ಮುಂಡರಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ನಿಯಂತ್ರಣ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಸಾರ್ವಜನಿಕ ಆಸ್ಪತ್ರೆ, ಶ್ರೀ ಜಗದ್ಗುರು ಅನ್ನದಾನೀಶ್ವರ ಕಲಾ ವಾಣಿಜ್ಯ
ವಿಜ್ಞಾನ ಸಂಯುಕ್ತ ಪದವಿ ಕಾಲೇಜ, ಪೂಜಾರ ಪ್ಯಾರಾ ಮೆಡಿಕಲ್ ಕಾಲೇಜ್ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಜನಜಾಗೃತಿ, ಜಾಥಾ ಕಾರ್ಯಾಕ್ರಮವನ್ನು ಹಸಿರು ನಿಶಾನೆ ಮೂಲಕ ಉದ್ಘಾಟಿಸಿದರು.
ಬಳಿಕ ಜಗದ್ಗುರು ಅನ್ನದಾನೀಶ್ವರ ಪ.ಪೂ. ಕಾಲೇಜನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲ ಕೆ. ಶಿವರಾಜ ಸ್ವಾಮಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಎಚ್‌ಐ ವಿ/ಏಡ್ಸ್ ಕುರಿತು ಯಾರು ಇಂತಹ ಭಯಾನಕ ಕಾಯಿಲೆಗೆ ಒಳಗಾಗದೆ ತಮ್ಮ ಶೈಕ್ಷಣಿಕ ರಂಗಕ್ಕೆ ಪ್ರಾಧ್ಯಾನತೆ ಕೊಟ್ಟು ಶಿಕ್ಷಣ ಪಡೆದು ಅದರ ಜೊತೆಗೆ ಎಚ್‌ಐ ವಿ/ಏಡ್ಸ್ ಅಂತಹ ಭಯಾನಕ ಕಾಯಿಲೆಯಿಂದ ಸಮಾಜವನ್ನು ಮುಕ್ತಗೊಳಿಸಬೇಕೆಂದು ಕರೆ ನೀಡಿದರು.
ತಾಲೂಕು ಆರೋಗ್ಯ-ಶಿಕ್ಷಣಾಧಿಕಾರಿ ಮಂಜುಳಾ ಸಜ್ಜನ ಮಾತನಾಡಿ, ವಿದ್ಯಾರ್ಥಿಗಳಿಗೆ ಏಡ್ಸ್ ಹರಡುವ ಮಾರ್ಗ ಮತ್ತು ತಡೆಗಟ್ಟುವಿಕೆ ವಿಧಾನಗಳ ಕುರಿತು ತಿಳಿಸಿದರು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಆಪ್ತ ಸಮಾಲೋಚಕ ಮಂಜುನಾಥ ಕಳಸಾಪುರ, ದೇಶದ ಯುವ ಜನತೆಗೆ ಭಾರತ ಹಿಂದು ರಾಷ್ಟ್ರವಾಗಿದ್ದು, ನಾವು ಹಿಂದು ಸಂಸ್ಕೃತಿ ಅಳವಡಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಹೇಳುವಂತೆ ಮದುವೆ ಆಗುವವರೆಗೆ ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬ್ರಹ್ಮಾಚರಣೆ ಪರಿಪಾಲನೆ ಮಾಡಿ ಎಂದು ಕಿವು ಮಾತನ್ನು ಹೇಳಿದರು. ಒಬ್ಬಳೆ ಹೆಂಡತಿ, ಒಬ್ಬಳೆ ಗಂಡ ಎಂಬ ನಮ್ಮ ಭಾರತೀಯ ಸಂಸ್ಕೃತಿ ಅಳವಡಿಸಿಕೊಳ್ಳಲು ಕರೆ ನೀಡಿದರು. ಉಪನ್ಯಾಸಕ ಬಸವರಾಜ ಜೋಗಿನರವರು ನಿರೂಪಿಸಿದರು. ಶಿವಕುಮಾರ ವಂದಿಸಿದರು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ. ಬಡಿಗೇರ, ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಕೆ.ಎಸ್. ಚೌಟಗಿ, ಕೆ.ಪಿ. ಗಂಭೀರ, ಪ್ರವೀಣ ರಡ್ಡಿ ಮತ್ತು ಪೂಜಾರ ಪ್ಯಾರಾ ಮೆಡಿಕಲ್ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಸವಡಿ, ಜೆ.ಎ. ಕಾಲೇಜಿನ ಸಮಸ್ತ ಉಪನ್ಯಾಸಕ ವರ್ಗದವರು ಇದ್ದರು.
ಏಡ್ಸ್ ಜಾಗೃತಿ-ಕ್ಯಾಂಡಲ್ ಜಾಥಾ
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಏಡ್ಸ್ ದಿನದ ನಿಮಿತ್ತ ಕ್ಯಾಂಡಲ್ ಜಾಥಾ ಮತ್ತು ಮೌನಾಚರಣೆ ಕಾರ್ಯಕ್ರಮ ಜರುಗಿತು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ| ಅರುಂಧತಿ ಕುಲಕರ್ಣಿ ಮಾತನಾಡಿ, ಎಚ್‌ಐವಿ ಸೋಂಕಿನಿಂದ ಮರಣ ಹೊಂದಿದವರ ಸಂತಾಪ ಸೂಚಕವಾಗಿ ಶೋಕವ್ಯಕ್ತ ಪಡಿಸಲು ಹಾಗೂ ಅವರಿಗೆ ಚಿರಶಾಂತಿ ಕೋರಲು ಕ್ಯಾಂಡಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ಸೋಂಕಿತರು ಎದೆಗುಂದದೆ ಮಾನಸಿಕ ಸ್ಥೈರ್ಯ ಮತ್ತು ಸದೃಢತೆಯಿಂದ ಜೀವನ ಸಾಗಿಸಲು ಸಂಘ-ಸಂಸ್ಥೆಗಳು ಇಲಾಖೆಯೊಂದಿಗೆ ಕೈಜೋಡಿಸಿ ಶ್ರಮಿಸಬೇಕು ಎಂದು ಹೇಳಿದರು. ಸುಮಿತ್ರಾ ಮಾವಿನಕಾಯಿ ಪ್ರಾರ್ಥಿಸಿದರು. ಬಸವರಾಜ ಲಾಳಗಟ್ಟಿ ಸ್ವಾಗತಿಸಿ, ನಿರೂಪಿಸಿದರು. ಸಂತೋಷ ಬಡಿಗೇರ ವಂದಿಸಿದರು. ಕ್ಯಾಂಡಲ್ ಜಾಥಾದಲ್ಲಿ ಎಆರ್‌ಟಿ ಕೇಂದ್ರದ ಸಿಬ್ಬಂದಿ, ಐಸಿಟಿಸಿ ಸಿಬ್ಬಂದಿ ಇದ್ದರು.