Advertisement

ಜಗಳ ಗೀತೆ

09:12 AM Sep 12, 2019 | mahesh |

ಮಕ್ಕಳನ್ನು ಬೆಳೆಸುವ, ಅವರನ್ನು ತಿದ್ದುವ ವಿಷಯಕ್ಕೆ ಅಮ್ಮ-ಅಜ್ಜಿಯ ನಡುವೆ ಜಗಳ ನಡೆಯುವುದುಂಟು. ನಾನು ಅಜ್ಜಿ ಜೊತೆಯೇ ಇರ್ತೇನೆ. ಅಮ್ಮನ ಜೊತೆಗೆ ಹೋಗಲ್ಲ ಎಂದು ಹೇಳುವ ಮಕ್ಕಳೇ ಹೆಚ್ಚು. ಇಂಥ ಸಂದರ್ಭದಲ್ಲಿ, ಅಮ್ಮನ ತ್ಯಾಗಗುಣವನ್ನು ಅಜ್ಜಿಯೂ, ಅಜ್ಜಿಯ ಮಹತ್ವವನ್ನು ಅಮ್ಮನೂ ಮಕ್ಕಳಿಗೆ ಹೇಳಿಕೊಡಬೇಕು. ಮಕ್ಕಳೆಡೆಗಿನ ಪ್ರೀತಿಯಾಗಲಿ, ಶಿಸ್ತಾಗಲಿ ಅತಿಯಾಗದಂತೆ ಎಚ್ಚರ ವಹಿಸಬೇಕು…

Advertisement

ಇಬ್ಬರು ಮಕ್ಕಳು ಕಾರಿನಲ್ಲಿ ಮುಂದಿನ ಸೀಟಿಗಾಗಿ ಜಗಳವಾಡುತ್ತಿದ್ದಾರೆ. ಕಾರನ್ನು “ಡ್ರೈವ್‌’ ಮಾಡಿಕೊಂಡು ಹೋಗಿ ದಿನಸಿ ಸಾಮಾನು ತರುವ ಜವಾಬ್ದಾರಿಯ ತಲೆನೋವು ಹೊತ್ತಿರುವ ಅಮ್ಮನಿಗೆ ಮಕ್ಕಳ ಜಗಳ ಮತ್ತೂಂದು ತಲೆನೋವು! ಸಹನೆ ಕಳೆದುಕೊಂಡು ಅವಳು ಮಕ್ಕಳಿಗೆ- “ಶಟಪ್‌! ಸುಮ್ಮನಾಗ್ತಿàರೋ, ಅಥವಾ ಇಬ್ಬರಿಗೂ ಒಂದೊಂದು ಬಾರಿಸಲೋ? ಸಾಯಂಕಾಲದ ಟಿ.ವಿ. ಟೈಂ ಕಟ್‌ ಮಾಡ್ತೀನಿ ನೋಡಿ’ ಎನ್ನುತ್ತಾಳೆ. ಒಂದು ಮಗು ಅಳಲಾರಂಭಿಸುತ್ತದೆ. ಮಕ್ಕಳ ಜೊತೆ ಹೊರಟಿರುವ ಅಜ್ಜಿ -“ಬನ್ನಿ ಬಂಗಾರಗಳಾ, ಅಮ್ಮನ ಮಾತು ಕೇಳ್ಬೇಡಿ. ಅವಳಿಗೆ ಮಕ್ಕಳನ್ನು ಹೇಗೆ ನೋಡ್ಕೊàಬೇಕು ಅಂತ ಗೊತ್ತಿಲ್ಲ. ಇಷ್ಟು ದೊಡ್ಡವಳಾಗಿದಾಳೆ. ಚಿಕ್ಕ ಮಕ್ಕಳಿಗೆ ಬೈಬಾರ್ಧು ಅಂತ ಗೊತ್ತಿಲ್ಲ. ಬನ್ನಿ, ನಿಮಗೆ ಐಸ್‌ಕ್ರೀಂ ಕೊಡಿಸ್ತೀನಿ. ಇಬ್ಬರೂ ಜಗಳವಾಡಬೇಡಿ’ ಎಂದು ಸುಮ್ಮನಾಗಿಸುತ್ತಾಳೆ!

