ಚಿಂಚೋಳಿ: ಪಟ್ಟಣದ ಹತ್ತಿರ ಹರಿಯುವ ಮುಲ್ಲಾಮಾರಿ ನದಿಗೆ ನಿರ್ಮಿಸುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿ ಕೆಲಸ ಭರದಿಂದ ನಡೆಯುತ್ತಿದೆ.
ಸ್ಥಳೀಯ ಪುರಸಭೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ 2010-11ರಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ 5ಕೋಟಿ ರೂ.ಅನುದಾನವನ್ನು ಆಗಿನ ಬಿಜೆಪಿ ಶಾಸಕ ಸುನೀಲ ವಲ್ಯಾಪುರೆ ಮಂಜೂರಿ ಮಾಡಿದ್ದರು. ಆದರೆ ಕಾರಣಾಂತರದಿಂದ ಸೇತುವೆ ನಿರ್ಮಾಣಕ್ಕಾಗಿ ಬಂದ ಅನುದಾನ ಸರಕಾರಕ್ಕೆ ಮತ್ತೇ ಮರಳಿ ಹೋಗಿತ್ತು. 2015-16ನೇ ಸಾಲಿನಲ್ಲಿ ಕಾಂಗ್ರೆಸ್ ಶಾಸಕ ಡಾ|ಉಮೇಶ ಜಾಧವ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಸೇತುವೆ ನಿರ್ಮಾಣಕ್ಕಾಗಿ 5ಕೋಟಿ ರೂ.ಅನುದಾನ ಮಂಜೂರಿಗೊಳಿಸಿ ಕಾಂಗ್ರೆಸ್ ಸರಕಾರದ ಆಗಿನ ನಗರಾಭಿವೃದ್ಧಿ ಸಚಿವ ಖಮರುಲ್ ಇಸ್ಮಾಂ ಕಾಮಗಾರಿಗೆ ಚಾಲನೆ ನೀಡಿದ್ದರು.
ಸೇತುವೆ ನಿರ್ಮಾಣ ನಡೆಯುತ್ತಿರುವ ಸಂದರ್ಭದಲ್ಲಿ ಸೇತುವೆ ಛತ್ತು ಕುಸಿದು ಬಿದ್ದು ಏಳು ಕಾರ್ಮಿಕರು ಗಾಯಗೊಂಡಿದ್ದರು. ಕಾಮಗಾರಿ ಗುಣಮಟ್ಟದಿಂದ ನಡೆಯುತ್ತಿಲ್ಲವೆಂದು ಪುರಸಭೆ ಸದಸ್ಯರು ರಾಜ್ಯ ಸರಕಾರದ ನಗರಾಭಿವೃದ್ಧಿ ಸಚಿವರ ಗಮನಕ್ಕೆ ತಂದಿದ್ದರು. 3ನೇ ತಂಡ ಪರಿಶೀಲನೆ ನಡೆಸಿ ಕಾಮಗಾರಿ ಗುಣಮಟ್ಟದಿಂದ ನಡೆಸುವಂತೆ ಗುತ್ತಿಗೆದಾರನಿಗೆ ಸೂಚನೆ ನೀಡಿದ್ದರಿಂದ ಈಗ ಸೇತುವೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಸೇತುವೆ ನಿರ್ಮಾಣದಿಂದ ನಿಮಾಹೊಸಳ್ಳಿ, ಗೌಡನಹಳ್ಳಿ, ಈದಗಾ ಮೈದಾನ ಮತ್ತು ಕೊಳಚೆ ಮಂಡಳಿ ಹೌಸಿಂಗ್ ಕಾಲೋನಿ ನಿವಾಸಿಗಳಿಗೆ, ಹೊಲಗಳಿಗೆ ಹೋಗಲು ಹಾಗೂ ಕಲ್ಲು ಗಣಿ ಕಾರ್ಮಿಕರಿಗೆ ಉಪಯೋಗವಾಗಲಿದೆ.
ಕಳೆದ ವರ್ಷ ಮುಲ್ಲಾಮಾರಿ ನದಿ ಮಳೆಗಾಲದಲ್ಲಿ ತುಂಬಿ ಹರಿದಿದ್ದರಿಂದ ಸೇತುವೆ ನಿರ್ಮಾಣಕ್ಕೆ ಅಡ್ಡಿಯಾಗಿ ಕೆಲಸ ನಿಲ್ಲಿಸಲಾಗಿತ್ತು. ನದಿಯಲ್ಲಿ ನೀರಿನ ಪ್ರಮಾಣ ಸದ್ಯ ಕಡಿಮೆ ಇರುವುದರಿಂದ ಕೆಲಸ ಚುರುಕಿನಿಂದ ನಡೆಯುತ್ತಿದೆ. ಸರಕಾರದಿಂದ ಪುರಸಭೆಗೆ ಸೇತುವೆ ಮುಂದುವರಿದ ಕಾಮಗಾರಿಗೋಸ್ಕರ ಫೇಸ್ 4ರಲ್ಲಿ ಒಂದು ಕೋಟಿ ರೂ.ಅನುದಾನ ನೀಡಿದೆ. ಮುಂದಿನ ಆರು ತಿಂಗಳಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. –ಕಾಶಿನಾಥ ಧನ್ನಿ, ಪುರಸಭೆ ಮುಖ್ಯಾಧಿಕಾರಿ