ಮುಂಬಯಿ : ನಿನ್ನೆ ಸೋಮವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಹಾ ಮಳೆಗೆ ಮುಂಬಯಿ ಮಹಾನಗರಿ ತತ್ತರಿಸುತ್ತಿದ್ದು ಪೂರ್ವ ಮಲಾಡ್‌ನಲ್ಲಿ ಗೋಡೆ ಕುಸಿತಕ್ಕೆ ಬಲಿಯಾದವರ ಸಂಖ್ಯೆ 21ಕ್ಕೆ ಏರಿರುವುದಾಗಿ ವರದಿಯಾಗಿದೆ.
ಇದೇ ವೇಳೆ ಭಾರತೀಯ ಹವಾಮಾನ ಇಲಾಖೆ, ಪ್ರವಾಸಿಗರು ಮಹಾರಾಷ್ಟ್ರದಲ್ಲಿನ ಬೆಟ್ಟ ಪ್ರದೇಶಗಳಿಗೆ ಹೋಗಬಾರದೆಂಬ ಎಚ್ಚರಿಕೆ ನೀಡಿದೆ.
ಮಹಾ ನಗರಿಯ ಬಹುತೇಕ ಎಲ್ಲ ರಸ್ತೆಗಳು ನೀರಿನಲ್ಲಿ ಮುಳುಗಿದ್ದು ಭಾರತೀಯ ನೌಕಾ ಪಡೆ ರಕ್ಷಣಾ ಕಾರ್ಯದಲ್ಲಿ ನೆರವಾಗುತ್ತಿದೆ. ಮುಂಬಯಿಯಲ್ಲಿ ವಿಮಾನ ಸಾರಿಗೆ ತೀವ್ರವಾಗಿ ಬಾಧಿತವಾಗಿದೆ.
ಮುಂಬಯಿಯ ಅನೇಕ ಪ್ರದೇಶಗಳಲ್ಲಿ ಕಳೆದ 24 ತಾಸುಗಳಲ್ಲಿ 20 ಮಿ.ಮೀ.ಗಿಂತಲೂ ಅಧಿಕ ಮಳೆಯಾಗಿದೆ. ನಗರ ಹೊರವಲಯದ ಮುಲುಂದ್ ನಲ್ಲಿ ಹೌಸಿಂಗ್ ಸೊಸೈಟಿಯ ಗೋಡೆ ಕುಸಿದ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೃತ ಪಟ್ಟಿರುವ 45 ವರ್ಷ ಪ್ರಾಯದ ವಾಚ್ ಮ್ಯಾನ್ ನನ್ನು ಗಂಭೀರ್ ಕರಿ ಸಿಂಗ್ ಎಂದು ಗುರುತಿಸಲಾಗಿದೆ.
ಮುಲುಂದ್ ನಲ್ಲಿ ಮೃತಪಟ್ಟಿರುವ ಇನ್ನೋರ್ವ 22ರ ಹರೆಯದ ತರುಣ ಗೋಪಾಲ್ ಝಾ ವಿದ್ಯುದಾಘಾತಕ್ಕೆ ಗುರಿಯಾಗಿ ಸಾವಪ್ಪಿದನೆಂದು ವರದಿಯಾಗಿದೆ.