Advertisement

ಸಿಯೋನಿಯಿಂದ ವಾಂಖೆಡೆವರೆಗೆ; ಯಾರಿದು ಮುಂಬೈ ಇಂಡಿಯನ್ಸ್ ಹೊಸ ಭರವಸೆ ಅರ್ಶದ್ ಖಾನ್?

05:39 PM Apr 06, 2023 | ಕೀರ್ತನ್ ಶೆಟ್ಟಿ ಬೋಳ |

ಐದು ಬಾರಿಯ ಐಪಿಎಲ್ ಚಾಂಪಿಯನ್ ಎಂಬ ಗರಿಮೆ ಹೊತ್ತ ಮುಂಬೈ ಇಂಡಿಯನ್ಸ್ ತಂಡವು ಇತ್ತೀಚೆಗೆ ಕಳೆಗುಂದಿರುವುದು ಸತ್ಯ. ತಂಡದ ಪ್ರಮುಖ ಸದಸ್ಯರಾಗಿದ್ದ ಪಾಂಡ್ಯ ಸಹೋದರರು, ಕೈರನ್ ಪೊಲಾರ್ಡ್ ಇಲ್ಲದ ತಂಡಕ್ಕೆ ಮತ್ತಷ್ಟು ದೊಡ್ಡ ಪೆಟ್ಟುಕೊಟ್ಟಿದ್ದು ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಅಲಭ್ಯತೆ. ಬೆನ್ನು ನೋವಿನ ಕಾರಣದಿಂದ ಕ್ರಿಕೆಟ್ ನಿಂದ ದೂರವಾಗಿರುವ ಬುಮ್ರಾ ಈ ಬಾರಿ ಸಂಪೂರ್ಣ ಕೂಟದಿಂದ ಹೊರಬಿದ್ದಿದ್ದಾರೆ. ಬುಮ್ರಾ ಇಲ್ಲದ ಮುಂಬೈ ಇಂಡಿಯನ್ಸ್ ಬೌಲಿಂಗ್ ಲೈನಪ್ ಮೊದಲಿನಷ್ಟು ಹರಿತವಾಗಿಲ್ಲ ಎನ್ನುವ ಸತ್ಯವನ್ನು ಮುಂಬೈ ಅಭಿಮಾನಿಗಳೂ ಒಪ್ಪಿಕೊಳ್ಳುತ್ತಾರೆ.

Advertisement

ಇಂತಹ ಮುಂಬೈ ತಂಡಕ್ಕೆ ಬಲ ತುಂಬಲು ಬಂದವರೇ ಯುವ ಆಟಗಾರ ಅರ್ಶದ್ ಖಾನ್. ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಗೋಪಾಲ್ ಗಂಜ್ ನ 25 ವರ್ಷದ ಯುವಕ ರವಿವಾರ ಚಿನ್ನಸ್ವಾಮಿಯ 50 ಸಾವಿರ ಜನರ ಎದುರು ಐಪಿಎಲ್ ಎಂಬ ವರ್ಣರಂಜಿತ ಕೂಟಕ್ಕೆ ಕಾಲಿರಿಸಿದ.

ಅಂದಹಾಗೆ ಅರ್ಶದ್ ಖಾನ್ ಅವರು ಈ ಬಾರಿ ಮುಂಬೈ ಇಂಡಿಯನ್ಸ್ ತಂಡ ಸೇರಿದವರು ಅಲ್ಲ. 2022ರ ಹರಾಜಿನಲ್ಲೇ ಮುಂಬೈ ತಂಡವು ಅರ್ಶದ್ ಖಾನ್ ಅವರನ್ನು 20 ಲಕ್ಷ ಮೂಲ ಬೆಲೆಗೆ ಖರೀದಿ ಮಾಡಿತ್ತು. ಆದರೆ ಅದೃಷ್ಟ ಅರ್ಶದ್ ಪರವಾಗಿ ಇರಲಿಲ್ಲ. ಕೂಟಕ್ಕೆ ಮೊದಲೇ ಗಾಯಗೊಂಡರು. ಹೀಗಾಗಿ ಸಂಪೂರ್ಣ ಕೂಟದಿಂದ ಅವರು ಹೊರಬಿದ್ದರು. ಅರ್ಶದ್ ಬದಲಿಗೆ ಅವರ ದೇಶೀಯ ತಂಡದ ಸಹ ಆಟಗಾರ ಕುಮಾರ್ ಕಾರ್ತಿಕೇಯ ಅವರನ್ನು ಮುಂಬೈ ಫ್ರಾಂಚೈಸಿ ತಂಡಕ್ಕೆ ಸೇರಿಸಿಕೊಂಡಿತ್ತು. ಕುಮಾರ್ ಕಾರ್ತಿಕೇಯ ಆಡುವ ಬಳಗದಲ್ಲೂ ಕಾಣಿಸಿಕೊಂಡರು. ಇತ್ತ ಬೇಸರದಿಂದ ಮನೆಗೆ ಹೋದ ಸಣ್ಣ ಹುಡುಗರಿಗೆ ತರಬೇತಿ ನೀಡಲು ಆರಂಭಿಸಿದ.

“ಅವನು ಐಪಿಎಲ್‌ ನಿಂದ ಹೊರಗುಳಿದಿದ್ದಕ್ಕಾಗಿ ನಿರಾಶೆಗೊಂಡಿದ್ದ, ಆದರೆ ಅವನು ಯಾವುದನ್ನೂ ಸುಲಭವಾಗಿ ಬಿಟ್ಟುಕೊಡುವುದಿಲ್ಲ, ಅದುವೆ ಆತನ ದೊಡ್ಡ ಶಕ್ತಿ” ಎನ್ನುತ್ತಾರೆ ಅರ್ಶದ್ ತರಬೇತುದಾರ ಅಬ್ದುಲ್ ಕಲಾಂ.

“ಕ್ರಿಕೆಟ್‌ನಲ್ಲಿ ಅವನ ಉತ್ಸಾಹ ಹೇಗಿತ್ತೆಂದರೆ ಅವನು ಕ್ರಿಕೆಟ್ ಪಂದ್ಯಗಳನ್ನು ಆಡಲು ಸಿಯೋನಿಯಿಂದ 300 ಕಿ.ಮೀ. ದೂರದ ಜಬಲ್ಪುರ್ ಗೆ ಪ್ರಯಾಣ ಮಾಡುತ್ತಿದ್ದ. ಅದಕ್ಕಾಗಿ ಅವನು ಬೆಳಿಗ್ಗೆ ಮೂರು ಗಂಟೆಗೆ ಏಳಬೇಕಾಗಿತ್ತು, ಆದರೆ ಪ್ರತಿ ಸಲವೂ ಅವರು ಸಮಯಕ್ಕಿಂತ ಮೊದಲೇ ಅಲ್ಲಿ ಇರುತ್ತಿದ್ದ” ಎಂದು ನೆನಪಿಸಿಕೊಳ್ಳುತ್ತಾರೆ ಕೋಚ್ ಕಲಾಂ.

