ಮುಂಬಯಿ: ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಶನಿವಾರ(ಜೂನ್ 12) ಮುಂಬೈ ನಗರಿಯಲ್ಲಿ ಸ್ಥಳೀಯ ರೈಲು ಮತ್ತು ಬಸ್ ಸಂಚಾರ ಸ್ಥಗಿತಗೊಂಡಿರುವುದಾಗಿ ವರದಿ ತಿಳಿಸಿದೆ. ಭಾರೀ ಗಾಳಿ, ಮಳೆಯಿಂದಾಗಿ ರೈಲು ಹಳಿ ಮತ್ತು ರಸ್ತೆಗಳೆಲ್ಲಾ ಜಲಾವೃತಗೊಂಡಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:‘ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ’:ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ
ರೈಲು ಹಳಿಗಳು ನೀರಿನಿಂದ ತುಂಬಿಕೊಂಡ ಹಿನ್ನೆಲೆಯಲ್ಲಿ ದಾದರ್ ಮತ್ತು ಕುರ್ಲಾ ರೈಲು ನಿಲ್ದಾಣದ ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ವಕ್ತಾರರು ತಿಳಿಸಿದ್ದಾರೆ. ಜಲಾವೃತಗೊಂಡ ಕೆಲವು ಪ್ರದೇಶಗಳಿಂದ ಬಸ್ ಗಳನ್ನು ಬೇರೆ ಮಾರ್ಗದತ್ತ ಸಂಚರಿಸಿರುವುದಾಗಿ ಬೃಹನ್ಮುಂಬಯಿ ವಿದ್ಯುತ್ ಸರಬರಾಜು ಮತ್ತು ಸಾರಿಗೆ(ಬೆಸ್ಟ್) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮುಂಬಯಿ ಸೇರಿದಂತೆ ಕೊಂಕಣ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಶನಿವಾರ ಬೆಳಗ್ಗೆ ಭಾರತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು.
ಇಂದು ಮುಂಬಯಿ ನಗರದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಸಮುದ್ರ ಪ್ರದೇಶ ಸಮೀಪ ಯಾರೂ ತೆರಳದಂತೆ ಹಾಗೂ ಮನೆಯಲ್ಲಿ ಸುರಕ್ಷಿತವಾಗಿ ಇರುವಂತೆ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ನಿವಾಸಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿತ್ತು.