ಇದು ಅಜ್ಜಿ -ಅಮ್ಮ ಇಬ್ಬರೂ ಮಕ್ಕಳೊಡನೆ ಒಂದೇ ಕುಟುಂಬದಲ್ಲಿ ವಾಸಿಸುವಾಗ ಸಾಮಾನ್ಯವಾಗಿ ಕಾಣುವ ದೃಶ್ಯ. 1980ರಿಂದ ಈಚೆಗೆ ಕೂಡು ಕುಟುಂಬಗಳು ಕಣ್ಮರೆಯಾಗುತ್ತಾ ನಡೆದರೂ, ಕ್ರಮೇಣ ಅಪ್ಪ-ಅಮ್ಮ -ಅಜ್ಜ -ಅಜ್ಜಿ -ಮೊಮ್ಮಕ್ಕಳು ಒಟ್ಟಿಗಿರುವ ಕುಟುಂಬಗಳು ಹೆಚ್ಚಾಗಿವೆ. ಇಂಥ ಕುಟುಂಬಗಳಲ್ಲಿ ಮಕ್ಕಳ ಲಾಲನೆ-ಪಾಲನೆಯ ಜವಾಬ್ದಾರಿಯನ್ನು ಅಜ್ಜಿ -ಅಮ್ಮ ಸಮಾನವಾಗಿ ಹಂಚಿಕೊಳ್ಳುವ, ನಿರ್ವಹಿಸುವ ಸಾಧ್ಯತೆ ಹೆಚ್ಚು. ಇದು ಮಕ್ಕಳ ದೃಷ್ಟಿಯಿಂದ “ಐಡಿಯಲ್‌’ ಎನಿಸಬಹುದಾದರೂ, ಅಮ್ಮ-ಅಜ್ಜಿಯ ಪಾಲಿಗೆ ಹಲವು ಸಮಸ್ಯೆಗಳನ್ನೂ ತರಬಹುದು. ಮಕ್ಕಳ ನಡುವಣ ಜಗಳಗಳು ಬೇಗ ಕೊನೆ ಕಂಡರೂ, ಅಜ್ಜಿ-ಅಮ್ಮಂದಿರ ಮಧ್ಯೆ “ಪವರ್‌ ಸ್ಟ್ರಗಲ್‌’ ಆಗಿ ಮಾರ್ಪಾಡಾಗಬಹುದು.

ಅಜ್ಜಿ-ಅಮ್ಮ, ಮಕ್ಕಳ ಪಾಲನೆಯನ್ನು ಬೇರೆ ಬೇರೆಯಾಗಿ ನೋಡುವುದಾದರೂ ಏಕೆ? ಅಜ್ಜಿಯೂ “ಅಮ್ಮ’ನಾಗಿಯೇ ಮಕ್ಕಳನ್ನು ಬೆಳೆಸಿರುತ್ತಾಳಷ್ಟೆ. ಆದರೆ ಅಜ್ಜಿಯಾಗಿ ಮಾಗುವ ವೇಳೆಗೆ ವಯಸ್ಸು-ಅನುಭವಗಳ ಪರಿಣಾಮವಾಗಿ, ಎಲ್ಲವನ್ನೂ ಕಟ್ಟುನಿಟ್ಟಾಗಿ ನೋಡುವ- ಭವಿಷ್ಯದ ಬಗ್ಗೆ ಭಯ ಪಡುವ ಪ್ರವೃತ್ತಿಗಳು ಕಡಿಮೆಯಾಗಿರುತ್ತವೆ. ತನ್ನ ಮಕ್ಕಳನ್ನು ಬೈದದ್ದು, ಶಿಸ್ತಿಗೆ ಒಳಪಡಿಸಿದ್ದು, ಹೊಡೆದದ್ದು ಇವೆಲ್ಲವೂ ಆಕೆಗೆ ಈಗ “ಸಿಲ್ಲಿ’ ಅನಿಸತೊಡಗುತ್ತದೆ. ತನ್ನ ಮಕ್ಕಳಿಗೆ ಅವರ ಬಾಲ್ಯದಲ್ಲಿ ನೀಡಲಾಗದ ಮುದ್ದು-ಪ್ರೀತಿ-ಷರತ್ತು ವಿಧಿಸದ ವಾತ್ಸಲ್ಯವೆಲ್ಲಾ ಮೊಮ್ಮಕ್ಕಳನ್ನು ಕಂಡಾಗ ಉಕ್ಕಿ ಹರಿಯುತ್ತದೆ! ಹೀಗೆ, ಪ್ರೀತಿಸುವ ಭರದಲ್ಲಿ ಬದಲಾದ ಕಾಲ-ಬದಲಾಗುತ್ತಿರುವ ಒತ್ತಡಗಳ ಮೇಲೆ ಆಕೆಯ ಗಮನ ಹರಿಯುವುದೇ ಇಲ್ಲ.

ಅಮ್ಮನ ಕಥೆ ……
ಅಮ್ಮನಿಗೆ ಸಹಾಯಕ್ಕೆ, ಮಕ್ಕಳು ಶಾಲೆಯಿಂದ ಬಂದಾಗ ತಾನಿರದಿದ್ದರೆ ಅವರಿಗೆ ತಿಂಡಿ-ಹಾಲು ಕೊಡಲು, ತಾನು ನಿರಾಳವಾಗಿ ಆಫೀಸ್‌ನಲ್ಲಿ ಕೆಲಸ ಮಾಡಲು “ಅಜ್ಜಿ’ ಬೇಕೇ ಬೇಕು. ಆದರೆ ಮಕ್ಕಳಿಗೆ ಶಿಸ್ತು ವಿಧಿಸುವಾಗ ಮಧ್ಯೆ ತನ್ನಮ್ಮ/ಅತ್ತೆ ಬಂದು ತನ್ನನ್ನು ತಡೆಯುವುದು, ಮಕ್ಕಳ ಪರ ವಹಿಸುವುದು ಇವು ಅಮ್ಮನಿಗೆ ಇಷ್ಟವಾಗದ ವಿಷಯ. ಮಕ್ಕಳು ಸರಿಯಾಗಿ ಓದದಿದ್ದರೆ/ಶಿಸ್ತಿನ ನಡವಳಿಕೆ ರೂಢಿಸಿಕೊಳ್ಳದಿದ್ದರೆ ಮುಂದೆ ಅವರ ಭವಿಷ್ಯ ಏನಾದೀತೋ ಎಂಬ ಭಯ-ಆತಂಕ ಅವಳದು. ಅದನ್ನು ಅಜ್ಜಿ “ಮಿನಿಮೈಜ್‌’ ಮಾಡಿ “ಕ್ಷುಲ್ಲಕ’ ಎನ್ನುವಂತೆ ನೋಡುತ್ತಾಳೆ. ಆ ಮೂಲಕ ಮಕ್ಕಳಿಗೆ ಅವಿಧೇಯತೆ, ಅಶಿಸ್ತು ಜೊತೆಯಾಗುವಂತೆ ಮಾಡುತ್ತಾಳೆ. ಜೊತೆಗೆ “ನಮ್ಮನ್ನು ಕಂಡರೆ ಅಮ್ಮನಿಗೆ ಅಷ್ಟಕ್ಕಷ್ಟೆ…’ ಎಂಬ ಭಾವನೆ ಮಕ್ಕಳಲ್ಲಿ ಮೂಡುವಂತೆ ಮಾಡುತ್ತಾಳೆ ಎಂಬುದು ಎಲ್ಲ ಅಮ್ಮಂದಿರ ದೂರು.

