ಹೊಸದಿಲ್ಲಿ : ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನವೇ ಹಿಮಾಚಲ ಪ್ರದೇಶ ಚುನಾವಣೆಯನ್ನು ನಡೆಸಲು ಏಕೆ ತೀರ್ಮಾನಿಸಲಾಯಿತು ಎಂಬುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಮುಖ್ಯ ಚುನಾವಣಾ ಆಯುಕ್ತ ಅಚಲ್ ಕುಮಾರ್ ಜ್ಯೋತಿ ಅವರು ಇದೀಗ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹವಾಮಾನವೇ ಮುಂತಾಗಿ ಹಲವಾರು ವಿಷಯಗಳು ಈ ರೀತಿಯ ನಿರ್ಧಾರಕ್ಕೆ ಕಾರಣವಾದವು ಎಂದವರು ಹೇಳಿದ್ದಾರೆ.
ಹಿಮಾಚಲ ರಾಜ್ಯದ ಕಿನೋರ್, ಲಾಹೂಲ್ ಸ್ಪಿತಿ ಮತ್ತು ಚಂಬಾ – ಈಮೂರು ಜಿಲ್ಲೆಗಳಲ್ಲಿ ನವೆಂಬರ್ ಅಂತ್ಯದ ವೇಳೆಗೆ ಹಿಮಪಾತ ಆಗುವ ಸಾಧ್ಯತೆ ಇರುವುದರಿಂದ ಮಧ್ಯ ನವೆಂಬರ್‌ಗೆ ಮುನ್ನವೇ ಚುನಾವಣೆ ನಡೆಸುವುದು ಲೇಸೆಂದು ರಾಜಕೀಯ ಪಕ್ಷಗಳು ಹಾಗೂ ರಾಜ್ಯಾಡಳಿತೆ ಕೋರಿಕೊಂಡಿತ್ತು. ಅಂತೆಯೇ ಆ ಕೋರಿಕೆಯನ್ನು ಮನ್ನಿಸಿ ಗುಜರಾತ್ ಚುನಾವಣೆಗೆ ಮುನ್ನವೇ ಹಿಮಾಚಲ ಪ್ರದೇಶ ಚುನಾವಣೆಯನ್ನು ನಡೆಸಲು ತೀರ್ಮಾನಿಸಲಾಯಿತು ಎಂದವರು ಹೇಳಿದರು.
ಹಿಮಾಚಲ ಪ್ರದೇಶ ಚುನಾವಣೆಯ ಫಲಿತಾಂಶ ಗುಜರಾತ್ ಚುನಾವಣೆಯ ಮೇಲೆ ಯಾವ ರೀತಿಯಲ್ಲೂ ಉಂಟಾಗದಂತೆ ಗುಜರಾತ್ ಚುನಾವಣೆಗಳನ್ನು ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದರು.
ಗುಜರಾತ್‌ನಲ್ಲಿ ಈಚೆಗೆ ಉಂಟಾದ ಭೀಕರ ಪ್ರವಾಹದಿಂದಾಗಿ ಅಲ್ಲಿನ ಮೂಲ ಸೌಕರ್ಯಗಳಿಗೆ ವ್ಯಾಪಕ ಹಾನಿ ಉಂಟಾಗಿದ್ದು ಅವುಗಳನ್ನು ಚುನಾವಣೆಗೆ ಮುನ್ನ ಸರಿಪಡಿಸುವ ಅಗತ್ಯವಿದೆ; ಹಾಗಾಗಿ ಗುಜರಾತ್ ಚುನಾವಣೆಗೆ ಕಾಲಾವಕಾಶ ಕಲ್ಪಿಸಲಾಗಿದೆ ಎಂದು ಸಿಇಸಿ ಹೇಳಿದರು.