Advertisement

80 ಕೋಟಿ ಕಿಕ್‌ಬ್ಯಾಕ್‌ ಸಂದಾಯ: ಪ್ರಿಯಾಂಕ ಖರ್ಗೆ

12:46 AM Mar 01, 2023 | Team Udayavani |

ಬೆಂಗಳೂರು: ಮುಂಬಯಿ ಮೂಲದ ಕಂಪೆನಿಯೊಂದಕ್ಕೆ ಯಾವುದೇ ದಾಖಲೆಗಳಿಲ್ಲದಿದ್ದರೂ ಮೊಲಾಸಿಸ್‌ (ಕಾಕಂಬಿ) ರಫ್ತಿಗೆ ಸರಕಾರ ಅನುಮತಿ ನೀಡಿದ್ದು, ಈ ಸಂಬಂಧ 80 ಕೋಟಿ ರೂ. ಕಿಕ್‌ಬ್ಯಾಕ್‌ ಸಂದಾಯವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌, ಇದಕ್ಕೆ ಸ್ವತಃ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಇಬ್ಬರು ಬಿಜೆಪಿ ಸಂಸದರ ಶಿಫಾರಸು ಇದೆ ಎಂದು ಪ್ರಕರಣದ ಸಂಭಾಷಣೆಯ ಆಡಿಯೋ ಬಾಂಬ್‌ ಸಿಡಿಸಿದ್ದಾರೆ.

Advertisement

ರಫ್ತು ಪರವಾನಿಗೆಗಾಗಿ ಕಸರತ್ತು ನಡೆಸಿರುವ ಮುಂಬಯಿ ಮೂಲದ ಕೆ.ಎನ್‌. ರಿಸೋರ್ಸ್‌ ಕಂಪೆನಿ, ಪ್ರತಿನಿಧಿ ಸುರೇಶ್‌ ಮತ್ತು ಕಾಕಂಬಿ ಸಾಗಣೆ ಮಾಡುವ ಗುತ್ತಿಗೆದಾರ ಶಿವರಾಜ್‌ ನಡುವೆ ನಡೆದ 4.50 ನಿಮಿಷದ ಸಂಭಾಷಣೆಯನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಕೆಪಿಸಿಸಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಿಯಾಂಕ್‌ ಖರ್ಗೆ, ಈ ಸಂಭಾಷಣೆಯಲ್ಲಿ ಕಂಪೆನಿ ಪ್ರತಿನಿಧಿಯು ಕೇಂದ್ರ ಹಣಕಾಸು ಸಚಿವರು ಮತ್ತು ಇಬ್ಬರು ಬಿಜೆಪಿ ಸಂಸದರ ಶಿಫಾರಸು ಇರುವುದನ್ನು ಪ್ರಸ್ತಾವಿಸಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸಚಿವೆ ಹಾಗೂ ಸಂಸದರಿಬ್ಬರ ಶಿಫಾರಸಿನ ಮೇರೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಖುದ್ದು ಅಬಕಾರಿ ಸಚಿವಾಲಯದ ಅಧಿಕಾರಿಗಳು ಮತ್ತು ಆಯುಕ್ತರನ್ನು ಕರೆಯಿಸಿ ಯಾವುದೇ ಅಡತಡೆಗಳು ಆಗದಂತೆ ಪರವಾನಿಗೆ ದೊರೆಯಲು ರಹದಾರಿ ಮಾಡಿಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ 40 ಪರ್ಸೆಂಟ್‌ ಕಮಿಷನ್‌ ಪಡೆಯಲಾಗಿದೆ ಎಂದು ದೂರಿದರು.

ರಾಜ್ಯಕ್ಕೂ ಆದಾಯ ನಷ್ಟ
ಅಷ್ಟಕ್ಕೂ ಈ ಕಾಕಂಬಿಯನ್ನು ಗೋವಾ ಬಂದರಿನಿಂದ ರಫ್ತು ಮಾಡಲು ಅನುಮತಿ ನೀಡಲಾಗಿದೆ. ಒಂದು ಮೆಟ್ರಿಕ್‌ ಟನ್‌ ಕಾಕಂಬಿಗೆ 10 ಸಾವಿರ ರೂ. ಇದ್ದು, ಸುಮಾರು 2 ಲಕ್ಷ ಮೆಟ್ರಿಕ್‌ ಟನ್‌ ರಫ್ತಿಗೆ ಅನುಮತಿ ಪಡೆಯಲಾಗಿದೆ. ಇದರ ಮೊತ್ತ 200 ಕೋಟಿ ರೂ. ಆಗುತ್ತದೆ. ಅದರಂತೆ ರಾಜ್ಯಕ್ಕೆ ತೆರಿಗೆ ರೂಪದಲ್ಲಿ ಬರಬಹುದಾದ 10 ಕೋಟಿ ರೂ. ಆದಾಯವೂ ನೆರೆ ರಾಜ್ಯದ ಪಾಲಾಗಿದೆ. ಅಷ್ಟೇ ಅಲ್ಲ, ರಾಜ್ಯದ ಅಬಕಾರಿ ವಲಯಕ್ಕೂ ನೇರವಾಗಿ 60 ಕೋಟಿ ರೂ. ಆದಾಯ ಹರಿದುಬರುತ್ತಿತ್ತು. ಇದೆಲ್ಲದವೂ ತಪ್ಪಿದಂತಾಗಿದೆ ಎಂದು ಹೇಳಿದರು.