Advertisement

ಅಜ್ಜಿ -ಅಮ್ಮಂದಿರ ನಡುವೆ
“ಅಪ್ಪ-ಅಮ್ಮನ ಜಗಳದಲಿ ಕೂಸು ಬಡವಾಯ್ತು…’ ಎಂಬಂತೆ, ಅಜ್ಜಿ-ಅಮ್ಮಂದಿರ ಕಲಹದ ಮಧ್ಯೆ ಮಕ್ಕಳು ಅಶಿಸ್ತು, ಮೈಗಳ್ಳತನ, ಜಗಳವಾಡುವುದು, ಅಳುವುದು – ಎದುರಾಡಲು ಕಲಿಯುವುದು…ಮುಂತಾದ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಅಮ್ಮ “ಟಿ.ವಿ. ನೋಡಬೇಡ’ ಎಂದು ಬೈದರೆ, “ನಾನು ಅಜ್ಜಿ ಹತ್ತಿರ ಹೋಗುತ್ತೇನೆ. ಅಜ್ಜಿಯ ಮಾತನ್ನೇ ನಾನು ಕೇಳುವುದು’ ಎನ್ನುತ್ತಾರೆ! ಅಜ್ಜಿ-ಅಮ್ಮನ ನಡುವೆ ಇರುವ ಭಿನ್ನಾಭಿಪ್ರಾಯವನ್ನು ತಮ್ಮ ಬೇಡಿಕೆಗಳನ್ನು ಪೂರೈಸಲು ಉಪಯೋಗಿಸಿಕೊಳ್ಳುವುದನ್ನು ಕಲಿಯುತ್ತಾರೆ.

ಅಮ್ಮನಾದವಳಿಗೆ ಮಕ್ಕಳ ಪಾಲನೆಯ ವಿಷಯದಲ್ಲಿ, ಅಮ್ಮ ಮತ್ತು ಅತ್ತೆ -ಹೀಗೆ ಎರಡೂ ಕಡೆಯಿಂದಲೂ ಭಿನ್ನಾಭಿಪ್ರಾಯಗಳು ತಲೆದೋರಬಹುದು. ಆದರೆ ತನ್ನಮ್ಮನ ಬಗೆಗೆ ಅವಳ ಧೋರಣೆ ಸ್ವಲ್ಪ ಮೃದು. ಹಾಗೆಯೇ ಮುಕ್ತವಾಗಿ ಮಾತನಾಡುವ ಅವಕಾಶವೂ ಇದೆ. ಆದರೆ ಅತ್ತೆಯೊಂದಿಗೆ ಇದು ಸಾಧ್ಯವಾಗದಿರುವ ಸಂದರ್ಭಗಳೂ ಉಂಟು. ಅಷ್ಟೇ ಅಲ್ಲ, ಸೊಸೆಯ ಮಾತನ್ನು ಅತ್ತೆ “ಇದು ಅವಿಧೇಯತೆ, ತನಗೆ ತೋರುವ ಅಗೌರವ, ತನ್ನನ್ನು ಮೊಮ್ಮಕ್ಕಳಿಂದ ದೂರ ಮಾಡಲು ಸೊಸೆ ಮಾಡುತ್ತಿರುವ ಹುನ್ನಾರ’ ಎಂದು ತಪ್ಪು ಭಾವಿಸಲು ಸಾಧ್ಯವಿದೆ. ಮನೆಯಲ್ಲಿ ಇಂಥ ಕಲಹಗಳು ಪುರುಷರನ್ನೂ ಒಳಗೊಂಡು ಎರಡು ವಿರುದ್ಧ ಪಾರ್ಟಿಗಳನ್ನೇ ಸೃಷ್ಟಿಸಬಹುದು.

