Advertisement

ದಶಕಗಳಿಂದ ಹೊಂಡದಿಂದ ಕೂಡಿದ ಮುಂಡ್ಲಿ ಮುಖ್ಯರಸ್ತೆ

09:23 PM Nov 10, 2019 | Sriram |

ಅಜೆಕಾರು: ಶಿರ್ಲಾಲು ಗ್ರಾ.ಪಂ. ವ್ಯಾಪ್ತಿಯ ಮುಂಡ್ಲಿ ಸಂಪರ್ಕ ರಸ್ತೆಯು ದಶಕಗಳಿಂದ ಸಂಪೂರ್ಣ ಹದಗೆಟ್ಟಿದ್ದು ಹೊಂಡಗಳಿಂದ ಆವೃತವಾಗಿ ವಾಹನ ಸಂಚಾರ ನಡೆಸುವುದೇ ಅಸಾಧ್ಯವಾಗಿದೆ.

Advertisement

ಮುಂಡ್ಲಿ ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ತೆಳ್ಳಾರುವಿನಿಂದ ಮುಂಡ್ಲಿವರೆಗೆ ಸುಮಾರು 5 ಕಿ.ಮೀ. ಉದ್ದದ ರಸ್ತೆ ಸಂಪೂರ್ಣ ಹದಗೆಟ್ಟಿದೆ.

ಈ ರಸ್ತೆ ಡಾಮಾರು ಕಾಣದೆ ಎರಡು ದಶಕ ಕಳೆದಿದ್ದು ಇತ್ತೀಚಿನ ದಿನಗಳಲ್ಲಿ ತೇಪೆ ಕಾರ್ಯವೂ ನಡೆದಿಲ್ಲ. ಎರಡು ವರ್ಷಗಳ ಹಿಂದೆ ಸ್ವಲ್ಪ ಮಟ್ಟಿನ ಗುಂಡಿ ಮುಚ್ಚುವ ಕಾರ್ಯ ನಡೆದಿತ್ತಾದರೂ ಕಾಮಗಾರಿ ನಡೆದು ಮೂರು ತಿಂಗಳಲ್ಲಿ ಮತ್ತೆ ರಸ್ತೆಯಲ್ಲಿ ಬೃಹತ್‌ ಹೊಂಡ ನಿರ್ಮಾಣವಾಗಿದೆ.ಈ ಕುರಿತು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಿರಂತರ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಿಲ್ಲವಾಗಿದೆ ಎಂಬುದು ಸ್ಥಳೀಯರ ಆರೋಪ.

ರಸ್ತೆಗೆ ಹಾಕಲಾದ ಡಾಮಾರು ಎದ್ದು ಜಲ್ಲಿಕಲ್ಲುಗಳ ರಾಶಿ ರಸ್ತೆಯುದ್ದಕ್ಕೂ ಬಿದ್ದು ಮಣ್ಣಿನ ರಸ್ತೆ ನಿರ್ಮಾಣವಾಗಿದೆ. ಮುಂಡ್ಲಿ ಗ್ರಾಮಸ್ಥರು ತಾಲೂಕು ಕೇಂದ್ರವನ್ನು ಸಂಪರ್ಕಿಸಲು ಇರುವ ಏಕೈಕ ರಸ್ತೆ ಇದಾಗಿದೆ. ಬಸ್‌ ಮತ್ತು ದ್ವಿಚಕ್ರ ಸವಾರರೂ ರಸ್ತೆ ದುಸ್ಥಿತಿಯಿಂದ ನಿತ್ಯ ಅಫ‌ಘಾತಗಳಾಗುತ್ತಿವೆ. ಈ ಮಾರ್ಗವಾಗಿ ಕಾರ್ಕಳ ಮುಂಡ್ಲಿ ನಡುವೆ ಸಂಚರಿಸುತ್ತಿದ್ದ ಬಹುತೇಕ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದು ವಿದ್ಯಾರ್ಥಿಗಳಿಗೆ ಹಾಗೂ ನಿತ್ಯ ಉದ್ಯೋಗಕ್ಕಾಗಿ ತೆರಳುವವರಿಗೆ ತೀವ್ರ ತೊಂದರೆಯಾಗಿದೆ.
ಮಳೆಗಾಲದಲ್ಲಿ ರಸ್ತೆಯ ಇಕ್ಕೆಲ ಗಳಲ್ಲಿ ಸೂಕ್ತ ಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲಿಯೇ ಹರಿದರೆ ಬೇಸಗೆಯಲ್ಲಿ ಈ ರಸ್ತೆ ಸಂಪೂರ್ಣ ಧೂಳಿ ನಿಂದ ಆವೃತವಾಗುತ್ತದೆ. ತುರ್ತು ಸಂದರ್ಭ ಬಾಡಿಗೆ ವಾಹನ ಮಾಲಕರು ಬರಲು ಹಿಂದೇಟು ಹಾಕುತ್ತಾರೆ.

