ಮುಂಬೈ: ನಟ ಸಲ್ಮಾನ್ ಖಾನ್ (Salman Khan) ಅವರು ಬಿಗ್ ಬಾಸ್ 18 ರ (Bigg Boss 18) ಚಿತ್ರೀಕರಣವನ್ನು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಸಾವಿನ ಸುದ್ದಿಯನ್ನು ಕೇಳಿದ ಹಠಾತ್ತನೆ ಸ್ಥಗಿತಗೊಳಿಸಿದ್ದಾರೆ. ಕಾರ್ಯಕ್ರಮದ ಶೂಟಿಂಗ್ ನಲ್ಲಿದ್ದ ನಟ, ಮುಂಬೈನ ಲೀಲಾವತಿ ಆಸ್ಪತ್ರೆಗೆ ಧಾವಿಸಿದರು, ಅಲ್ಲಿ ಸಿದ್ದಿಕ್ ಚಿಕಿತ್ಸೆ ಪಡೆಯುತ್ತಿದ್ದರು.
ಮುಂಬೈನ ಬಾಂದ್ರಾ ಪೂರ್ವದಲ್ಲಿರುವ ಅವರ ಶಾಸಕ ಪುತ್ರ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಶನಿವಾರ (ಅ.12) ರಾತ್ರಿ 66 ವರ್ಷದ ಬಾಬಾ ಸಿದ್ದಿಕಿ ಮೇಲೆ ದಾಳಿ ನಡೆಸಲಾಯಿತು. ಗಾಯಗೊಂಡಿದ್ದ ಅವರು ಚಿಕಿತ್ಸೆಯ ಫಲಕಾರಿಯಾಗದೆ ಸಾವನ್ನಪ್ಪಿದರು.
ಬಾಬಾ ಸಿದ್ದಿಕ್ ಜೊತೆ ನಿಕಟ ಸಂಬಂಧ ಹೊಂದಿದ್ದ ಸಲ್ಮಾನ್ ಮಧ್ಯರಾತ್ರಿ 12:30 ರ ಸುಮಾರಿಗೆ ಲೀಲಾವತಿ ಆಸ್ಪತ್ರೆಗೆ ಆಗಮಿಸಿದರು. ಬಾಲಿವುಡ್ ನ ದೊಡ್ಡ ತಾರೆಯರನ್ನು ಹೆಚ್ಚಾಗಿ ಒಟ್ಟುಗೂಡಿಸುವ ಸಿದ್ದಿಕಿ ಅವರ ಹೆಸರಾಂತ ವಾರ್ಷಿಕ ಇಫ್ತಾರ್ ಪಾರ್ಟಿಗಳಲ್ಲಿ ನಟ ಸಲ್ಮಾನ್ ನಿಯಮಿತವಾಗಿ ಪಾಲ್ಗೊಳ್ಳುತ್ತಿದ್ದರು.
ತನ್ನ ರಾಜಕೀಯ ಪರಂಪರೆ ಮತ್ತು ಸಾಮಾಜಿಕ ಪ್ರಭಾವಕ್ಕೆ ಹೆಸರುವಾಸಿಯಾಗಿರುವ ಬಾಬಾ ಸಿದ್ದಿಕಿ, ಬಾಲಿವುಡ್‌ನ ಅತ್ಯಂತ ಕುಖ್ಯಾತ ದ್ವೇಷವನ್ನು ಸರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2013 ರಲ್ಲಿ, ಅವರು ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಐದು ವರ್ಷಗಳ ವೈರತ್ವ ಮರೆಯಿಸಿ ಒಂದಾಗಿಸಿದರು. ಸಲ್ಮಾನ್- ಶಾರುಖ್ ವೈರತ್ವ ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಜಗಳದ ನಂತರ ಪ್ರಾರಂಭವಾಗಿತ್ತು. 2013ರ ಅವರ ಇಫ್ತಾರ್ ಕೂಟದಲ್ಲಿ ಇಬ್ಬರು ಸೂಪರ್ ಸ್ಟಾರ್ ಗಳು ಮತ್ತೆ ಒಂದಾದರು.
ಹತ್ಯೆಯಾದ ಬಾಬಾ ಸಿದ್ದಿಕಿ ಅವರು ಬಾಂದ್ರಾ (ಪಶ್ಚಿಮ) ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕಾರಾಗಿ ಆಯ್ಕೆಯಾಗಿದ್ದರು. ಮುಂಬೈನ ಪ್ರಮುಖ ವ್ಯಕ್ತಿಯಾಗಿದ್ದ ಅವರು 2004ರಿಂದ 2008ರವರೆಗೆ ವಿಲಾಸ್‌ರಾವ್ ದೇಶ್‌ಮುಖ್ ಸರ್ಕಾರದಲ್ಲಿ ಸಚಿವರಾಗಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅವರು ಕಾಂಗ್ರೆಸ್ ತೊರೆದು ಅಜಿತ್ ಪವಾರ್ ಅವರ ಎನ್ ಸಿಪಿಗೆ ಸೇರ್ಪಡೆಯಾಗಿದ್ದರು.