ತೀರ್ಥಹಳ್ಳಿ : ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಲುವಾಗಿ ಭೀಮೇಶ್ವರ ಸಂಗಮದಿಂದ ಹೋರಾಟ ನಡೆಯುತ್ತಿದೆ. ಆದರೆ ಈ ಯೋಜನೆಯಿಂದ ತಾಲೂಕಿಗೆ ಅನುಕೂಲವಿದೆ.
ಈ ಯೋಜನೆಗೆ ಯಾರು ಕೂಡ ಅಡ್ಡಿ ಪಡಿಸಬಾರದು. ಯಾವುದೇ ಕಾರಣಕ್ಕೂ ರದ್ದು ಆಗಬಾರದು ರದ್ದು ಆಗಲು ನಾವು ಬಿಡುವುದಿಲ್ಲ.ಅವರು ಜೀವನ ಉಳಿಸಿ ಅಂದರೆ ನಾವು ಜೀವ ಉಳಿಸಿ ಎಂದು ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾ.ಪಂ ಒಕ್ಕೂಟ ಅಧ್ಯಕ್ಷರಾದ ಟಿ ಜೆ ಅನಿಲ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಭೀಮೇಶ್ವರ ಸಂಗಮದ ಹೋರಾಟ ಬೇರೆ ದಿಕ್ಕಿಗೆ ಹೋಗುತ್ತಿದೆ ಎಂಬ ಆತಂಕ ಇದೆ. ತಾಲೂಕಿನಲ್ಲಿ 36 ಗ್ರಾಮ ಪಂಚಾಯಿತಿ ಇದರ ಫಲ ಅನುಭವಿಸುತ್ತದೆ. 32 ಗ್ರಾಮಪಂಚಾಯಿತಿ ಈಗಾಗಲೇ ಇದಕ್ಕೆ ಒಪ್ಪಿಗೆ ಸೂಚಿಸಿವೆ. ಸಿಂಗನಬಿದರೆ ಮತ್ತು ಮಂಡಗದ್ದೆ ಈ ಯೋಜನೆಯಲ್ಲಿ ಬರುವುದಿಲ್ಲ. ಉಳಿದಂತೆ ಹೊಸಳ್ಳಿ, ಮೇಲಿನಕುರುವಳ್ಳಿ ಹೆಗ್ಗೋಡು, ತೀರ್ಥಮುತ್ತೂರು ಇಲ್ಲಿಯವರೆಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ತಟಸ್ಥ ಹೊಂದಿದ್ದಾರೆ. ಅನುಷ್ಠಾನ ಮಾಡಿ ಅಥವಾ ಮಾಡಬೇಡಿ ಎನ್ನುವುದರ ಬಗ್ಗೆ ಹೇಳಿಲ್ಲ ಎಂದರು.
ಹೋರಾಟದ ಆರಂಭದಲ್ಲಿ ರೈತರಿಗೆ ತೊಂದರೆ ಆಗುತ್ತದೆ ಎಂದು ಹೇಳುತ್ತಿದ್ದರು. ನಮ್ಮಲ್ಲಿ ಕೆಲವು ಗ್ರಾಮ ಪಂಚಾಯಿತಿಗಳು ನದಿಯ ನೀರನ್ನು ಅವಲಂಬಿಸಿದ್ದರೆ ಉಳಿದ ಕೆಲವು ಗ್ರಾಮ ಪಂಚಾಯಿತಿಗಳು ಬೋರ್ ವೆಲ್ ನೀರನ್ನು ಅವಲಂಬಿಸಿದೆ. ವರ್ಗ 1 ನ್ನು ಬಳಸಿ ಬೋರ್ ತೆಗೆಯುವ ಪರಿಸ್ಥಿತಿಯಲ್ಲಿ ನಾವಿಲ್ಲ, ಈ ಯೋಜನೆ ಜಾರಿಯಾಗಬೇಕು. ಶುದ್ಧ ನೀರು ಕೊಡುವ ಜೊತೆಗೆ ಯೋಜನೆ ಜಾರಿಯಾದರೆ 1 ಲಕ್ಷ ಹಣ ಪ್ರತಿಯೊಂದು ಗ್ರಾಮಪಂಚಾಯಿತಿಗೆ ಉಳಿಯುತ್ತದೆ ಎಂದರು.
ತಾಲೂಕಿನಲ್ಲಿ ಪಟ್ಟಣ ಹೊರತು ಪಡಿಸಿ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ನದಿಯ ಪಕ್ಕದಲ್ಲಿ ಗ್ರಾಮಗಳು ಇದ್ದರೂ ಎರಡು ದಿನಕ್ಕೆ ಒಂದು ಬಾರಿ ನೀರು ಬಿಡುತ್ತಿದ್ದೇವೆ. ಶುದ್ಧ ಕುಡಿಯುವ ನೀರು ಸಿಕ್ಕಿದರೆ ಮೋಟರ್ ಅವಶ್ಯಕತೆ ಇಲ್ಲ, ವಿದ್ಯುತ್ ಉಳಿಯುತ್ತದೆ. ರೈತರ ಮಾರಣಹೋಮ ಆಗುತ್ತಿದೆ ಎಂದು ಬೀದಿಗೆ ಇಳಿಯುವುದು ಸರಿಯಲ್ಲ. ದಲಿತ ಕೇರಿಗಳಿಗೆ ಶುದ್ಧ ಕುಡಿಯುವ ನೀರೇ ಸರಿ ಸಿಗುತ್ತಿಲ್ಲ, ಇಂತಹ ಯೋಜನೆ ಜಾರಿಯಾದರೆ ಎಲ್ಲರಿಗೂ ಸಿಗುತ್ತದೆ.ಈ ಯೋಜನೆ ಜಾರಿ ಆಗಬಾರದು ಎಂದು ಇವರ ಹಿಂದೆ ಯಾರೋ ಇದ್ದಾರೆ ಎಂಬ ಸಂಶಯ ಹುಟ್ಟುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರಾಗಿರುವ ನವೀನ್ ಹೊಸಕೆರೆ, ಚಂದ್ರಶೇಖರ, ನವೀನ್ ಆರ್, ಸುಬ್ರಮಣ್ಯ, ಕವಿತಾ ಭಾಸ್ಕರ್, ಚಂದ್ರಶೇಖರ ಲೋಕೇಶ್, ರಾಘವೇಂದ್ರ ಪವಾರ್ ಸೇರಿ ಹಲವರು ಉಪಸ್ಥಿತರಿದ್ದರು.