ಮುಂಬಯಿ: ಮುಂಬಯಿ ವಿಶ್ವವಿದ್ಯಾನಿಲಯದ 2021 ಘಟಿಕೋ ತ್ಸವ ಸಮಾರಂಭವು ಡಿ. 27ರಂದು ಫೋರ್ಟ್ ಕ್ಯಾಂಪಸ್‌ನ ಜಹಾಂಗೀರ್ ಹಾಲ್‌ನಲ್ಲಿ ಅದ್ದೂರಿಯಾಗಿ ನೆರ ವೇರಿತು. ಕನ್ನಡ ವಿಭಾಗದ 2019- 2020ನೇ ಸಾಲಿನ ಎಂಎ ರ್‍ಯಾಂಕ್ ವಿಜೇತ ವಿದ್ಯಾರ್ಥಿನಿ ಪಾರ್ವತಿ ಪೂಜಾರಿ ಮತ್ತು 2020-2021ನೇ ಸಾಲಿನ ಎಂಎ ರ್‍ಯಾಂಕ್ ವಿಜೇತ ವಿದ್ಯಾರ್ಥಿನಿ ಕಲಾ ಭಾಗ್ವತ್ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರತಿಷ್ಠಿತ ಎಂ. ಬಿ. ಕುಕ್ಯಾನ್ ಸುವರ್ಣ ಪದಕವನ್ನು ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಹಾರಾಷ್ಟ್ರದ ರಾಜ್ಯಪಾಲ ಹಾಗೂ ಕುಲಪತಿ ಭಗತ್ ಸಿಂಗ್ ಕೋಶ್ಯಾರಿ ಅವರು ಪದಕ ಹಾಗೂ ಪ್ರಮಾಣ ಪತ್ರ ನೀಡಿದರು. ಅತಿಥಿಯಾಗಿದ್ದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಓಶಿಯಾನೋಗ್ರಫಿ ಗೋವಾ ಇದರ ನಿರ್ದೇಶಕ ಪ್ರೊ| ಸುನೀಲ್ ಕುಮಾರ್ ಸಿಂಗ್ ಮಾತನಾಡಿ, ಕಲಿಕೆ ಎಂದಿಗೂ ನಿಲ್ಲಬಾರದು. ಗಳಿಸಿದ ಜ್ಞಾನವು ಅಂತಿಮವಾಗಿ ವೈಯಕ್ತಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯ ಮತ್ತು ಸಂತೋಷಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಗಳಿಗೆ ಅನೇಕ ಸವಾಲುಗಳನ್ನು ಎದುರಿಸುವ ಹಾಗೂ ಜಯಿಸುವ ಕೌಶಲ ಮತ್ತು ಜ್ಞಾನವನ್ನು ಮುಂಬಯಿ ವಿವಿ ನೀಡಿದೆ. ಇದನ್ನು ಪಡೆದ ಎಲ್ಲರೂ ಮಹತ್ವಾಕಾಂಕ್ಷೆ ಯಿಂದ ಆದರ್ಶವಾಗಿ ಮುನ್ನಡೆಯ ಬೇಕು ಎಂದು ಕರೆ ನೀಡಿದರು.
ಐತಿಹಾಸಿಕ ಮಹತ್ವವಿರುವ ಮುಂಬಯಿ ವಿವಿಯಲ್ಲಿ ಅನೇಕ ಮಹಾಪುರುಷರು ವಿದ್ಯಾರ್ಜನೆ ಮಾಡಿ ತ್ಯಾಗ-ಬಲಿದಾನ, ವಿಜ್ಞಾನ, ಕಲೆ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ದೇಶಕ್ಕೆ ಮಹತ್ವದ ಕೊಡುಗೆ ನೀಡಿರುತ್ತಾರೆ. ಈ ವಿವಿಯಲ್ಲಿ ಕಲಿತು ಸಾಧನೆ ಮಾಡಿ ರುವುದು ಅಭಿಮಾನದ ಸಂಗತಿ ಎಂದು ರಾಜ್ಯಪಾಲರು ಶುಭ ಹಾರೈಸಿದರು.
ವಿವಿ ಉಪ ಕುಲಪತಿ ಪ್ರೊ| ಸುಹಾಸ್ ಪೆಡ್ನೇಕರ್ ಅವರು ಕೊರೊನಾ ದುರಿತ ಕಾಲದಲ್ಲಿಯೂ ವಿವಿಯ ಚಟುವಟಿಕೆಗಳನ್ನು ಸಶಕ್ತವಾಗಿ ನಿಭಾ ಯಿಸಿದ ಎಲ್ಲ ವಿಭಾಗಗಳನ್ನೂ ಶ್ಲಾಘಿಸಿ ಅಭಿನಂದಿಸಿದರು. ಪ್ರವಾಸೋದ್ಯಮ ಹಾಗೂ ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ, ಸಹ ಕುಲಪತಿ ಪ್ರೊ| ರವೀಂದ್ರ ಕುಲಕರ್ಣಿ, ಉಪ ಕುಲಸಚಿವ ರಾಜೇಂದ್ರ ಪಗಾರೆ, ಪರೀಕ್ಷಾ ಮಂಡಳಿಯ ಸಂಚಾ ಲಕ ವಿನೋದ್ ಪಾಟೀಲ್, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ| ಜಿ. ಎನ್. ಉಪಾಧ್ಯ, ವಿವಿ ಆಡಳಿತ
ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಚಿದಾನಂದ ಭಾಗ್ವತ್, ದೀಪಾ ಪೂಜಾರಿ ಮತ್ತಿತರರಿದ್ದರು.
ಅಪಾರ ಪರಿಶ್ರಮ, ಮನೆಯಲ್ಲಿ ಪೂರಕ ವಾತಾವರಣ ಇವೆಲ್ಲದರ ಜತೆಗೆ ಕನ್ನಡ ವಿಭಾಗ ನೀಡಿದ ವಿಷಯ ಜ್ಞಾನ, ನಿರಂತರ ಪ್ರೋತ್ಸಾಹ, ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಅದು ವಹಿಸಿದ ಶ್ರಮ ಹಾಗೂ ತರಬೇತಿಯು ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ಅದರಿಂದಲೇ ಈ ಹಂತ ತಲುಪಲು ಸಾಧ್ಯವಾಯಿತು ಎಂಬುದಾಗಿ ಪಾರ್ವತಿ ಪೂಜಾರಿ, ಕಲಾ ಭಾಗ್ವತ್ ತಮ್ಮ ಅನಿಸಿಕೆ ಹಂಚಿಕೊಂಡರು. ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥರಾದ ಪ್ರೊ| ಜಿ. ಎನ್. ಉಪಾಧ್ಯ ಅವರು ಇಬ್ಬರೂ ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು.