ಅಹ್ಮದಾಬಾದ್/ಮುಂಬಯಿ: ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಕರಾವಳಿಗಳಲ್ಲಿ ರೌದ್ರಾವತಾರ ತೋರಿ, ಅಪಾರ ಪ್ರಮಾಣದ ಹಾನಿ ಉಂಟುಮಾಡಿದ ತೌಖ್ತೇ ಚಂಡಮಾರುತ ಮಂಗಳವಾರ ದುರ್ಬಲಗೊಂಡಿದೆ.
ಸೋಮವಾರ ರಾತ್ರಿ ಗುಜರಾತ್‌ಗೆ ಅಪ್ಪಳಿಸಿದ್ದ ಸೈಕ್ಲೋನ್ ಕನಿಷ್ಠ 12 ಮಂದಿಯನ್ನು ಬಲಿಪಡೆದುಕೊಂಡಿದೆ. ಮುಂಬಯಿಯಲ್ಲೂ ಮಂಗಳವಾರ ಮಳೆ ಮುಂದುವರಿದಿದ್ದು, ಚಂಡಮಾರುತ ಸಂಬಂಧಿ ಘಟನೆಗಳಿಂದ ಮೂವರು ಸಾವಿಗೀಡಾಗಿದ್ದಾರೆ.
96 ಮಂದಿ ನಾಪತ್ತೆ: ಚಂಡಮಾರುತದ ಅಬ್ಬರಕ್ಕೆ ಮುಂಬಯಿ ಕರಾವಳಿಯಾಚೆ ಸಿಲುಕಿದ್ದ ನೌಕೆಯೊಂದರಿಂದ 177 ಮಂದಿಯನ್ನು ನೌಕಾಪಡೆಯು ಮಂಗಳವಾರ ರಕ್ಷಿಸಿದೆ. ಈ ಹಡಗಿನಲ್ಲಿ 273ಕ್ಕೂ ಹೆಚ್ಚು ಮಂದಿ ಇದ್ದರು ಎಂದು ಹೇಳಲಾಗಿದೆ. 96 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇದು ನೌಕಾಪಡೆ ನಡೆಸುತ್ತಿರುವ ಅತ್ಯಂತ ಸವಾಲಿನ ಕಾರ್ಯಾಚರಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ 2 ಬಾರ್ಜ್‌ಗಳಲ್ಲಿದ್ದವರನ್ನೂ ನೌಕಾ ಪಡೆ ರಕ್ಷಿಸಿ ತೀರಕ್ಕೆ ಕರೆ ತಂದಿದೆ. ಇದೇ ವೇಳೆ, ಗುಜರಾತ್ ಕರಾವಳಿಯಾಚೆ ಎರಡು ಹಡಗುಗಳಲ್ಲಿ ಸಿಲುಕಿದ್ದ 16 ಮಂದಿಯನ್ನು ಕರಾವಳಿ ರಕ್ಷಕ ಪಡೆಯು ರಕ್ಷಿಸಿದೆ.
ಮುಂಬಯಿಯಲ್ಲಿ 3 ಸಾವು, 10 ಮಂದಿಗೆ ಗಾಯ: ತೌಖ್ತೇ ಚಂಡಮಾರುತವು ಮುಂಬಯಿ ಕರಾವಳಿ ಹಾದು ಹೋಗುವ ವೇಳೆ ಸಂಭವಿಸಿದ ಅವಘಡಗಳಿಗೆ ಮೂರು ಮಂದಿ ಬಲಿಯಾಗಿ, 10 ಮಂದಿ ಗಾಯಗೊಂಡಿದ್ದಾರೆ. ಪಾಲ್ಗರ್ ನಲ್ಲಿ ಇಬ್ಬರು ಹಾಗೂ ಥಾಣೆಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ಸೈಕ್ಲೋನ್‌ನ ಪ್ರಭಾವದಿಂದ ಮಂಗಳವಾರವೂ ಮುಂಬಯಿ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ನಿರಂತರ ಮಳೆಯಾಗಿದೆ. ಗಂಟೆಗೆ 80-90 ಕಿ.ಮೀ. ವೇಗದಲ್ಲಿ ಗಾಳಿಯೂ ಬೀಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆ ಹಾಗೂ ದೈತ್ಯ ಅಲೆಗಳಿಂದಾಗಿ ಗೇಟ್‌ವೇ ಆಫ್ ಇಂಡಿಯಾದ ಕಬ್ಬಿಣದ ಗೇಟುಗಳು ಹಾಗೂ ಸುರಕ್ಷತ ಗೋಡೆ ಹಾನಿಗೀಡಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಮುಂಬಯಿ ಮಳೆ ಸಾರ್ವಕಾಲಿಕ ದಾಖಲೆ: 24 ಗಂಟೆಗಳ ಅವಧಿಯಲ್ಲಿ ಮುಂಬಯಿಯಲ್ಲಿ 230 ಮಿ.ಮೀ. ಮಳೆಯಾಗಿದ್ದು, ಮೇ ತಿಂಗಳಲ್ಲಿ ಒಂದೇ ದಿನ ಇಷ್ಟೊಂದು ಮಳೆಯಾಗಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 204.5 ಮಿ.ಮೀ.ಗಿಂತ ಹೆಚ್ಚು ಮಳೆಯಾದರೆ ಅದನ್ನು “ಅತ್ಯಧಿಕ ಮಳೆ’ ಎಂದು ಪರಿಗಣಿಸಲಾಗುತ್ತದೆ.