Advertisement

2019-20 ಋತುವಿನಲ್ಲಿ 25 ವರ್ಷದೊಳಗಿನವರ ಸಿಕೆ ನಾಯ್ಡು ಟ್ರೋಫಿಯಲ್ಲಿ 400 ರನ್ ಗಳಿಸುವುದರ ಜೊತೆಗೆ 36 ವಿಕೆಟ್‌ಗಳೊಂದಿಗೆ ಅಗ್ರ ವಿಕೆಟ್ ಟೇಕರ್ ಆಗಿ ಮೂಡಿ ಬಂದ ಅರ್ಶದ್ ಮೊದಲು ಬಾರಿ ತಮ್ಮನ್ನು ತಾನು ಗುರುತಿಸಿಕೊಂಡರು. ಅಸ್ಸಾಂ ವಿರುದ್ಧ ಪಂದ್ಯದಲ್ಲಿ 134 ರನ್, ಮುಂಬೈ ವಿರುದ್ಧ 54 ಎಸೆತಗಳಲ್ಲಿ 5 ಸಿಕ್ಸರ್ ಮತ್ತು ಒಂಬತ್ತು ಬೌಂಡರಿ ಸೇರಿದಂತೆ 86 ರನ್ ಇನ್ನಿಂಗ್ಸ್ ಆಡಿದ್ದರು, ಅಂದು 112 ರನ್ ಗೆ 7 ವಿಕೆಟ್‌ ಕಳೆದುಕೊಂಡಲ್ಲಿಂದ ತಂಡವನ್ನು 229 ರನ್ ಗೆ ತಲುಪಿಸಿದ್ದರು. ಈ ಪ್ರದರ್ಶನವೇ ಅವರನ್ನು ಮೊದಲು ಮುಂಬೈ ಇಂಡಿಯನ್ಸ್‌ ನ ಸ್ಕೌಟಿಂಗ್ ತಂಡದ ಗಮನ ಸೆಳೆಯುವಂತೆ ಮಾಡಿದ್ದು. ಬಹುಶಃ ಅವರು ಕಳೆದ ಋತುವಿನಲ್ಲಿ ಒಂದೇ ಒಂದು ಪಂದ್ಯವನ್ನು ಆಡದಿದ್ದರೂ ಅವರನ್ನು ಬಿಟ್ಟುಕೊಡದೆ ರಿಟೈನ್ ಮಾಡಿತ್ತು.

“ಅರ್ಶದ್ ಯಾವಾಗಲೂ ಸವಾಲುಗಳನ್ನು ಎದುರಿಸುವುದನ್ನು ಆನಂದಿಸುತ್ತಾನೆ” ಅನ್ನುತ್ತಾರೆ ಅರ್ಶದ್ ಹಿರಿಯ ಸಹೋದರ ಜಕಾರಿಯಾ . ” ನನಗೆ ಇನ್ನೂ ನೆನಪಿದೆ, ಮುಂಬೈ ಇಂಡಿಯನ್ಸ್‌ ಗೆ ಮೊದಲ ಬಾರಿಗೆ ಆಯ್ಕೆಯಾದಾಗ ನಮ್ಮ ತಂದೆ ಮಗ್ರೀಬ್ ನಮಾಜ್‌ ಗೆ (ಸಂಜೆಯ ಪ್ರಾರ್ಥನೆ) ಹೋಗಿದ್ದರು, ಅವರು ಮಸೀದಿಯಿಂದ ಹಿಂದಿರುಗುವ ಹೊತ್ತಿಗೆ ಮನೆಯಲ್ಲಿ ಹಬ್ಬದ ವಾತಾವರಣವಿತ್ತು. ಸಂತೋಷವನ್ನು ಹಂಚಿಕೊಳ್ಳಲು ಹಳ್ಳಿಯು ನಮ್ಮ ಮನೆಗೆ ಬಂದಿತ್ತು” ಎನ್ನುತ್ತಾರೆ ಜಕಾರಿಯಾ.

ಅರ್ಶದ್ ಅವರ ತಂದೆ ಅಶ್ಫಾಕ್ ಸ್ವತಃ ಸಿಯೋನಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್‌ ನಲ್ಲಿ ಕೋಚ್ ಆಗಿದ್ದರು. ತಮ್ಮ ಮಗನ ಪ್ರತಿಭೆಯನ್ನು ಗುರುತಿಸಿದವರಲ್ಲಿ ಮೊದಲಿಗರಾಗಿದ್ದ ಅವರು ಮಗನ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತಾರೆ. ಅವನು ಒಂಬತ್ತು ವರ್ಷ ವಯಸ್ಸಿನವರಾಗಿದ್ದಾಗ ಅವನಿಗಿಂತ ಹಿರಿಯ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಅಲ್ಲದೆ ಅವರ ಎದುರು ದೊಡ್ಡ ದೊಡ್ಡ ಸಿಕ್ಸರ್‌ ಸಿಡಿಸುತ್ತಿದ್ದ” ಎನ್ನುತ್ತಾರೆ.

