗಿಲ್ಲ ಎನ್ನುವ ದೂರು ಸಾಮಾನ್ಯ ವಾಗಿದೆ. ಹೀಗಾಗಿ ತಗ್ಗುಪ್ರದೇಶದ ಜನರು ತಮಗೆ ಅಗತ್ಯವಿರುವಷ್ಟು ನೀರು ಪಡೆದು ಬಳಿಕ ಉಳಿದವರಿಗೆ ನೀರು ಪಡೆಯಲು ಅನುಕೂಲ ಮಾಡಿ ಕೊಡಬೇಕೆಂದು ಪುರಸಭಾ ಅ ಧಿಕಾರಿಗಳು ನೀರಿನ ಬಳಕೆದಾರರಲ್ಲಿ ವಿನಂತಿಸಿಕೊಂಡಿದ್ದಾರೆ.

ಸಮಸ್ಯೆಯನ್ನು ಯಾರಿಗೆ ಹೇಳಬೇಕು?
ಬಂಗ್ಲೆಗುಡ್ಡೆ ಪರಿಸರದ ಜನರಿಗೆ ಸರಿಯಾದ ರೀತಿಯಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಇಲ್ಲಿನ 20 ಮನೆಗಳಿಗೆ ಭಾರೀ ಸಮಸ್ಯೆಯಾಗಿದೆ. ನೀರು ಸರಬರಾಜು ಮಾಡುವ ಸಿಬಂದಿ ನಮ್ಮ ಫೋನ್‌ ಕರೆಗೆ ಸ್ವೀಕರಿಸುತ್ತಿಲ್ಲ. ಹೀಗಾಗಿ ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳಬೇಕು? ಎಂದು ಬಂಗ್ಲೆಗುಡ್ಡೆಯ ಆಸಿಫ್‌ ಹೇಳುತ್ತಾರೆ.

ವಿದ್ಯುತ್‌ ಸಮಸ್ಯೆಯೂ ಇದೆ
ಪದೇ ಪದೆ ಪವರ್‌ ಕಟ್‌ ಆಗುತ್ತಿರುವುದ ರಿಂದ ಪಂಪ್‌ ಚಾಲನೆಗೂ ಸಮಸ್ಯೆಯಾಗಿದೆ. ನಿರಂತರವಾಗಿ ವಿದ್ಯುತ್‌ ಲಭಿಸದೇ ಇರುವುದೂ ಸಮರ್ಪವಾಗಿ ನೀರು ಪೂರೈಕೆ ಮಾಡುವಲ್ಲಿ ಸಮಸ್ಯೆಯಾಗಿದೆ.

ಮುಂಡ್ಲಿಯಲ್ಲಿ ನೀರು ಬರಿದಾಗಿ ಕಾರ್ಕಳ ನಗರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುವ ಲಕ್ಷಣವಿದೆ. ಎತ್ತರದ ಪ್ರದೇಶಗಳ ಜನರು ಈಗಲೇ ಪರಿತಪಿಸುತ್ತಿದ್ದಾರೆ. ನೀರು ತಲುಪದ ಎತ್ತರದ ಪ್ರದೇಶಗಳಿಗೆ ಕೂಡಲೇ ಟ್ಯಾಂಕರ್‌ ನೀರು ಪೂರೈಕೆಗೆ ವ್ಯವಸ್ಥೆ, ನೀರು ಸಂಗ್ರಹಕ್ಕೆ ಫೈಬರ್‌ ಟ್ಯಾಂಕರ್‌ ವ್ಯವಸ್ಥೆ ಮಾಡಬೇಕು.

Advertisement

ನಿವಾಸಿಗಳ ಬೇಡಿಕೆ
– ಎತ್ತರ ಪ್ರದೇಶಗಳಿಗೂ ನೀರು ತಲುಪುವಂತೆ ಮಾಡಿ
– ವಿದ್ಯುತ್‌ ಸಮಸ್ಯೆ ಹೋಗಲಾಡಿಸಿ
– ಪ್ರದೇಶದಲ್ಲೊಂದು ಫೈಬರ್‌ ಟ್ಯಾಂಕ್‌ ಅಳವಡಿಸಿ ನೀರು ತುಂಬಿಸಿ
– ಟ್ಯಾಂಕರ್‌ ನೀರು ಪೂರೈಕೆ ವೇಳೆ ಕಿರಿದಾದ ರಸ್ತೆ ಹೊಂದಿರುವ ಮನೆಗಳಿಗೂ ತಲುಪುವಂತೆ ಮಾಡಬೇಕು.

