ಬೆಂಗಳೂರು: ಆ್ಯಂಬಿಡೆಂಟ್ ಕಂಪನಿ ವಂಚನೆ ಪ್ರಕರಣದ ತನಿಖೆ ಚುರುಕುಗೊಂಡ ಬೆನ್ನಲ್ಲೇ ಅಜ್ಮೀರಾ ಗ್ರೂಪ್ಸ್ ಕಂಪನಿಯಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ ಎನ್ನಲಾದ ನೂರಾರು ಮಂದಿ ಚಾಮರಾಜಪೇಟೆಯಲ್ಲಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು.
ಆ್ಯಂಬಿಡೆಂಟ್ ಕಂಪನಿ ತನಿಖೆ ಮಾದರಿಯಲ್ಲೇ ಅಜ್ಮೀರಾ ಗ್ರೂಪ್ಸ್ ಕೂಡ ನೂರಾರು ಮಂದಿಗೆ ಸುಮಾರು 250 ಕೋಟಿ ರೂ. ವಂಚಿಸಿದೆ. ಈ ಸಂಬಂಧ ಈಗಾಗಲೇ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಕಣ ದಾಖಲಾಗಿದೆ. ಆದರೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡಿಲ್ಲ.
ಕೂಡಲೇ ಆರೋಪಿಗಳನ್ನು ಬಂಧಿಸಿ ಕನಿಷ್ಠ ಹೂಡಿಕೆ ಹಣವನ್ನಾದರೂ ವಾಪಸ್ ಕೊಡಿಸುವಂತೆ ಹೂಡಿಕೆದಾರರು ಕೋರಿದರು. ಮನವಿ ಸ್ವೀಕರಿಸಿದ ಸಿಸಿಬಿಯ ಹಿರಿಯ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.
ಕಳೆದ ಕೆಲ ವರ್ಷಗಳ ಹಿಂದೆ ತಬ್ರೇಜ್ ಪಾಷಾ ಹಾಗೂ ಅಬ್ದುಲ್‌ದಸ್ತಗಿರ್ ಎಂಬವರು ನೂರಾರು ಗ್ರಾಹಕರಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡಿದ್ದಾರೆ. ಕೇವಲ 4 ತಿಂಗಳಲ್ಲಿ ಕನಿಷ್ಠ 1 ಲಕ್ಷ ರೂ. ಹೂಡಿಕೆ ಮಾಡಿದರೆ 4 ತಿಂಗಳಿಗೆ ಹೆಚ್ಚುವರಿಯಾಗಿ 40 ಸಾವಿರ ಸೇರಿಸಿ 1.40 ಲಕ್ಷ ರೂ. ಹಿಂದಿರುಗಿಸುತ್ತೇವೆ ಎಂದು ಆಮಿಷವೊಡ್ಡಿದ್ದರು. ಇದೇ ರೀತಿ 150-250 ಕೋಟಿ ರೂ.ವರೆಗೆ ಹೂಡಿಕೆ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಇಡೀ ಕುಟುಂಬ 2.5 ಕೋಟಿ ಹೂಡಿಕೆ: ನಮ್ಮ ಸ್ನೇಹಿತರ ಮೂಲಕ ಅಜ್ಮೀರಾ ಗ್ರೂಪ್ಸ್ ಬಗ್ಗೆ ಮಾಹಿತಿ ಪಡೆದು ನಮ್ಮ ಇಡೀ ಕುಟುಂಬದ 14 ಮಂದಿ ಹೆಸರಿನಲ್ಲಿ 2.5 ಕೋಟಿ ರೂ. ಹೂಡಿಕೆ ಮಾಡಿದ್ದೇವೆ. ಬ್ಯಾಂಕ್ ಹಾಗೂ ಕೆಲ ಸೊಸೈಟಿಗಳಲ್ಲಿ ಸಾಲ ಪಡೆದು ಹೂಡಿಕೆ ಮಾಡಿದ್ದೇವೆ. ಇದುವರೆಗೂ ಹಣ ವಾಪಸ್ ಬಂದಿಲ್ಲ.
ಈ ಸಂಬಂಧ ಜಯನಗರ ಠಾಣೆಯಲ್ಲಿ ದೂರು ನೀಡಲು ಹೋದಾಗ ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕಿದರು. ಶನಿವಾರ ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ದೂರು ನೀಡಿದ್ದೇವೆ ಎಂದು ಜಯನಗರದ ನಿವಾಸಿ, ಹೂಡಿಕೆದಾರ ಎಂ.ಎ.ಶರೀಫ್ ಹೇಳಿದರು.
ಅಜ್ಮೀರಾ ಗ್ರೂಪ್ಸ್ ಹೂಡಿಕೆದಾರರು ಪ್ರಕರಣದ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಅಜೆ¾àರಾ ಗ್ರೂಪ್ಸ್ ವಿರುದ್ಧ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿಯಲಿದೆ.
-ಅಲೋಕ್‌ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ)