ಮೈಸೂರು: ಮೈಸೂರು ಮಹಾನಗರ ಪಾಲಿಕೆ ನಿರ್ಗತಿಕರು, ಭಿಕ್ಷುಕರ ಅಭ್ಯುದಯ ಹೆಸರಿನಲ್ಲಿ ಸಂಗ್ರಹಿಸಿದ ಕೊಟ್ಯಂತರ ಶುಲ್ಕವನ್ನು ಸಂಬಂಧಪಟ್ಟ ಸಂಸ್ಥೆಗೆ ಸಕಾಲದಲ್ಲಿ ಪಾವತಿಸದೆ ಪುನರ್ವಸತಿ ಕೇಂದ್ರವನ್ನು ಅತಂತ್ರ ಸ್ಥಿತಿಗೆ ನೂಕಿದೆ.
ಪಾಲಿಕೆ ನಗರದ ನಾಗರಿಕರಿಂದ ಭೂ ಕಂದಾಯ ಸ್ವೀಕಾರ ಮಾಡುವಾಗ ಭಿಕ್ಷುಕರ ಕರ, ಗ್ರಂಥಾಲಯ ಕರವನ್ನು ವಸೂಲಿ ಮಾಡುತ್ತದೆ. ಹೀಗೆ ವಸೂಲಿ ಮಾಡಿದ ಕರವನ್ನು ವರ್ಷಕ್ಕೊಮ್ಮೆ ಸಂಬಂಧಪಟ್ಟ ಸಂಸ್ಥೆಗೆ ಸೇವಾ ವೆಚ್ಚ ಕಡಿತಮಾಡಿಕೊಂಡು ಉಳಿದ ಹಣವನ್ನು ನೀಡಬೇಕು. ಆದರೆ, ಮೈಸೂರು ಮಹಾನಗರ ಪಾಲಿಕೆ ಕಳೆದ 6-7 ವರ್ಷದಿಂದ ಜನರಿಂದ ಸಂಗ್ರಹಿಸಿದ ಭಿಕ್ಷುಕರ ಕರವನ್ನು ಸಕಾಲಕ್ಕೆ ಪಾವತಿಸದೇ ನಿರ್ಗತಿಕರು ಹಾಗೂ ಭಿಕ್ಷುಕರ ಪುನರ್ವಸತಿ ಕೇಂದ್ರವನ್ನು ಅತಂತ್ರ ಸ್ಥಿತಿಗೆ ದೂಡಿದೆ.
ಸಾಮಾಜಿಕವಾಗಿ ಬೇರ್ಪಟ್ಟ ನಿರ್ಗತಿಕರು ಹಾಗೂಭಿಕ್ಷುಕರ ಅಭ್ಯುದಯಕ್ಕಾಗಿ ಹಾಗೂ ಭಿಕ್ಷಾಟನೆ ನಿರ್ಮೂಲನೆ ಉದ್ದೇಶದಿಂದ ರಾಜ್ಯದ 14 ಜಿಲ್ಲೆಗಳಲ್ಲಿ ಸರ್ಕಾರ ಪುನರ್ವಸತಿ ಕೇಂದ್ರಗಳನ್ನು ನಡೆಸುತ್ತಿದೆ. ಈ ಕೇಂದ್ರಗಳಿಗೆ ವಿವಿಧ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುವ ಭಿಕ್ಷುಕರ ಕರವೇ ಆದಾಯ ಮೂಲವಾಗಿದೆ. ಒಂದು ವೇಳೆ ಸ್ಥಳೀಯ ಸಂಸ್ಥೆಗಳು ಸಕಾಲದಲ್ಲಿ ಸಂಗ್ರಹಿಸಿದ ಶುಲ್ಕವನ್ನು ಪಾವತಿಸದಿದ್ದರೆ, ಪುನರ್ವಸತಿ ಕೇಂದ್ರಗಳಲ್ಲಿ ಆಹಾರ, ವಸತಿ, ಆರೋಗ್ಯ ಮತ್ತು ನಿರ್ವಹಣೆಗೆ ತೊಡಕಾಗಲಿದೆ. ಕೆಲವೊಮ್ಮೆ ಈ ಕೇಂದ್ರಗಳನ್ನು ಮುಚ್ಚುವ ಪರಿಸ್ಥಿತಿಯೂ ಉದ್ಭವಿಸುತ್ತದೆ. ಈಗ ಮೈಸೂರಿನಲ್ಲಿರುವ ಕೇಂದ್ರದ ಸ್ಥಿತಿಯೂ ಇದೆ ಆಗಿದೆ.
ಹೈಕೋರ್ಟ್ ನಿರ್ದೇಶನಕ್ಕೂ ಬೆಲೆಯಿಲ್ಲ: ಭಿಕ್ಷುಕರ ಹೆಸರಲ್ಲಿ ಸಂಗ್ರಹಿಸುವ ಕರದಲ್ಲಿ ಪಾಲಿಕೆಯೂ ಸೇವಾ ವೆಚ್ಚ ಎಂದು ಶೇ.10ರಷ್ಟು ಹಣವನ್ನು ಇಟ್ಟುಕೊಂಡು ಉಳಿದ ಹಣವನ್ನು ಕಾರ್ಯದರ್ಶಿ ಪುನರ್ವಸತಿ ಪರಿಹಾರ ಸಮಿತಿಗೆ ನೀಡಬೇಕು. ಸಕಾಲದಲ್ಲಿ ಈ ಹಣ ಪಾವತಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಯನ್ನುಜವಾಬ್ದಾರರನ್ನಾಗಿ ಮಾಡಿ, ಶಿಸ್ತುಕ್ರಮ ಕೈಗೊಳ್ಳಲು ರಾಜ್ಯ ಹೈಕೋರ್ಟ್, ಲೋಕಾಯುಕ್ತ ಈ ಹಿಂದೆ ನಿರ್ದೇಶನ ನೀಡಿದೆ. ಹೀಗಿದ್ದರೂ ಮೈಸೂರು ಮಹಾನಗರ ಪಾಲಿಕೆ ನ್ಯಾಯಾಲಯದ ನಿರ್ದೇಶನವನ್ನು ಗಾಳಿಗೆ ತೂರಿದೆ. ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹವಾದ ಕರ ಪುನರ್ವಸತಿ ಕೇಂದ್ರ ಪರಿಹಾರ ಸಮಿತಿಗೆ ತಲುಪುತ್ತದೆ. ಬಳಿಕ ಎಲ್ಲಾ ಹಣವನ್ನು ಕ್ರೋಢಿಕರಿಸಿ, ರಾಜ್ಯದ 14 ಪುನರ್ವಸತಿ ಕೇಂದ್ರಗಳಿಗೆ ಬೇಡಿಕೆಗೆ ಅನುಗುಣವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. ಮೈಸೂರಿನಲ್ಲಿರುವ ಕೇಂದ್ರ ನಿರ್ವಹಣೆಗೆ ಪ್ರತಿವರ್ಷ 1ರಿಂದ 2 ಕೋಟಿ ಹಣಬೇಕು. ಅದರಂತೆ ಮೈಸೂರು ಮಹಾನಗರ ಪಾಲಿಕೆಯೂ ವರ್ಷಕ್ಕೆ 2 ಕೋಟಿಯಷ್ಟು ಭಿಕ್ಷುಕರ ಕರವನ್ನು ಸಂಗ್ರಹಿಸುತ್ತದೆ. ಆದರೆ, ಸರಿಯಾದ ಸಮಯಕ್ಕೆ ನಮಗೆ ದಕ್ಕಬೇಕಿರುವಷ್ಟು ಹಣವನ್ನು ಸಂದಾಯ ಮಾಡುತ್ತಿಲ್ಲ ಎಂದು ಪುನರ್ವಸತಿ ಕೇಂದ್ರದ ಅಧೀಕ್ಷಕರ ಮಾತಾಗಿದೆ.
10 ಕೋಟಿಗೂ ಹೆಚ್ಚು ಬಾಕಿ : ನಂಬರ್ ಒನ್ ಸ್ವಚ್ಛನಗರಿ ಎಂಬ ಪಟ್ಟದಲ್ಲಿರುವ ಮೈಸೂರು ಮಹಾನಗರ ಪಾಲಿಕೆ ಸ್ವತ್ಛ, ಪಾರದರ್ಶಕ ಆಡಳಿತ ನೀಡುವಲ್ಲಿ ಎಡವಿದೆಯಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಕಾರಣ, ಭಿಕ್ಷುಕರ ಹೆಸರಲ್ಲಿ ಪಾಲಿಕೆ ಸ್ವೀಕರಿಸುತ್ತಿರುವ ಶುಲ್ಕ ಇನ್ನೂ ತಲುಪಿಲ್ಲ. ಈವರೆಗೆ 10 ಕೋಟಿಗೂ ಹೆಚ್ಚು ಹಣವನ್ನು ಪಾಲಿಕೆ ಬಾಕಿ ಉಳಿಸಿಕೊಂಡಿದ್ದು, 2020ರಲ್ಲಿ 75 ಲಕ್ಷ ರೂ. ಹಣವನ್ನು ಮಾತ್ರ ನೀಡಿ, ಉಳಿದ ಹಣವನ್ನು ತನ್ನ ಇತರೆ ಕಾಮಗಾರಿಗಳಿಗೆ ವಿನಿಯೋಗಿಸುವ ಮೂಲಕ ದುರುಪಯೋಗಮಾಡಿಕೊಂಡಿದೆ. ಜೊತೆಗೆ ಪಾರಂಪರಿಕ ಶುಲ್ಕವನ್ನು ಸಂಗ್ರಹಿಸುವ ಬಗ್ಗೆ ಚಿಂತನೆ ನಡೆಸಿದೆ. ಆದರೆ, ಈ ಹಿಂದೆ ವಸೂಲಿ ಮಾಡುತ್ತಿರುವ ಕರವನ್ನು ಸಮರ್ಪಕವಾಗಿ ಪಾವತಿ ಮಾಡುವಲ್ಲಿ ಹಿಂದೆ ಬಿದ್ದಿರುವುದಕ್ಕೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.
ಕೋವಿಡ್ ದಿಂದ ಹೆಚ್ಚಿದ ನಿರ್ಗತಿಕರು : ಕೋವಿಡ್ ದಿಂದ ಮೈಸೂರಲ್ಲಿ ಭಿಕ್ಷುಕರು, ನಿರ್ಗತಿಕರ ಸಂಖ್ಯೆ ದ್ವಿಗುಣವಾಗಿದೆ. ಸೋಂಕಿನ ಭೀತಿಯಿಂದ ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ಹೊಸದಾಗಿ ದಾಖಲಿಸಿಕೊಳ್ಳದ ಪರಿಣಾಮ ಈ ಸಮಸ್ಯೆ ಹೆಚ್ಚಾಗಿದೆ. ಪರಿಣಾಮ ಪುನರ್ವಸತಿ ಕೇಂದ್ರಕ್ಕೂ ಹೋಗಲಾಗದೇ, ಸ್ಥಳೀಯ ಸಂಸ್ಥೆಗಳ ಸಹಕಾರವೂ ಇಲ್ಲದೆ ನೂರಾರು ಮಂದಿ ಬೀದಿಯಲ್ಲೆ ಉಳಿದಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಭಿಕ್ಷುಕರ ಕರ ವಸೂಲಿ ಮಾಡುತ್ತದೆ. ಬಳಿಕ ತನ್ನ ಸೇವಾ ವೆಚ್ಚ ಹಿಡಿದುಕೊಂಡು ಉಳಿದ ಹಣವನ್ನು ನಮಗೆ ನೀಡಬೇಕು. ಆದರೆ, ಕಳೆದ 6-7 ವರ್ಷದಿಂದ ನೀಡಿಲ್ಲ. ಸುಮಾರು 10 ಕೋಟಿಗೂ ಹೆಚ್ಚು ಹಣವನ್ನು ಪಾಲಿಕೆ ನೀಡಬೇಕಿದೆ. ಮನವಿ ಮಾಡಿದ್ದರೂ ಸೂಕ್ತ ಸ್ಪಂದನೆ ಇಲ್ಲ.
– ಸಿ.ಬಿ. ಗೋಕಾಕ್, ಮುಖ್ಯ ಅಧೀಕ್ಷಕರು ನಿರಾಶ್ರಿತರ ಪರಿಹಾರ ಕೇಂದ್ರ
ಪಾಲಿಕೆಯಿಂದ ಆಸ್ತಿ ತೆರಿಗೆ ವಸೂಲಿ ಮಾಡುವ ಜತೆಗೆ ಇತರೆ ಶುಲ್ಕವನ್ನು ಪಡೆಯುತ್ತೇವೆ. ಬಳಿಕ ಸಂಬಂಧಪಟ್ಟ ಇಲಾಖೆಗಳಿಗೆನೀಡುತ್ತೇವೆ. ಭಿಕ್ಷುಕರ ಸೆಸ್ ಬಾಕಿ ಉಳಿಸಿಕೊಂಡಿರುವ ಬಗ್ಗೆ ಹಣಕಾಸು ಇಲಾಖೆಯೊಂದಿಗೆ ಮಾತ ನಾಡಿ, ಬಳಿಕ ಸಂದಾಯ ಮಾಡಲಾಗುವುದು.
-ಎನ್.ಎಂ. ಶಶಿಕುಮಾರ್, ಸಹಾಯಕ ಆಯುಕ್ತ, ಮಹಾನಗರ ಪಾಲಿಕೆ ಮೈಸೂರು.
–ಸತೀಶ್ ದೇಪುರ