ಇಷ್ಟೊಂದು ಕಷ್ಟ ಆಗಿಲ್ಲ
ನಿಟ್ಟೆ ಗ್ರಾಮದ ಬೆರಂದೊಟ್ಟು, ಸುನಂದಗುಡ್ಡೆಯಲ್ಲಿ ಪಂಚಾಯತ್‌ ಎರಡು ದಿನಕ್ಕೊಮ್ಮೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದೆ. 200 ಲೀಟರ್‌ನಷ್ಟು ನೀರು ನೀಡುತ್ತಾರೆ ಎನ್ನವ ಇಲ್ಲಿನ ನಿವಾಸಿಗಳಾದ ನಾರಾಯಣ ಪೂಜಾರಿ ಇಷ್ಟೊಂದು ಪ್ರಮಾಣ ನೀರಿನ ಬರ ಈ ಹಿಂದೆ ಕಂಡುಬಂದಿಲ್ಲ ಎಂದರು. ಮಲೆಬೆಟ್ಟು ಸರಕಾರಿ ಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಕೆಲವು ವರ್ಷಗಳ ಹಿಂದೆ ಬಾವಿ ಕೊರೆಯಲಾಗಿದ್ದರೂ ಪಂಪ್‌ ಸೆಟ್‌ ಇನ್ನೂ ಅಳವಡಿಸಿಲ್ಲ.

ಸಮಸ್ಯೆ ಗಮನಕ್ಕೆ ಬಂದಿದೆ
ಹನಿ ನೀರೂ ಅಮೂಲ್ಯ. ಹೀಗಾಗಿ ಮಿತವಾಗಿ ನೀರು ಬಳಕೆ ಮಾಡಿ. ತಗ್ಗುಪ್ರದೇಶದ ಜನರು ತಮಗೆ ಅಗತ್ಯವಿರುವಷ್ಟು ನೀರು ಪಡೆದು ಬಳಿಕ ಉಳಿದವರಿಗೆ ನೀರು ಪಡೆಯಲು ಅನುಕೂಲ ಮಾಡಿಕೊಡಬೇಕು.
-ಪದ್ಮನಾಭ ಎನ್‌. ಕೆ., ಕಿರಿಯ ಅಭಿಯಂತರರು ಪುರಸಭೆ ಕಾರ್ಕಳ

ಬಾವಿ ಬೇಕಿತ್ತು…
ಕಾರ್ಕಳ ತಾ|ನಲ್ಲಿ ಒಟ್ಟು 11 ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಜನರು ಬಳಕೆಗೆ ಮುಂದಾಗುತ್ತಿಲ್ಲ. ಅದರ ಬದಲಾಗಿ ಸರಕಾರಿ ಜಾಗ ದಲ್ಲಿ ಬಾವಿ ಕೊರೆದು, ಬೃಹತ್‌ ಟ್ಯಾಂಕ್‌ ನಿರ್ಮಾಣ ಮಾಡಿ ನೀರು ಪೂರೈಸಬಹುದಿತ್ತು.
-ಸುಜಾತಾ, ಕಲ್ಲೊಟ್ಟೆ ನಿವಾಸಿ

ಉದಯವಾಣಿ ಆಗ್ರಹ
ಆನೆಕೆರೆ, ಸಿಗಡಿಕೆರೆ, ರಾಮಸಮುದ್ರ, ಮುಂಡ್ಲಿ ಅಣೆಕಟ್ಟೆ ಪ್ರದೇಶಗಳಲ್ಲಿ ಬೃಹತ್‌ ಪ್ರಮಾಣದಲ್ಲಿ ತುಂಬಿರುವ ಹೂಳು ತೆಗೆದು, ನೀರು ಶೇಖರಣೆಗೊಳಿಸಬೇಕು.

– ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next