Advertisement

ನಿವೇಶನ ರಹಿತರ ವಸತಿಗೆ ಪಾಲಿಕೆ ಸಜ್ಜು

12:09 PM Jul 23, 2020 | mahesh |

ತುಮಕೂರು: ನಗರದಲ್ಲಿ ಇಂದಿಗೂ ಅನೇಕ ಜನರು ವಾಸಿಸಲು ಒಂದು ಸೂರಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ನಿವೇಶನ ಮತ್ತು ವಸತಿ ಇಲ್ಲದೇ ಇರುವವರಿಗೆ ಪ್ರಧಾನಿ ಮೋದಿಯವರು 2022 ರೊಳಗೆ ದೇಶದ ಎಲ್ಲರಿಗೂ ವಸತಿ ಎಂಬ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವಸತಿ ಇಲ್ಲದವರಿಗೆ ವಸತಿ ಕಲ್ಪಿಸಲು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದರು.  ನಗರದಲ್ಲಿ ಇಂದಿಗೂ ಅನೇಕ ಕೊಳಗೇರಿಗಳಲ್ಲಿ ಮನೆ ಇಲ್ಲದೇ ನಿವೇಶನವೂ ಇಲ್ಲದೇ ಸಣ್ಣ ಸಣ್ಣ ಗುಡಿಸಲು ಹಾಕಿ ಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ ಅವರಿಗೆ ಸೂರು
ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದ್ದು ಇದಕ್ಕಾಗಿ ಪಾಲಿಕೆಯಲ್ಲಿ ಚಟುವಟಿಕೆ ಚುರುಕಾಗಿದೆ.

Advertisement

ಜಮೀನುಗಳ ತಪಾಸಣೆ: ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನಿವೇಶನ ಮತ್ತು ಮನೆ ಇಲ್ಲದವರ ಸರ್ವೆ ಮಾಡಿದ್ದು ಆ ವೇಳೆಗೆ ಸುಮಾರು 18792 ಜನರು ನಿವೇಶನ ಮತ್ತು ವಸತಿ ಇಲ್ಲ ಎಂದು ನೋಂದಾಯಿಸಿಕೊಂಡಿದ್ದಾರೆ. ಮನೆ ಇಲ್ಲದವರಿಗೆ ಮನೆ ನೀಡಲೇ ಬೇಕು ಎಂದು ಸಂಸದ ಜಿ.ಎಸ್‌.ಬಸವರಾಜ್‌ ಮತ್ತು ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‌ ಕುಮಾರ್‌ ಮತ್ತು ಪಾಲಿಕೆ ಆಯುಕ್ತ ರೇಣುಕಾ, ಮತ್ತಿತರೆ ಅಧಿಕಾರಿಗಳು ದೃಢ ಸಂಕಲ್ಪತೊಟ್ಟಿದ್ದು ಅದಕ್ಕಾಗಿ ಹಲವು ಸಭೆ ನಡೆಸಿದ್ದಾರೆ, ಇದರ ಪರಿಣಾಮ ಈಗ ನಗರಕ್ಕೆ ಹೊಂದಿಕೊಂಡಂತೆ ಇರುವ ಸರ್ಕಾರಿ ಜಮೀನುಗಳ ತಪಾಸಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಯೋಜನೆಯಡಿಯಲ್ಲಿ ನಿವೇಶನ ಮತ್ತು ವಸತಿ ಪಡೆಯಬೇಕಾದರೆ ಫ‌ಲಾನುಭವಿಗಳ ಮತ್ತು ಆತನ ಪತ್ನಿ ಹೆಸರಿನಲ್ಲಿ ಎಲ್ಲಿಯೂ ನಿವೇಶನ ಅಥವಾ ಜಮೀನು ಇರಲೇಬಾರದು ಎಂಬುದು ನಿಯಮವಿದೆ ಎಂದು ತಿಳಿದು ಬಂದಿದೆ.

ಪಟ್ಟಿ ತಪಾಸಣೆ: ಈ ಸಂಬಂಧ ಆಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಡೆಸಿರುವ ಸಭೆಯಲ್ಲಿ ಮೊದಲ ಹಂತವಾಗಿ ನೋದಾಯಿಸಿಕೊಂಡಿರುವವರಲ್ಲಿ ಅರ್ಹ ಫ‌ಲಾನುಭವಿಗಳ ಪಟ್ಟಿ ಅಂತಿಮಗೊಳಿಸಲು ನಿರ್ಣಯ ಮಾಡಲಾಗಿದೆ. ಪ್ರಸ್ತುತ ರಾಜ್ಯ ಸರ್ಕಾರ ಕೋವಿಡ್‌ -19 ಗೆ ಬೂತ್‌ವಾರು ಮತ್ತು ವಾರ್ಡ್ ವಾರು ರಚಿಸಿರುವ ಟಾಸ್ಕ್ ಪೋರ್ಸ್‌ ನಿಂದ ಫ‌ಲಾನುಭವಿಗಳ ತಪಾಸಣೆ ಮಾಡಿಸಲು ಚಿಂತನೆ ನಡೆಸಿದ್ದು, ಮನೆ-ಮನೆ ಸಮೀಕ್ಷೆ ಮಾಡುವಾಗ ವಸತಿ, ನಿವೇಶನ ರಹಿತರ ಪಟ್ಟಿ ತಪಾಸಣೆ ಮಾಡಲಿದ್ದಾರೆ.

