ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 192.83 ಅಂಕಗಳ ಏರಿಕೆಯೊಂದಿಗೆ ಕಳೆದ ಐದು ತಿಂಗಳ ಗರಿಷ್ಠ ಸಮಾಪನ ಅಂತ್ಯವಾಗಿ 28,661.58 ಅಂಕಗಳ ಮಟ್ಟಕ್ಕೇರಿ ಹೊಸ ಭರವಸೆಯೊಂದಿಗೆ ಕೊನೆಗೊಳಿಸಿತು.
ಇದೇ ರೀತಿಯ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 57.50 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 8,879.20 ಅಂಕಗಳ ಮಟ್ಟದಲ್ಲಿ ಸಮಾಪನಗೊಳಿಸಿತು.
ಕಳೆದ ವರ್ಷ ಸೆಪ್ಟಂಬರ್ 23ರಂದು ಸೆನ್ಸೆಕ್ಸ್ 28,668.22 ಅಂಕಗಳ ಮಟ್ಟವನ್ನು ಏರಿತ್ತು. ಅನಂತರದಲ್ಲಿ ಇಂದು ಮೊದಲ ಬಾರಿಗೆ, ಐದು ತಿಂಗಳ ಬಳಿಕ, ಸೆನ್ಸೆಕ್ಸ್ ಅಂದಿನ ಎತ್ತರವನ್ನು ದಾಟಿ ಮುನ್ನುಗ್ಗಿತು.
ದೇಶದ ಅಗ್ರ ಸಾಫ್ಟ್ ವೇರ್ ಸೇವಾ ಸಂಸ್ಥೆಯಾಗಿರುವ ಟಿಸಿಎಸ್ ಕಂಪೆನಿಯ ನಿರ್ದೇಶಕರ ಮಂಡಳಿ ಇಂದು ತಲಾ 2,850 ರೂ. ದರದಲ್ಲಿ 16,000 ಕೋಟಿ ರೂ. ಮೌಲ್ಯದ ಶೇರುಗಳನ್ನು ತನ್ನ ಶೇರುದಾರರಿಂದು ಮರು ಖರೀದಿಸುವ ಯೋಜನೆಗೆ ಅನುಮೋದನೆ ನೀಡಿತು.
ಈ ಹಿನ್ನೆಲೆಯಲ್ಲಿ ಟಿಸಿಎಸ್ ಶೇರು ಶೇ.4ರಷ್ಟು ಏರಿತು. ಇದನ್ನು ಅನುಸರಿಸಿ ಇನ್‌ಫೋಸಿಸ್ ಶೇರು ಕೂಡ ಏರುಗತಿಯನ್ನು ಕಂಡಿತು. ಹಾಗೆಯೇ ಎಚ್ ಡಿ ಎಫ್ ಸಿ ಬ್ಯಾಂಕ್ ಶೇರು ಉತ್ತಮ ಧಾರಣೆಯನ್ನು ಪಡೆದುಕೊಂಡಿತು.