ಮುಂಬಯಿ: ಮಾಜಿ ಬಾಲಿವುಡ್ ನಟಿಗೆ ಆಕೆ ಅಪ್ರಾಪ್ತೆಯಾಗಿದ್ದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿದ 41 ವರ್ಷ ಪ್ರಾಯದ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಿರುವ ಇಲ್ಲಿನ ವಿಶೇಷ ಪೋಕ್ಸೋ ನ್ಯಾಯಾಲಯವು ಆ ವ್ಯಕ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 25,500 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿ ಆದೇಶ ನೀಡಿದೆ.
41 ವರ್ಷದ ವಿಕಾಸ್ ಸಚ್ ದೇವ್ ಎಂಬ ವ್ಯಕ್ತಿಯೇ ನ್ಯಾಯಾಲಯದಿಂದ ಅಪರಾಧಿ ಎಂದು ಘೋಷಿಸಲ್ಪಟ್ಟವರಾಗಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಪೋಕ್ಸೋ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ 354 ಸೆಕ್ಷನ್ ಅಡಿಯಲ್ಲಿ ವಿಕಾಸ್ ಅವರನ್ನು ಅಪರಾಧಿ ಎಂದು ತೀರ್ಮಾನಿಸಿದೆ. ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಾಲದಲ್ಲಿ ಹಾಜರಿದ್ದ ವಿಕಾಸ್ ಸಚ್ ದೇವ್ ದಂಪತಿ ನ್ಯಾಯಾಧೀಶರು ಪ್ರಕಟಿಸಿದ ತೀರ್ಪನ್ನು ಕೇಳುತ್ತಲೇ ಜೋರಾಗಿ ಅತ್ತುಬಿಟ್ಟರು.
ವಿಕಾಸ್ ಅವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತನ್ನ ಎದುರು ಸೀಟಿನಲ್ಲಿ ಕುಳಿತಿದ್ದ ನಟಿಗೆ ಲೈಂಗಿಕ ಕಿರುಕುಳವನ್ನು ನೀಡಿದ್ದರು ಎಂದು ಸಂತ್ರಸ್ತೆ ಮಾಜಿ ನಟಿ ಆರೋಪಿಸಿದ್ದರು. ವಿಮಾನದಲ್ಲಿ ತನ್ನ ಸೀಟಿನ ಕೈ ಇರಿಸುವ ಜಾಗದಲ್ಲಿ ಕಾಲನ್ನು ಚಾಚಿ ವಿಕಾಸ್ ತನಗೆ ಲೈಂಗಿಕ ಕಿರುಕುಳವನ್ನು ನೀಡಿದ್ದರು ಎಂಬುದು ಸಂತ್ರಸ್ತೆಯ ಆರೋಪವಾಗಿತ್ತು.
ಆದರೆ ಒಟ್ಟು 07 ಪ್ರಾಸಿಕ್ಯೂಷನ್ ಸಾಕ್ಷಿಗಳ ಪೈಕಿ ಮೂವರು, ವಿಮಾನ ಪ್ರಯಾಣದುದ್ದಕ್ಕೂ ವಿಕಾಸ್ ಅವರು ಗಾಢ ನಿದ್ರೆಯಲ್ಲಿದ್ದರು ಎಂದು ವಿಶೇಷ ನ್ಯಾಯಾಲಯದಲ್ಲಿ ಸಾಕ್ಷ್ಯವನ್ನು ನುಡಿದಿದ್ದರು. ಇವರಲ್ಲಿ ಓರ್ವ ಪ್ರಯಾಣಿಕ ಮತ್ತು ಇಬ್ಬರು ವಿಮಾನ ಸಿಬ್ಬಂದಿಗಳಾಗಿದ್ದಾರೆ.
ತನ್ನ ಕಕ್ಷಿದಾರ ಉತ್ತಮ ನಡತೆಯನ್ನು ಹೊಂದಿರುವ ವ್ಯಕ್ತಿ ಮತ್ತು ಇದೇ ಮೊದಲ ಬಾರಿ ಇವರು ಈ ರೀತಿಯ ಆರೋಪಕ್ಕೆ ಗುರಿಯಾಗಿದ್ದಾರೆ ಮಾತ್ರವಲ್ಲದೇ ಇವರ ಆದಾಯದ ಮೇಲೆ ಕುಟುಂಬ ನಿರ್ವಹಣೆ ನಡೆಯುತ್ತದೆ ಎಂದು ವಿಕಾಸ್ ಪರ ವಾದ ಮಂಡಿಸಿದ್ದ ವಕೀಲ ಅದ್ನಾನ್ ಶೇಖ್ ಅವರು ನ್ಯಾಯಾಲಯದಲ್ಲಿ ವಾದಿಸಿದ್ದರು. ಆದರೆ ಇನ್ನೊಂದೆಡೆ ಪ್ರಾಷಿಕ್ಯೂಷನ್ ವಕೀಲರು ವಿಕಾಸ್ ಅವರಿಗೆ ಗರಿಷ್ಠ ಪ್ರಮಾಣದ ಶಿಕ್ಷೆಗಾಗಿ ನ್ಯಾಯಾಲದಲ್ಲಿ ಮನವಿ ಮಾಡಿದ್ದರು.
ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರಾಗಿದ್ದ ಸಂತ್ರಸ್ತೆ ಮಾಜಿ ನಟಿ ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಮಧ್ಯದಲ್ಲೇ ಎದ್ದು ಹೋಗಿದ್ದರು ಮತ್ತು ಆರೋಪಿಯನ್ನು ನ್ಯಾಯಾಲಯದಲ್ಲಿ ಗುರುತಿಸುವ ವಿಚಾರಣೆಯ ನಿರ್ಣಾಯಕ ಸಂದರ್ಭದಲ್ಲಿ ಅವರು ಗೈರಾಗಿದ್ದರು.