ಮುಂಬಯಿ: ಬಂಟ್ವಾಳ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೇಪು ಇದರ ವಾರ್ಷಿಕೋತ್ಸವ ಮತ್ತು ಮುಂಬಯಿಯ ಉದ್ಯಮಿ, ಸಮಾಜ ಸೇವಕ, ಭವಾನಿ ಫೌಂಡೇಶನ್ ಟ್ರಸ್ಟ್ ಮುಂಬಯಿ ಇದರ ಅಧ್ಯಕ್ಷ ಚೆಲ್ಲಡ್ಕ ಕುಸುಮೋದರ ಡಿ. ಶೆಟ್ಟಿ (ಕೆ.ಡಿ. ಶೆಟ್ಟಿ) ಇವರ ತಾಯಿ ಚೆಲ್ಲಡ್ಕ ಭವಾನಿ ದೇರಣ್ಣ ಶೆಟ್ಟಿ ಸ್ಮರಣಾರ್ಥವಾಗಿ ನಿರ್ಮಾಣಗೊಂಡಿರುವ ಶಾಲೆಯ ಬಯಲು ರಂಗ ಮಂದಿರವನ್ನು ಎ. 7ರಂದು ಸಂಜೆ ಅತಿಥಿ-ಗಣ್ಯರ ಸಮ್ಮುಖದಲ್ಲಿ ಉದ್ಯಮಿ, ಸಮಾಜ ಸೇವಕ ಕೆ.ಡಿ. ಶೆಟ್ಟಿ ಅವರು ಲೋಕಾರ್ಪಣೆಗೊಳಿಸಿದರು.
ಜಿಕೆವಿಕೆ ಹೆಬ್ಟಾಳ ಬೆಂಗಳೂರು ಇದರ ನಿವೃತ್ತ ಪ್ರೊ|ಡಾ| ಕೆ. ಶ್ರೀಹರಿ ಇವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕೇಪು ಶಾಲೆಯ ನಿವೃತ್ತ ಮುಖ್ಯ ಗುರುಗಳಾದ ರಾಮಚಂದ್ರ ನಾಯಕ್, ಸುಬ್ರಾಯ ಪೈ, ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ರಾಜೇಶ್ ರೈ ಕಲ್ಲಂಗಳಗುತ್ತು, ರಂಗಮಂದಿರ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಕೊರತಿಗದ್ದೆ, ರಂಗಮಂದಿರ ಸಮಿತಿಯ ಗೌರವಾಧ್ಯಕ್ಷ ಶ್ರೀನಿವಾಸ ರೈ ಕುಂಡಕೋಳಿ, ಪುಣಚ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಜಿನಚಂದ್ರ ಜೈನ್, ಕಕ್ಕೆಬೆಟ್ಟು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಬು ನಾಯ್ಕ ತೀರ್ಥಬನ ಇವರು ಅತಿಥಿಗಳಾಗಿ ಉಪಸ್ಥಿತರಿದ್ದರು.
ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಕೆ. ಡಿ. ಶೆಟ್ಟಿ ಇವರು, 1969ರಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟ ಕೇಪು ಶಾಲೆಯ ವಾರ್ಷಿಕೋತ್ಸವ ಮತ್ತು ನನ್ನ ತಾಯಿಯ ಹೆಸರಲ್ಲಿ ಆರಂಭಗೊಂಡ ರಂಗಮಂದಿರದ ಲೋಕಾರ್ಪಣೆ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನ್ನ ಪಾಲಿನ ಸೌಭಾಗ್ಯ. ಜನ್ಮನೀಡಿದ ತಂದೆ-ತಾಯಿ, ವಿದ್ಯೆ ನೀಡಿದ ವಿದ್ಯಾದೇಗುಲ, ವಿದ್ಯಾದಾನ ಮಾಡಿದ ಗುರುಗಳು ಎಲ್ಲರಿಗಿಂತ ಪೂಜ್ಯನೀಯರು. ಅವರನ್ನು ನಾವು ಜೀವನ ಪರ್ಯಂತ ಮರೆಯಬಾರದು. ಇಂದು ನಾನು ಹಳೆ ವಿದ್ಯಾರ್ಥಿಯಾಗಿ ಇಲ್ಲಿಗೆ ಬಂದಿದ್ದೇನೆ. ನನಗೆ ಲೆಕ್ಕ ಕಲಿಸಿದ ಗುರು ರಾಮಚಂದ್ರ ನಾಯಕ್ ಇವರನ್ನು ಕಣ್ಣಾರೆ ಕಂಡು ಸಂತೋಷವಾಯಿತು. ಶಾಲೆಯ ಬಗ್ಗೆ, ಇಲ್ಲಿಯ ಸಮಸ್ಯೆಗಳ ಬಗ್ಗೆ ಅರಿತುಕೊಂಡಿದ್ದೇನೆ. ಇದಕ್ಕೆ ಖಂಡಿತಾ ನಾನು ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.
ಅತಿಥಿ ಸುಬ್ರಾಯ ಪೈ ಇವರು ಮಾತನಾಡಿ, ಕೇಪು ವಿಟ್ಲ ಸೀಮೆಯ ಒಂದು ಶಕ್ತಿಕೇಂದ್ರ. ಇಲ್ಲಿಯ ಭವ್ಯ ವಿದ್ಯಾಮಂದಿರಕ್ಕೆ ಕರ್ಣನಂತೆ ದಾನಿಯಾಗಿ ಮುಂದೆ ಬಂದು ಕಟ್ಟಿಸಿಕೊಟ್ಟ ಕೆ. ಡಿ. ಶೆಟ್ಟಿಯವರ ಹೃದಯ ಶ್ರೀಮಂತಿಕೆ ಬಹುದೊಡ್ಡದಾಗಿದೆ. ಈ ವೇದಿಕೆಯ ಮುಂದೆ ಇಲ್ಲಿಯ ಮಕ್ಕಳ ಶೈಕ್ಷಣಿಕ, ಸಾಂಸ್ಕೃತಿಕ ವಿಕಾಸಕ್ಕೆ ಸ್ಪೂರ್ತಿ ತುಂಬಲೆಂದು ಹಾರೈಸಿದರು.
ಇನ್ನೋರ್ವ ಅತಿಥಿ ರಾಜೇಶ್ ಕಲ್ಲಂಗಲಗುತ್ತು ಇವರು ಮಾತನಾಡಿ, ರಂಗಮಂದಿರದ ಕನಸನ್ನು ನನಸಾಗಿಸಿದ ನಮ್ಮೆಲ್ಲರ ಆಪತ್ಭಾಂಧವ ಕೆ. ಡಿ. ಶೆಟ್ಟಿ ಅವರನ್ನು ಜೀವನಪರ್ಯಾಂತ ಮರೆಯಲು ಅಸಾಧ್ಯ. ಜಾತಿ, ಧರ್ಮ, ಭೇದ-ಭಾವ ಇಲ್ಲದೆ ಪಡೆಯುವ ವಿದ್ಯೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ| ಕೆ. ಶ್ರೀ ಹರಿ ಇವರು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಲು ಇಂತಹ ರಂಗಮಂದಿರಗಳ ಅವಶ್ಯಕತೆ ಇದೆ. ರಂಗಮಂದಿರಗಳ ಸಹಾಯದಿಂದ ಸಾಮಾ ಜಿಕ ತಲ್ಲಣವನ್ನು ದೂರಗೊಳಿಸುವುದರ ಜೊತೆಗೆ ಪೌರಾಣಿಕ ಪರಂಪರೆಯನ್ನು ಉಳಿಸಿ ಯಾರ್ಥಿಗಳನ್ನು ಪ್ರಜ್ಞಾವಂತ ಪ್ರಜೆಗಳಾಗಿನನ್ನಾಗಿ ರೂಪಿಸಲು ದಾನಿ ಕೆ. ಡಿ. ಶೆಟ್ಟಿ ಅವರು ಮಹೋನ್ನತ ಕೊಡುಗೆ ಸಲ್ಲಿಸಿದ್ದಾರೆಂದು ನುಡಿದು, ಕೆ. ಡಿ. ಶೆಟ್ಟಿ ಅವರು ಕೊಡುಗೈ ದಾನಿ ಶೆಟ್ಟಿಯಾಗಿದ್ದಾರೆಂಬುವುದನ್ನು ಅವರ ಹೆಸರೇ ಸೂಚಿಸುತ್ತದೆ ಎಂದು ಶೆಟ್ಟಿ ಅವರನ್ನು ಅಭಿನಂದಿಸಿದರು.
ಗೌರವಾರ್ಪಣೆ
ಇದೇ ಸಂದರ್ಭದಲ್ಲಿ 29 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿರುವ ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ನಾಯಕ್, ಡಾ| ಕೆ. ಶ್ರೀಹರಿ, ಅಶೋಕ್ ಇರಾಮುಲ, ಪ್ರಭಾಕರ ಶೆಟ್ಟಿ ದಂಬೆಕಾನ, ಶಾರೀರಿಕ ಶಿಕ್ಷಕ ಸುರೇಶ್ ಹಾಗೂ ಪ್ರತಿಭಾ ವಿದ್ಯಾರ್ಥಿಗಳನ್ನು ಕೆ. ಡಿ. ಶೆಟ್ಟಿಯವರು ಶಾಲು ಹೊದೆಸಿ, ಹಾರ ಹಾಕಿ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ದಾನಿ ಕೆ. ಡಿ. ಶೆಟ್ಟಿ ಇವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.