Advertisement

ಅಗ್ರಸ್ಥಾನಿ ಗುಜರಾತ್‌ಗೆ ಮುಂಬೈ ಸವಾಲು

12:31 AM May 12, 2023 | Team Udayavani |

ಮುಂಬಯಿ: ಆರ್‌ಸಿಬಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿರುವ ಮುಂಬೈ ಇಂಡಿಯನ್ಸ್‌ ತಂಡವು ಶುಕ್ರವಾರದ ಐಪಿಎಲ್‌ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್‌ ಟೈಟಾನ್ಸ್‌ ತಂಡವನ್ನು ಎದುರಿಸಲಿದೆ.

Advertisement

ಆರ್‌ಸಿಬಿ ವಿರುದ್ಧದ ಪಂದ್ಯವನ್ನು ಗಮನಿಸಿದರೆ ಮುಂಬೈ ಇನ್ನುಳಿದ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಆರ್‌ಸಿಬಿ ನೀಡಿದ 200 ರನ್ನುಗಳ ಗುರಿಯನ್ನು ಮುಂಬೈ 17 ಓವರ್‌ಗಳ ಮೊದಲೇ ತಲುಪುವ ಮೂಲಕ ತನ್ನ ಉದ್ದೇಶವನ್ನು ಮನದಟ್ಟು ಮಾಡಿದೆ. ಐದು ಬಾರಿಯ ಚಾಂಪಿಯನ್‌ ಆಗಿರುವ ಮುಂಬೈ ಈ ಸಾಧನೆಯಿಂದ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ನಾಯಕ ರೋಹಿತ್‌ ಶರ್ಮ ಮತ್ತೆ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದ್ದರೂ ಇನ್ನುಳಿದ ಆಟಗಾರರು ಭರ್ಜರಿ ಫಾರ್ಮ್ನಲ್ಲಿರುವುದರಿಂದ ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯವಿದೆ ಎಂಬ ಭರವಸೆ ಮೂಡಿಸಿದ್ದಾರೆ. ಬೃಹತ್‌ ಮೊತ್ತದ ಗುರಿಯಿದ್ದರೂ ತೀವ್ರಗತಿಯಲ್ಲಿ ಆಡಿ ಗೆಲ್ಲುವ ಮೂಲಕ ತಮ್ಮ ರನ್‌ಧಾರಣೆಯನ್ನು ಉತ್ತಮಪಡಿಸಿಕೊಳ್ಳುವತ್ತ ಮುಂಬೈ ಪ್ರಯತ್ನ ನಡೆಸುತ್ತಿದೆ. ಇದಕ್ಕಾಗಿ ಬ್ಯಾಟಿಂಗ್‌ ಕ್ರಮಾಂಕದಲ್ಲಿಯೂ ಬದಲಾವಣೆ ಕೂಡ ಮಾಡುತ್ತಿದೆ.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಕಳೆದ ಮೂರು ಪ್ರಯತ್ನಗಳಲ್ಲಿ ಎರಡು ಬಾರಿ 200 ಅಥವಾ ಅದಕ್ಕಿಂತ ಹೆಚ್ಚಿನ ಗುರಿಯವನ್ನು ಯಶಸ್ವಿಯಾಗಿ ಬೆನ್ನಟ್ಟಿದ ಸಾಧನೆ ಮಾಡಿದೆ. ಆರ್‌ಸಿಬಿ ಮೊದಲು ಮುಂಬೈ ತಂಡವು ಪಂಜಾಬ್‌ ವಿರುದ್ಧವೂ ಜಯಭೇರಿ ಬಾರಿಸಿತ್ತು. ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌ ಅವರು ಉತ್ತಮ ಆಟದ ಪ್ರದರ್ಶನ ನೀಡಿ ತಂಡದ ಗೆಲುವಿನ ರೂವಾರಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕ ರೋಹಿತ್‌ ಅವರ ಕಳಪೆ ಫಾರ್ಮ್ ಚಿಂತೆಯ ವಿಷಯವಾಗಿದೆ. ಅವರು ಸತತ ಐದು ಪಂದ್ಯಗಳಲ್ಲಿ ಒಂದಂಕೆಯ ಮೊತ್ತದಲ್ಲಿ ಔಟಾಗಿ ನಿರಾಶೆ ಮೂಡಿಸಿದ್ದಾರೆ.