ಸಮತಟ್ಟಾದ ಜಮೀನು: ಎರಡನೇ ಹಂತದಲ್ಲಿ ಪಾಲಿಕೆಯ ವ್ಯಾಪ್ತಿ ಸುತ್ತಲೂ ಇರುವ ಸರ್ಕಾರಿ ಭೂಮಿಗಳನ್ನು ಗುರುತಿಸಿ ಜಿಐಎಸ್‌ ಲೇಯರ್‌ ಮಾಡಲು ಕಂದಾಯ ಇಲಾಖೆ ಮುಂದಾಗಿದೆ. ಈಗಾಗಲೇ ಫೈಲಟ್‌ ಆಗಿ ಏಳು ಗ್ರಾಮಗಳಲ್ಲಿ ಸರ್ಕಾರಿ ಜಮೀನುಗಳ ಲೇಯರ್‌ ಮಾಡಲಾಗಿದೆ. ನಗರದ ಸುತ್ತವಿರುವ ಬಹುತೇಕ ಜಮೀನು ಕಲ್ಲು-ಗುಡ್ಡ-
ಬಂಡೆಗಳಿಂದ ಕೂಡಿದೆ. ಸಮತಟ್ಟಾದ ಜಮೀನು ದೊರೆಯುವುದು ಕಷ್ಟವಾಗಿದೆ.

ಆರು ತಿಂಗಳಲ್ಲಿ ನಿವೇಶನ: ನಿವೇಶನ ರಹಿತರಿಗೆ ನಿವೇಶನ ವಸತಿ ಕಲ್ಪಿಸಲು ಹೊಸದಾಗಿ ಬಂದಿರುವ ಪಾಲಿಕೆ ಆಯುಕ್ತರು, ಉಪವಿಭಾಗಾಧಿಕಾರಿಯವರು ಮತ್ತು ತಹಶೀಲ್ದಾರ್‌ ಸೇರಿದಂತೆ ಇತರೆ ಅಧಿಕಾರಿಗಳು ಸುಮಾರು ಆರು ತಿಂಗಳಲ್ಲಿ ನಿವೇಶನ ಮತ್ತು ವಸತಿ ರಹಿತರಿಲ್ಲ ಎಂಬ ಘೋಷಣೆಗೆ ಜಮೀನು ಗುರುತಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದ್ದಾರೆ, ಪಾಲಿಕೆ ಆಯುಕ್ತರು ಈಗಾಗಲೇ ಕಂದಾಯ ಇಲಾಖೆಗೆ ಪತ್ರ ಬರೆಯುವ ಮೂಲಕ ಚಾಲನೆ ನೀಡಿದ್ದಾರೆ.

Advertisement

ತುಮಕೂರು ನಗರದಲ್ಲಿ 18 ಸಾವಿರಕ್ಕೂ ಹೆಚ್ಚು ಜನರು ನಿವೇಶನ ಮತ್ತು ವಸತಿ ಇಲ್ಲ ಎಂದು ಪಾಲಿಕೆಗೆ ಅರ್ಜಿ ಸಲ್ಲಿಸಿದ್ದಾರೆ. ನಿವೇಶನ ಮತ್ತು ವಸತಿ ನೀಡಲು ಸೂಕ್ತವಾಗಿರುವ ಸರ್ಕಾರಿ ಜಮೀನು ಗುರುತಿಸುವ ಕಾರ್ಯ ನಡೆದಿದೆ. ಮುಖ್ಯಮಂತ್ರಿಯವರು ಮತ್ತು ವಸತಿ ಸಚಿವರು ಇದಕ್ಕೆ ಸ್ಪಂದಿಸಿದ್ದಾರೆ. ಶೀಘ್ರವಾಗಿ ಈ ಕಾರ್ಯ ಮಾಡುತ್ತೇವೆ.
ಜಿ.ಬಿ.ಜ್ಯೋತಿಗಣೇಶ್‌, ಶಾಸಕ

ನಗರದಲ್ಲಿ ಇರುವ ವಸತಿ ರಹಿತರಿಗೆ ವಸತಿ ಕಲ್ಪಿಸಲು ಪಾಲಿಕೆಯಿಂದ ಅಗತ್ಯ ಕ್ರಮ ಗಳನ್ನು ಕೈಗೊಳ್ಳಲಾಗುತ್ತಿದೆ. ಮೊದಲು ಜಮೀನಿನ ಅಗತ್ಯತೆ ಇದ್ದು ಈ ಸಂಬಂಧವಾಗಿ ತಹಶೀಲ್ದಾರ್‌ ಅವರಿಗೆ ಪತ್ರ ಬರೆಯಲಾಗಿದೆ. ಆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
● ರೇಣುಕಾ, ಪಾಲಿಕೆ ಆಯುಕ್ತೆ

Advertisement

Udayavani is now on Telegram. Click here to join our channel and stay updated with the latest news.

Next