ಇಬ್ಬರೂ ಬೇಕು!
ಮೊಮ್ಮಕ್ಕಳಿಗೆ ಅಜ್ಜಿಯ ಸಾಂಗತ್ಯ ಸಿಕ್ಕುವುದು ಸುಲಭದ ಮಾತಲ್ಲ. ಹಿರಿಯ, ಅನುಭವದ, ಅಕ್ಕರೆಯ ಅಜ್ಜಿ ಮಕ್ಕಳಲ್ಲಿ, ಸಂಬಂಧಗಳಲ್ಲಿ ವಿಶ್ವಾಸ-ಭರವಸೆ ಮೂಡಿಸಬಲ್ಲಳು. ಆದರೆ ಮಕ್ಕಳ ಓದು-ಅಭ್ಯಾಸಗಳು-ದೈನಂದಿನ ಕೆಲಸಗಳ ಬಗೆಗೆ “ಅಮ್ಮ’ನದೇ ಕೊನೆಯ ಮಾತು! ಇದು ಇಂದಿನ ದಿನಗಳಿಗೆ ಅನ್ವಯಿಸುವ ಸತ್ಯ! “ಅಯ್ಯೋ, ಮಕ್ಕಳು ಚಿಕ್ಕವರಿರುವಾಗ ಏನೋ ಒಂದೇಟು ಹೊಡೆದರೆ ನಮ್ಮತ್ತೆ ಹೇಗೆ ಬೈಯ್ಯುತ್ತಿದ್ದರು! ನಾನು ತೆಪ್ಪಗೆ ಇರಿ¤ರಲಿಲ್ವೇ?’ ಎಂದು ಐವತ್ತು ವರ್ಷದ ಹಿಂದಿನ ಸಂದರ್ಭ ನೆನೆದು ಈಗಿನ ಅಜ್ಜಿ ಅಲವತ್ತುಗೊಳ್ಳುವ ಹಾಗಿಲ್ಲ. ಅದೇ ಪರಂಪರೆಯನ್ನು ಈಗ ಮುಂದುವರಿಸಲು ಸಾಧ್ಯವೂ ಇಲ್ಲ. ಹತ್ತು ವರ್ಷದ ಮಗುವಿಗೂ “ತಟ್ಟೆಯಲ್ಲಿ ಕಲಸಿ ತುತ್ತಿಡು, ಪಾಪ ಮಗು ಚಿಕ್ಕವನು’ ಎಂದು ಈಗ ಅತ್ತೆ ಸೊಸೆಗೆ ಅಂದರೆ, ಅಜ್ಜಿ-ಅಮ್ಮನಿಗೆ ಬೆದರಿಸಿದರೆ ಅದು ತಪ್ಪೇ. ಮಕ್ಕಳ “ಅಮ್ಮ’ನಿಗೆ ಅವರ ಮೇಲೆ ನಿಸ್ಸಂಶಯವಾಗಿ ಇತರ ಎಲ್ಲರಿಗಿಂತ ಹೆಚ್ಚು ಪ್ರೀತಿ ಎನ್ನುವುದನ್ನು ನಾವೆಲ್ಲರೂ ಒಪ್ಪಲೇಬೇಕು. ಹೀಗಿರುವಾಗ, ಆಕೆಯ ಮಕ್ಕಳು ಅವಳನ್ನು ಪ್ರೀತಿ-ಗೌರವಗಳಿಂದ ಕಾಣಬೇಕಾದರೆ ಮನೆಯ ಇತರರು, ವಿಶೇಷವಾಗಿ ಅಜ್ಜಿ, ಅಮ್ಮನನ್ನು ಪ್ರೀತಿಯಿಂದ ಕಾಣಬೇಕು. ಮಕ್ಕಳ ಮುಂದೆ ಆಕೆಯ ಬಗ್ಗೆ ಒಳ್ಳೆಯ ಮಾತುಗಳನ್ನಾಡಬೇಕು.

