ಮುಂಬಯಿ: ಮುಂಬಯಿ ಪ್ರಸ್‌ಕ್ಲಬ್ ಸಿಬ್ಬಂದಿ ವರ್ಗದ ವತಿಯಿಂದ ಹೋಲಿ ಹಬ್ಬದ ಅಂಗವಾಗಿ ವಾರ್ಷಿಕ ವಿಹಾರಕೂಟವು ಮಾ. 1 ರಂದು ಆಲಿಬಾಗ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಬೆಳಗ್ಗೆ 45 ಮಂದಿ ಸದಸ್ಯರ ತಂಡವು ಪರಿವಾರದವರೊಂದಿಗೆ ಪನ್ವೇಲ್ ಮುಖಾಂತರ ಆಲಿಬಾಗ್‌ಗೆ ಪ್ರಯಾಣ ಬೆಳೆಸಿತು.
ಬೆಳಗ್ಗೆ ಸದಸ್ಯ ಬಾಂಧವರಿಗೆ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಪ್ರಾರಂಭದಲ್ಲಿ 400 ವರ್ಷಗಳ ಪುರಾತನ ಕಾಲದ ಶಿವಾಜಿಯ ಗುಹೆಗಳನ್ನು ವೀಕ್ಷಿಸಲಾಯಿತು. ಆನಂದ ಆಲಿಬಾಗ್‌ನ ಕಾಶಿದ್ ಬ್ರಿಜ್ ಮುರುಡು ಚೌಪಾಟಿಗೆ ತೆರಳಿದ ತಂಡವು ಇಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಆಟೋಟಗಳಲ್ಲಿ ಪಾಲ್ಗೊಂಡಿತು.
ಫುಟ್ಬಾಲ್, ವಾಲಿಬಾಲ್, ರಿಂಗ್ ಆಟ ಇನ್ನಿತರ ಆಟೋಟಗಳಲ್ಲಿ ಭಾಗಿಯಾದ ತಂಡಕ್ಕೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಆನಂತರ ಆಲಿಬಾಗ್‌ನ ಪ್ರಸಿದ್ಧ ಮಂದಿರಗಳಾದ ಗಣಪತಿ ಮಂದಿರ, ಬಿರ್ಲಾ ಮಂದಿರವನ್ನು ವೀಕ್ಷಿಸಿ ದರ್ಶನ ಪಡೆದರು.
ವಿಹಾರಕೂಟದ ಯಶಸ್ಸಿಗೆ ಪ್ರಸ್ ಕ್ಲಬ್‌ನ ಪ್ರಬಂಧಕ ಡಿ. ಎಂ. ಡೆವಿಡ್, ದಿಗಂಬರ್ ಮೊಳ್ಗೆ, ಜಯ ಸಿ. ಪೂಜಾರಿ, ಸತೀಶ್ ಹೆಗ್ಡೆ, ಸಂಜೀವ ವಿ. ಪೂಜಾರಿ, ಪ್ರಕಾಶ್ ಶೆಟ್ಟಿ, ಬಿರೇಂದ್ರ ಪ್ರತ್ರೊ, ಹನುಮಂತ್ ಮೊಳ್ಗೆ ಮೊದಲಾದವರು ಸಹಕರಿಸಿದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಂಕುಶ್ ಮತ್ತು ಶಿಲ್ಪಾ ಕಾಂಬ್ಳೆ, ಪೂನಂ, ಲೀಜಾ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ವಿಹಾರಕೂಟದಲ್ಲಿ ಆಲಿಬಾಗ್‌ನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಪ್ರದೀಪ್ ದುಮಾಲ್, ನಾರಾಯಣ ದುಮಾಲ್, ಪ್ರಭುದಾಸ್ ಶಿರ್ಕೆ, ಮನೋಜ್ ಬೋನಾಜೆ ಇವರು ಸಹಕರಿಸಿದರು. ತುಕರಾಮ್ ಮೊಳ್ಗೆ ಮತ್ತು ಸನ್ನಿ ದೇವಲ್ಕರ್ ಇವರು ಸದಸ್ಯ ಬಾಂಧವರನ್ನು ಪರಿಚಯಿಸಿ ವಂದಿಸಿದರು. ಸುರೇಶ್ ಮೊರಿಯಾ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.