ಮುಂಬಯಿ : ಇಂದು ಮಂಗಳವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 65 ಅಂಕಗಳ ಮುನ್ನಡೆಯನ್ನು ಕಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ , ಬೆಳಗ್ಗೆ 10.45ರ ಸುಮಾರಿಗೆ ತನ್ನ ಆರಂಭಿಕ ಗಳಿಕೆಯನ್ನು ಬಿಟ್ಟುಕೊಟ್ಟು 17.19 ಅಂಕಗಳ ನಷ್ಟಕ್ಕೆ ಗುರಿಯಾಗಿ 28,644.39 ಅಂಕಗಳ ಮಟ್ಟಕ್ಕೆ ಜಾರಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 0.70 ಅಂಕಗಳ ನಷ್ಟಕ್ಕೆ ಗುರಿಯಾಗಿ 8,878.50 ಅಂಕಗಳ ಮಟ್ಟಕ್ಕೆ ಇಳಿಯಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಮಿಡ್ ಕ್ಯಾಪ್ ಶೇರುಗಳು ಉತ್ತಮ ನಿರ್ವಹಣೆ ತೋರಿದರೆ ಐಟಿಸಿ ಕೆಳಮಟ್ಟಕ್ಕೆ ಕುಸಿಯಿತು.
ಜಾಗತಿಕ ಹಾಗೂ ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿನ ಧನಾತ್ಮಕ ಅಂಶಗಳಿಂದ ಪ್ರೇರಿತವಾದ ಮುಂಬಯಿ ಶೇರು ಪೇಟೆ ಇಂದು ಆರಂಭಿಕ ವಹಿವಾಟಿನಲ್ಲಿ ಉತ್ತರ ರಾಲಿಯನ್ನು ಕಂಡಿತಾದರೂ ಒಂದೂವರೆ ತಾಸಿನ ಬಳಿಕ ಕುಸಿತದ ಹಾದಿಯನ್ನು ಹಿಡಿಯಿತು.
ಏಶ್ಯನ್ ಶೇರುಮಾರುಕಟ್ಟೆಗಳ ಪೈಕಿ ಜಪಾನಿನ ನಿಕ್ಕಿ ಶೇ.0.46, ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.0.4 ರಷ್ಟು ಏರಿಕೆಯನ್ನು ದಾಖಲಿಸಿದವು. ಅಮೆರಿಕ ಶೇರು ಮಾರುಕಟ್ಟೆ ನಿನ್ನೆ ಸೋಮವಾರ ಸಾರ್ವಜನಿಕ ರಜಾ ದಿನದ ಪ್ರಯುಕ್ತ ಮುಚ್ಚಿತ್ತು.