ಮಕ್ಕಳ ಆರೈಕೆಯಲ್ಲಿ ಅಜ್ಜಿಯ ಸಹಾಯವನ್ನು ನಿರೀಕ್ಷಿಸುವ “ಅಮ್ಮ’, ಕೆಲವೊಮ್ಮೆಯಾದರೂ ಅವಳ ಸಲಹೆಗಳನ್ನು ಕೇಳಲು ಸಿದ್ಧಳಿರಬೇಕು. ಮಕ್ಕಳೆದುರು ಆಕೆಯನ್ನು ಪ್ರೀತಿ-ಗೌರವದಿಂದ ಮಕ್ಕಳೆದುರು ಕಾಣಬೇಕು. ಬಹುಮುಖ್ಯವಾಗಿ, ಅಮ್ಮಂದಿರು ಗಮನಿಸಬೇಕಾದ ಸಂಗತಿಯೊಂದಿದೆ. ಏನೆಂದರೆ, ಮಕ್ಕಳ ಪಾಲನೆ ಅಜ್ಜಿಯಿಂದ ಸಾಧ್ಯವಾ? ಮಕ್ಕಳೊಂದಿಗೆ ಹೆಣಗಾಡುವಂಥ ಆರೋಗ್ಯ ಆಕೆಗೆ ಇದೆಯಾ ಎಂದು ಯೋಚಿಸಬೇಕು. ಊಟ ಮಾಡಿಸಲು 3 ವರ್ಷದ ಮಗುವಿನ ಹಿಂದೆ ಓಡುವುದು, ತನ್ನ ನಿದ್ರೆಯ ವೇಳಾಪಟ್ಟಿಯನ್ನು ತಪ್ಪಿಸಿ ಮಗು ಶಾಲೆಯಿಂದ ಹಿಂದಿರುಗಲು ಕಾಯುವುದು, ಬೆಳಗ್ಗೆ ವಾಕಿಂಗ್‌ ಮಾಡದೆ, ಮೊಮ್ಮಗುವಿಗೆ ತಿಂಡಿ ಮಾಡಲು ಅವಸರಿಸುವುದು ಇವು ಅಂಥ ಕೆಲ ಸಂದರ್ಭಗಳು. ಇವುಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಲು ಮುಜುಗರ ಪಡುವ “ಅಜ್ಜಿ’ ಕಡೆಗೊಮ್ಮೆ, ಹೇಗೋ ನಿಭಾಯಿಸಿದರೆ ಆಯ್ತು ಎಂದು ಒಪ್ಪಿಬಿಡಬಹುದು. ಅದು ಮಕ್ಕಳಲ್ಲಿ ಅಶಿಸ್ತು ಬೆಳೆಯಲೂ ಕಾರಣವಾಗಬಹುದು.

ಆದೇಶ ಆಗಬಾರದು
ಇಂಥ ಸನ್ನಿವೇಶಗಳಲ್ಲಿ ನಾವು ಗಮನಿಸಲೇಬೇಕಾದ ಕೆಲವು ಅಂಶಗಳಿವೆ. ಮಕ್ಕಳ ಶಿಸ್ತು-ಪಾಲನೆಯ ಜವಾಬ್ದಾರಿ ಪ್ರಾಥಮಿಕವಾಗಿ ಅವರ ಅಪ್ಪ-ಅಮ್ಮಂದಿರದ್ದೇ. ಅಜ್ಜ-ಅಜ್ಜಿ, ಅಪ್ಪ-ಅಮ್ಮಂದಿರ ಈ ಘನಕಾರ್ಯದಲ್ಲಿ ಆಗಾಗ್ಗೆ ಕೈಜೋಡಿಸಬಹುದು. ವಯಸ್ಕ ಮಕ್ಕಳಿಗೆ ತಮ್ಮ ಅನುಭವದ ಸಲಹೆಗಳನ್ನು ನೀಡಬಹುದು. ಆದರೆ ಅದು ನಡೆಯಬೇಕಾದ್ದು ಮಗುವಿನ ಎದುರಲ್ಲ. ಅದು ಆದೇಶವಾಗದೆ, ಸಲಹೆಯಷ್ಟೇ ಆಗಬೇಕು. ಅಜ್ಜಿ-ಅಮ್ಮ ಇಬ್ಬರ ನಡುವೆ ಇರುವ ಉತ್ತಮ ಬಾಂಧವ್ಯ, ಮಕ್ಕಳಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸುತ್ತದೆ. ಅಜ್ಜಿಯ ಅಕ್ಕರೆ, ಮಾರ್ಗದರ್ಶನ, ಅಮ್ಮನ ಶಿಸ್ತು-ಮಕ್ಕಳಿಗೆ ಅಗತ್ಯವಾಗಿ ಬೇಕು. ಇವು ಅಜ್ಜಿಯ ಅತಿ ಪ್ರೀತಿ-ಅಮ್ಮನ ಕಠಿಣ ಶಿಸ್ತು ಆಗದಿರುವಂತೆ ಎಚ್ಚರ ವಹಿಸಬೇಕು.

– ಡಾ. ಕೆ.ಎಸ್‌. ಪವಿತ್ರ

Advertisement

Udayavani is now on Telegram. Click here to join our channel and stay updated with the latest news.

Next