ಮುಂಡ್ಲಿ ಗ್ರಾಮಸ್ಥರ ಅತ್ಯಾವಶ್ಯಕವಾದ ಈ ರಸ್ತೆ ಶೀಘ್ರ ದುರಸ್ತಿಗೊಳ್ಳಬೇಕಾಗಿದ್ದು ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಮುಖ್ಯ ರಸ್ತೆಯ ಡಾಮರು ನಡೆಸಿ ಸ್ಥಳೀಯರ ಸಮಸ್ಯೆಗೆ ಸ್ಪಂದಿಸಬೇಕಿದೆ.

Advertisement

ಟೆಂಡರ್‌ ಪ್ರಕ್ರಿಯೆಲ್ಲಿದೆ
ಮುಂಡ್ಲಿ ರಸ್ತೆ ಅಭಿವೃದ್ಧಿಗೆ ಪಿಆರ್‌ಇಡಿಯಿಂದ 25 ಲಕ್ಷ ರೂ. ಅನುದಾನ ಇಡಲಾಗಿದ್ದು ಟೆಂಡರ್‌ ಪ್ರಕ್ರಿಯೆಯಲ್ಲಿದೆ. ಪ್ರಕ್ರಿಯೆ ಪೂರ್ಣಗೊಂಡ ತತ್‌ಕ್ಷಣ ಕಾಮಗಾರಿ ನಡೆಸಲಾಗುವುದು.
-ಉದಯ ಕೋಟ್ಯಾನ್‌,,
ಜಿಲ್ಲಾ ಪಂಚಾಯತ್‌ ಸದಸ್ಯ

ಆಶ್ವಾಸನೆಗಷ್ಟೇ ಸೀಮಿತ
ದಶಕಗಳಿಂದ ರಸ್ತೆ ದುರಸ್ತಿಪಡಿಸುವಂತೆ ಮನವಿ ಮಾಡುತ್ತಾ ಬಂದಿದ್ದರೂ ಅಭಿವೃದ್ಧಿ ನಡೆದಿಲ್ಲ. ಕೇವಲ ಆಶ್ವಾಸನೆಗಷ್ಟೇ ಅನುದಾನ ಸೀಮಿತವಾಗಿದ್ದು ಕಾರ್ಯರೂಪಕ್ಕೆ ಬರುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ರಸ್ತೆ ಅವ್ಯವಸ್ಥೆ ವಿರೋಧಿಸಿ ಚುನಾವಣಾ ಬಹಿಷ್ಕಾರ ನಡೆಸುವ ಬಗ್ಗೆ ಗ್ರಾಮಸ್ಥರು ನಿರ್ಧಾರ ಕೈಗೊಂಡಿದ್ದರೂ ಸಹ ಜಿಲ್ಲಾಧಿಕಾರಿಗಳ ಭರವಸೆಯಂತೆ ಚುನಾವಣೆಯಲ್ಲಿ ಪಾಲ್ಗೊಳ್ಳಲಾಗಿತ್ತು. ಆದರೆ ಮುಂಬರುವ ಚುನಾವಣೆಯ ಮುನ್ನ ರಸ್ತೆ ಅಭಿವೃದ್ಧಿಗೊಳ್ಳದಿದ್ದಲ್ಲಿ ಚುನಾವಣೆ ಬಹಿಷ್ಕಾರ ಅಚಲ.
-ಸುಜಿತ್‌ ಕುಮಾರ್‌ ಶೆಟ್ಟಿ, ತಾ.ಪಂ. ಮಾಜಿ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next