11ನೇ ವಯಸ್ಸಿನಲ್ಲಿ ಅರ್ಶದ್ ರಾಜ್ಯದ ಅಂಡರ್ 14 ತಂಡ ಸೇರಿದ್ದರು. ಎಡಗೈ ಬ್ಯಾಟರ್ ಆಗಿ ಕ್ರಿಕೆಟ್ ಆರಂಭಿಸಿದ್ದ ಅರ್ಶದ್ ಆದರೆ ನಂತರ ಬೌಲರ್ ಆಗಿದ್ದರ ಹಿಂದೆಯೂ ಒಂದು ಕಥೆ. ಒಮ್ಮೆ ಜಬಲ್ಪುರದಲ್ಲಿ ಹೋಶಂಗಾಬಾದ್ ವಿಭಾಗದ ವಿರುದ್ಧ ಒಂದು ಪಂದ್ಯವಿತ್ತು, ಅಲ್ಲಿ ಜಬಲ್ಪುರ ಬೌಲಿಂಗ್ ಪರಿಣಾಮಕಾರಿಯಾಗಿ ಇರಲಿಲ್ಲ. ನಾನು ಜಬಲ್ಪುರ್ ವಿಭಾಗದ ಕಾರ್ಯದರ್ಶಿ ಧರ್ಮೇಶ್ ಪಟೇಲ್ ಅವರನ್ನು ಸಂಪರ್ಕಿಸಿ ಹೊಸ ಚೆಂಡನ್ನು ಅರ್ಶದ್ ಗೆ ನೀಡಲು ನಿರ್ಧರಿಸಿದ್ದೇವೆ. ಅವನು ಇನ್ ಸ್ವಿಂಗ್ ಮತ್ತು ಔಟ್ ಸ್ವಿಂಗ್ ಎರಡನ್ನೂ ಸಹಜವಾಗಿ ಹಾಕುತ್ತಿದ್ದ. ಆ ದಿನ ಅವನು ತಮ್ಮ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದರು’ ಎನ್ನುತ್ತಾರೆ ಅಶ್ಫಾಕ್.

“ಅರ್ಶದ್ ತನ್ನ ತಂದೆಯ ತ್ಯಾಗದಿಂದಾಗಿ ಅವನು ಇಂದು ಈ ಮಟ್ಟಕ್ಕೆ ಏರಿದ್ದಾನೆ. ನನಗೆ ನೆನಪಿದೆ ಅವನ ತಂದೆ ತಿಂಗಳಿಗೆ 15,000 ಮಾತ್ರ ಸಂಪಾದಿಸುತ್ತಿದ್ದರು, ಆದರೆ ಅವರು ತಮ್ಮ ಮಗನಿಗೆ 16,000 ರೂಪಾಯಿಗಳ ಕ್ರಿಕೆಟ್ ಕಿಟ್ ಕೊಡಿಸಿದ್ದರು. ಅವನು ಒಂದು ದಿನ ತನ್ನ ಕುಟುಂಬ ಮತ್ತು ಅವನ ದೇಶವನ್ನು ಹೆಮ್ಮೆಪಡುವಂತೆ ಮಾಡುತ್ತಾನೆ ಎಂಬ ನಂಬಿಕೆಯಿದೆ ಎನ್ನುತ್ತಾರೆ ಅರ್ಶದ್‌ ನ ತಾಯಿ ಆಲಿಯಾ.

*ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next