ಬೆಂಗಳೂರು: ಮಲ್ಟಿಫ್ಲೆಕ್ಸ್‌ಗಳಲ್ಲಿ ಶನಿವಾರದಿಂದ ಏಕರೀತಿಯ ಪ್ರವೇಶ ದರ ನಿಗದಿಯಾಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿದೆ.
ಏಪ್ರಿಲ್ ಒಂದರಿಂದ ಜಾರಿಗೆ ಬರಬೇಕಿದ್ದ ಮಲ್ಟಿಫ್ಲೆಕ್ಸ್ ಸೇರಿ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲೂ ಏಕರೀತಿಯ ಪ್ರವೇಶದರ ಕಾರಣಾಂತರಗಳಿಂದ ಮುಂದಕ್ಕೆ ಹೋಗಿದ್ದು, ಮಂತ್ರಿಮಂಡಲದ ಸಭೆಯ ನಂತರ ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ.
2017-18ನೇ ಸಾಲಿನ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಮಲ್ಟಿಫ್ಲೆಕ್ಸ್‌ಗಳೂ ಸೇರಿ ಎಲ್ಲ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶದರ ನೀತಿ ಜಾರಿಗೆ ತರುವ ಜತೆಗೆ, 200 ರೂ.ಗಳ ಗರಿಷ್ಠ ಪ್ರವೇಶದರವನ್ನು ನಿಗದಿಪಡಿಸುವ ಕುರಿತು ಘೋಷಿಸಿದ್ದರು.
ಅದರಂತೆ ಶನಿವಾರದಿಂದ ಎಲ್ಲ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶದರ ಜಾರಿಗೆ ಬರಬೇಕಿತ್ತು. ಈ ವಿಷಯವಾಗಿ ಘೋಷಣೆಯಾಗಿದ್ದರೂ, ಮಂತ್ರಿಮಂಡಲದಲ್ಲಿ ಇನ್ನೂ ಅನುಮೋದನೆ ಸಿಕ್ಕಿಲ್ಲ. ನಂಜನಗೂಡು ಮತ್ತು ಗುಂಡ್ಲುಪೇಟೆಗಳಲ್ಲಿ ಉಪಚುನಾವಣೆಗಳು ನಿಗದಿಯಾಗಿರುವುದರಿಂದ,ಮಂತ್ರಿಮಂಡಲದ ಸಭೆ ಇನ್ನೂ ನಡೆದಿಲ್ಲ. ಆ ಸಭೆ ನಡೆದು, ಅಲ್ಲಿ ಅನುಮೋದನೆ ಸಿಕ್ಕ ನಂತರ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶ ದರ ಜಾರಿಗೆ ಬರಲಿದೆ. ಹಾಗೆ ಜಾರಿಗೆ ಬರಬೇಕಾದರೆ ಇನ್ನೂ ಎರಡು ವಾರಗಳಾದರೂ ಬೇಕಿದೆ.
ಅಲ್ಲಿಯವರೆಗೂ ಮಲ್ಟಿಫ್ಲೆಕ್ಸ್ ಪ್ರವೇಶದರ ಹೆಚ್ಚಾಗಿರಲಿದೆ. ಈ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, “ಉಪಚುನಾವಣೆಗಳು ಘೋಷಣೆಯಾಗಿರುವುದರಿಂದ ಮಂತ್ರಿ ಮಂಡಲದ ಸಭೆ ನಡೆದಿಲ್ಲ. ಮಂತ್ರಿ ಮಂಡಲದಲ್ಲಿ ಈ ವಿಷಯವಾಗಿ ಅನುಮೋದನೆ ಸಿಗುತ್ತಿದ್ದಂತೆ, ರಾಜ್ಯಾದ್ಯಂತ ಏಕರೀತಿ ಪ್ರವೇಶ ದರ ಜಾರಿಗೆ ಬರಲಿದೆ. ಮುಂದಿನ 10 ದಿನದಲ್ಲಿ ಅದು
ಸಾಧ್ಯವಾಗಲಿದೆ’ ಎಂದು ತಿಳಿಸಿದರು.