ಕಾಕಂಬಿ ರಫ್ತುಗೆ ಅನುಮತಿ ಕೊಟ್ಟಿದ್ದರಲ್ಲಿ ತಪ್ಪಿಲ್ಲ. ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಆಡಿಯೋ ಸುಳ್ಳು. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇಲಾಖೆಯ ಆದಾಯ ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.
– ಗೋಪಾಲಯ್ಯ, ಅಬಕಾರಿ ಸಚಿವ

Advertisement

ಈಗಾಗಲೇ ಕಾಕಂಬಿ ರಫ್ತಿಗೆ ಅನುಮತಿ ನೀಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಡಿಸ್ಟಿಲರಿ ಓನರ್ ಅಸೋಸಿಯೇಷನ್‌ ಪ್ರತಿಭಟನೆ ನಡೆಸಿತ್ತು. ಒಂದೆಡೆ 39 ಸಾವಿರ ಕೋಟಿ ತೆರಿಗೆ ಗುರಿ ನೀಡಲಾಗುತ್ತದೆ. ಮತ್ತೂಂದೆಡೆ ಡಿಸ್ಟಿಲರಿಗೆ ಪೂರಕವಾದ ಮೊಲಾಸಿಸ್‌ ರಫ್ತಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ನೆನಪಿಸಿದ ಪ್ರಿಯಾಂಕ ಖರ್ಗೆ, ದಾಖಲೆಗಳಿಲ್ಲದಿದ್ದರೂ ರಫ್ತಿಗೆ ಅನುಮತಿ ನೀಡಿರುವ ಬಗ್ಗೆ ಈಗ ಕಾಂಗ್ರೆಸ್‌ಗೆ ದಾಖಲೆಗಳು ಲಭ್ಯವಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಲೋಕಾಯುಕ್ತಕ್ಕೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯಿಂದ ದೂರು ಕೂಡ ದಾಖಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗ ಉಪಾಧ್ಯಕ್ಷ ರಮೇಶ್‌ಬಾಬು ಇದ್ದರು.

ಚುನಾವಣೆ ಮುಂದೂಡಿ ತನಿಖೆ ನಡೆಸಿ
ಸರ್ಕಾರದ ವಿರುದ್ಧ ನಿರಂತರವಾಗಿ 40 ಪರ್ಸೆಂಟ್‌ ಕಮಿಷನ್‌ ಹಗರಣಗಳು ಕೇಳಿಬರುತ್ತಿದ್ದರೂ, ನಮ್ಮ ವಿರುದ್ಧವೇ ಮುಖ್ಯಮಂತ್ರಿ ಭ್ರಷ್ಟಾಚಾರ ಆರೋಪ ಮಾಡುತ್ತಾರೆ. ತಮ್ಮ (ಬಿಜೆಪಿ) ಮತ್ತು ನಮ್ಮ (ಕಾಂಗ್ರೆಸ್‌) ಮೇಲಿನ ಎಲ್ಲ ಆರೋಪಗಳ ಸಮಗ್ರ ತನಿಖೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಅಗತ್ಯಬಿದ್ದರೆ ಎರಡು ತಿಂಗಳು ಚುನಾವಣೆ ಮುಂದೂಡಿ ಎಂದು ಪ್ರಿಯಾಂಕ ಖರ್ಗೆ ಒತ್ತಾಯಿಸಿದರು. ಎಲ್ಲ ಆರೋಪಗಳ ತನಿಖೆಗೆ ನಾವು ಸಿದ್ಧ. ನೀವು ಸಿದ್ಧವಿದ್ದರೆ, ಫಾಸ್ಟ್‌ಟ್ರ್ಯಾಕ್‌ ಕೋರ್ಟ್‌ ಸ್ಥಾಪಿಸಿ ತನಿಖೆ ನಡೆಸಿ. ಇತ್ಯರ್ಥವಾದ ಬಳಿಕ ಜನರ ಬಳಿ ಚುನಾವಣೆಗೆ ಹೋಗೋಣ’ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next