Advertisement

ಮುಂಡಗೋಡ: ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆ ಮತ್ತು ಸಿಬ್ಬಂದಿ ಕೊರತೆ

04:27 PM Jan 10, 2023 | Team Udayavani |

ಮುಂಡಗೋಡ: ಸಕಲ ಸೌಕರ್ಯಗಳಿಂದ ಕೂಡಿದ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ಸಕಾಲದಲ್ಲಿ ಸೇವೆ ಇಲ್ಲದೆ ಬಡ ರೋಗಿಗಳು ಪರದಾಡುವ ಸ್ಥಿತಿ ಬಂದೊದಗಿದೆ.

Advertisement

ದಶಕದ ಹಿಂದೆ ಸೌಲಭ್ಯಗಳ ಕೊರತೆ, ಸೂಕ್ತ ಕಟ್ಟಡವಿಲ್ಲದೇ ಬಳಲುತ್ತಿದ್ದ ತಾಲೂಕು ಸರ್ಕಾರಿ ಆಸ್ಪತ್ರೆ ಇದೀಗ ಎಲ್ಲ ಸೌಲಭ್ಯಗಳ ಜತೆಗೆ 100 ಬೆಡ್‌ ಆಸ್ಪತ್ರೆಯಾಗಿ ಅಭಿವೃದ್ಧಿ ಹೊಂದಿದೆ. ಹಲವು ವೈದ್ಯರ ಸೇವೆ ಲಭ್ಯವಾಗಿದ್ದರೂ, ಈ ಭಾಗಕ್ಕೆ ತೀರಾ ಅಗತ್ಯವಿರುವ ಮೂರು ವೈದ್ಯರ ಹುದ್ದೆ ಮತ್ತು ಸಿಬ್ಬಂದಿ ಕೊರತೆ ಇದೆ.

ಸರ್ಕಾರಿ ಆಸ್ಪತ್ರೆಗೆ ಇದೀಗ 4-5 ವರ್ಷದಲ್ಲಿ ಸಾಕಷ್ಟು ಸೌಲಭ್ಯಗಳು ಬಂದಿದೆ. 100 ಬೆಡ್‌ ಆಸ್ಪತ್ರೆಯಾಗಿ ಪರಿವರ್ತನೆಯಾದ ನಂತರ ಜಿಲ್ಲೆಯಲ್ಲಿಯೇ ಮಾದರಿ ಆಸ್ಪತ್ರೆಯಾಗುತ್ತಿದೆ. ಪ್ರತಿನಿತ್ಯ ನೂರಾರು ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿವಿಧ ರೀತಿ ಶಸ್ತ್ರಚಿಕಿತ್ಸೆ. ಲ್ಯಾಬ್‌, ಇತರ ತುರ್ತು ಸೇವೆಗಳು ಸಿಗುವಂತಾಗಿದೆ.

ಸದ್ಯ 100 ಬೆಡ್‌ಗೆ ಅಗತ್ಯವಿರುವಷ್ಟು ಸಿಬ್ಬಂದಿ ಬರಬೇಕಿದೆ. ಅತಿ ಮುಖ್ಯವಾಗಿ ಗ್ರಾಮೀಣ ಭಾಗದ ಬಡಕೂಲಿಕಾರರು, ಆರ್ಥಿಕ ಸಂಕಷ್ಟದಲ್ಲಿದವರು ಹೃದಯ ರೋಗ, ಡಯಬಿಟಿಸ್‌ನಂಥ ಸಮಸ್ಯೆಯಿಂದ ಸಾಕಷ್ಟು ಜನರು ಬರುತ್ತಿದ್ದಾರೆ. ಮುಖ್ಯವಾಗಿ ಬೇಕಾದ ಫಿಜಿಶಿಯನ್‌ ಇಲ್ಲದೇ ಸಮಸ್ಯೆಯಾಗಿದೆ. ಇನ್ನೂ ಚಿಕ್ಕಮಕ್ಕಳು, ಕಣ್ಣು, ಮತ್ತು ಕಿವಿ ಮೂಗು ಗಂಟಲು ಇತರ ಸಮಸ್ಯೆಯಿಂದ ಸಾಕಷ್ಟು ಜನರು ಬರುತ್ತಿದ್ದು ಅವರಿಗೂ ತಜ್ಞರಿಲ್ಲದೇ ಸಮಸ್ಯೆಯಾಗಿದೆ. ಇನ್ನೂ
ಆಪರೇಶನ ಮಾಡಲು ಬೇಕಾದ ಸರ್ಜನ್‌ ಇಲ್ಲದೇ ಸಮಸ್ಯೆಯಾಗಿದೆ. ಸದ್ಯ ಎನ್‌ಎಚ್‌ಎಂ ಆಧಾರದಲ್ಲಿ ವೈದ್ಯರೊಬ್ಬರು ಕಾರ್ಯನಿರ್ವಹಿಸುತ್ತಿದ್ದರಿಂದ ಅರವಳಿಕೆ ಚಿಕಿತ್ಸೆ ಸಮಸ್ಯೆ ಕಡಿಮೆಯಾಗಿದೆ. ಈ ಆಸ್ಪತ್ರೆಯಲ್ಲಿ ಒಟ್ಟು 11 ವೈದ್ಯರ ಹುದ್ದೆಯಲ್ಲಿ 3 ವೈದ್ಯರು ಹಾಗೂ ಎನ್‌ಎಚ್‌ಎಂ ಆಧಾರದಲ್ಲಿ 2 ವೈದ್ಯರು ಸೇರಿ ಐದು ವೈದ್ಯರ ಇತರ ಸೇವೆ ಲಭ್ಯವಾಗಿದೆ.