ರೋಹಿತ್‌ ಅವರ ವೈಫ‌ಲ್ಯದ ಜತೆ ಬೂಮ್ರಾ ಅಥವಾ ಜೋಫ್ರಾ ಆರ್ಚರ್‌ ಅವರ ಅನುಪಸ್ಥಿತಿಯಲ್ಲಿ ಮುಂಬೈ ತಂಡವು ಸತತ ನಾಲ್ಕು ಪಂದ್ಯಗಳಲ್ಲಿ ಎದುರಾಳಿ ತಂಡದ ಮೊತ್ತ 200 ಪ್ಲಸ್‌ ಗಳಿಸಲು ಬಿಟ್ಟಿರುವುದು ಚಿಂತೆಗೆ ಕಾರಣವಾಗಿದೆ. ಇದರಿಂದ ಮುಂಬೈಯ ಬೌಲಿಂಗ್‌ ಶಕ್ತಿಯನ್ನು ಪ್ರಶ್ನಿಸುವಂತಾಗಿದೆ. ಶುಕ್ರವಾರದ ಪಂದ್ಯದಲ್ಲಿ ಅಗ್ರಸ್ಥಾನಿ ಗುಜರಾತ್‌ ಎದುರಾಗಿರುವ ಕಾರಣ ಮುಂಬೈ ಬಹಳಷ್ಟು ಎಚ್ಚರಿಕೆಯಿಂದ ಆಡಬೇಕಾಗಿದೆ.

Advertisement

ಪ್ಲೇ ಆಫ್ ನಿರೀಕ್ಷೆಯಲ್ಲಿ ಗುಜರಾತ್‌
ಈಗಾಗಲೇ ಆಡಿರುವ 11 ಪಂದ್ಯಗಳಲ್ಲಿ ಎಂಟು ಗೆಲುವು ಸಾಧಿಸಿ 16 ಅಂಕ ಗಳಿಸಿರುವ ಗುಜರಾತ್‌ ತಂಡವು ಗೆಲುವಿನೊಂದಿಗೆ ಪ್ಲೇ ಆಫ್ಗೆ ಪ್ರವೇಶಿಸುವ ಪ್ರಯತ್ನದಲ್ಲಿದೆ ಮತ್ತು ಈ ಸಾಧನೆ ಮಾಡಿದ ಮೊದಲ ತಂಡವೆನಿಸಲಿದೆ. ನಾಯಕ ಹಾರ್ದಿಕ್‌ ಪಾಂಡ್ಯ ಮತ್ತು ಕೋಚ್‌ ಆಶಿಶ್‌ ನೆಹ್ರಾ ಈ ವರ್ಷವೂ ಆಟಗಾರರಿಗೆ ಅನುಕೂಲಕರ ವಾತಾವರಣವನ್ನು ಕಲ್ಪಿಸಿಕೊಟ್ಟಿದ್ದಾರೆ. ಇದರಿಂದ ತಂಡವು ಸತತ ಎರಡನೇ ವರ್ಷವೂ ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದೆ.

ಗುಜರಾತ್‌ ತಂಡದ ವಿಶೇಷವೆಂದರೆ ಅದು ತವರಿನ ಹೊರಗೆ ಆಡಿದ ಯಾವುದೇ ಪಂದ್ಯಗಳಲ್ಲಿ ಸೋಲನ್ನು ಕಂಡಿಲ್ಲ. ತಂಡ ಸೋತ ಮೂರು ಸೋಲುಗಳು ಅಹ್ಮದಾಬಾದ್‌ನ ಅವರ ತವರು ಮೈದಾನದಲ್ಲಿಯೇ ಬಂದಿವೆ. ಶುಭಮನ್‌ ಗಿಲ್‌ ಮತ್ತು ವೃದ್ಧಿಮಾನ್‌ ಸಾಹ ಉತ್ತಮ ಫಾರ್ಮ್ನಲ್ಲಿದೆ. ಮಾತ್ರವಲ್ಲದೇ ತಂಡದಲ್ಲಿ ಬ್ಯಾಟ್ಸ್‌ಮನ್‌ಗಳ ದೊಡ್ಡ ಪಟ್ಟಿಯೇ ಇದೆ. ಹಾರ್ದಿಕ್‌ ಮತ್ತು ಡೇವಿಡ್‌ ಮಿಲ್ಲರ್‌ ಬ್ಯಾಟ್‌ನಿಂದ ಮಿಂಚು ಹರಿಸುತ್ತಿ¤ದ್ದಾರೆ ಮತ್ತು ಅಪಾಯಕಾರಿ ರಾಹುಲ್‌ ತೆವಾಟಿಯಾ ಅವರ ಉಪಸ್ಥಿತಿ ಎದುರಾಳಿಗಳಿಗೆ ಹೆಚ್ಚಿನ ಸಂಕಟಗಳನ್ನು ತರಿಸುತ್ತಿದೆ.

ಗುಜರಾತ್‌ ಈ ಹಿಂದಿನ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ ವಿರುದ್ಧ 56 ರನ್‌ಗಳ ಬೃಹತ್‌ ಗೆಲುವು ಸಾಧಿಸಿದ ಉತ್ಸಾಹದಲ್ಲಿದೆ. ಶುಕ್ರವಾರ ವಾಂಖೆಡೆಯಲ್ಲೂ ಭರ್ಜರಿ ಆಟದ ಪ್ರದರ್ಶನ ನೀಡುವ ಆತ್ಮವಿಶ್ವಾಸದಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next