ಇದಲ್ಲದೇ ಸಿಬ್ಬಂದಿ ಕೊರತೆಯೂ ಇದೆ. ಕಾರ್ಮಿಕ ಸಚಿವರು ಹಾಗೂ ಆರೋಗ್ಯ ಸಚಿವರು ಆದಷ್ಟು ಬೇಗ ಕಾಯಂ ವೈದ್ಯರನ್ನ ನೇಮಕ ಮಾಡಬೇಕೆಂದು ರೋಗಿಗಳು ಒತ್ತಾಯಿಸಿದ್ದಾರೆ.

Advertisement

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಶ್ರಮದಿಂದ ಇತ್ತೀಚಿನ ಆಧುನಿಕ ತಂತ್ರಜ್ಞಾನದ ಸುಧಾರಣೆಯಿಂದ ತಾಲೂಕು ಆಸ್ಪತ್ರೆ ಖಾಸಗಿ ಆಸ್ಪತ್ರೆಗಳಿಂತ ಒಂದು ಹೆಜ್ಜೆ ಮುಂದೆ ಇದೆ. ಬಡ, ಸಾಮಾನ್ಯ ಮತ್ತು ಎಲ್ಲ ವರ್ಗದ ರೋಗಿಗಳು ವೈದ್ಯರನ್ನು ನಂಬಿ ಇಲ್ಲಿ ಚಿಕಿತ್ಸೆಗೆ ಬರುತ್ತಾರೆ. ಆದರೆ ಸಂಜೆಯಾದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಕೆಲವರು ವಾಪಸ್‌ ಹೋದರೆ ಇನ್ನು ಕೆಲವರು ವೈದ್ಯರು ಬರುವವರೆಗೆ ಕಾಯುತ್ತ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಆದಷ್ಟು ಬೇಗ ವೈದ್ಯರನ್ನು ನೇಮಿಸಿಕೊಳ್ಳಬೇಕು.
ನಾಗರಾಜ ಗುಬ್ಬಕ್ಕನವರ, ರೈತ ಮುಖಂಡ

ವೈದ್ಯರ ಕೊರತೆ ಇದೆ. ತಾಲೂಕಾಸ್ಪತ್ರೆಗೆ ನಿತ್ಯ ನೂರಾರು ರೋಗಿಗಳು ಬರುತ್ತಿದ್ದು, ಎಲ್ಲ ಸೌಲಭ್ಯಗಳು ಇವೆ. ಇದ್ದ ವೈದ್ಯರೆ ಉತ್ತಮ ಸೇವೆ ನೀಡುತ್ತಿದ್ದಾರೆ. ಫಿಜಿಶಿಯನ್‌, ಮಕ್ಕಳ ತಜ್ಞರ ಅಗತ್ಯತೆ ಇದ್ದು, ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಅವಶ್ಯವಿರುವ ಎಂಬಿಬಿಎಸ್‌ ವೈದ್ಯರು ಬಂದರೆ ಇನ್ನು ಹೆಚ್ಚಿನ ಅನುಕೂಲವಾಗಲಿದೆ.
ಡಾ| ಎಸ್‌ ಶಿವಕುಮಾರ,
ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ

*ಮುನೇಶ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next