ಮೂಲ್ಕಿ : ಮೂಲ್ಕಿಯನ್ನು ತಾಲೂಕು ಆಗಿ ಘೋಷಿಸುವಲ್ಲಿ ತಾನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ. ಈ ಪ್ರಕ್ರಿಯೆ ಸದ್ಯದಲ್ಲೇ ಈಡೇರಲಿದೆ ಎಂದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು. ಮೂಲ್ಕಿ ನ.ಪಂ.ಆಶ್ರಯ ದಲ್ಲಿ ಜರಗಿದ 69ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣಗೈದು ಮಾತನಾಡಿದರು.
ಮೂಲ್ಕಿಯ ಕಾರ್ನಾಡು ಸದಾಶಿವ ರಾಯರು ತನ್ನ ಸರ್ವಸ್ವವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದವರು. ಯುವ ಜನರಿಗೆ ಆದರ್ಶ, ನೆನಪು ಶಾಶ್ವತವಾಗಿ ಉಳಿಸುವ ಮಹತ್ವದ ಯೋಜನೆ ರೂಪಿಸಲಾಗುವುದು ಎಂದರು. ಮೂಲ್ಕಿಗೆ ತಾಲೂಕಾಗುವ ಎಲ್ಲ ಅರ್ಹತೆ ಇದೆ. ಅದಕ್ಕೆ ಪೂರಕವಾಗಿ ಇಲ್ಲಿ ಅಗ್ನಿಶಾಮಕ ದಳವನ್ನು ಶೀಘ್ರದಲ್ಲಿ ಸ್ಥಾಪಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಮೂಲ್ಕಿ ನ.ಪಂ. ಅಧ್ಯಕ್ಷ ಸುನೀಲ್ ಆಳ್ವ ಮಾತನಾಡಿ, ದೇಶಕ್ಕೆ ಪ್ರಜಾತಂತ್ರ ವ್ಯವಸ್ಥೆಯನ್ನು ಒದಗಿಸಿರುವ ಡಾ| ಬಿ. ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಿದರು. ಮೂಲ್ಕಿಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ. ಸರಕಾರದಿಂದ 3 ಕೊಟಿ ರೂ. ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ರೂ. 2 ಕೋಟಿ ವೆಚ್ಚದಲ್ಲಿ ನಗರಾಭಿವೃದ್ಧಿಯ ಮೂಲಕ ವಿವಿಧ ಕಾಮಗಾರಿಗೆ ಹಾಗೂ ರೂ. 14 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಶಾಶ್ವತ ಯೋಜನೆ ಪ್ರಾರಂಭವಾಗಿದೆ ಎಂದರು.
ಮೂಲ್ಕಿ ಪೊಲೀಸ್ ಮತ್ತು ಗ್ರಹರಕ್ಷಕ ದಳ ಮೂಲ್ಕಿ ಘಟಕದ ನೇತೃತ್ವದಲ್ಲಿ ವಿಜಯ ಕಾಲೇಜು ಮೂಲ್ಕಿ ಮತ್ತು ಶ್ರೀ ನಾರಾಯಣ ಗುರು ವಿದ್ಯಾಸಂಸ್ಥೆಯ ಎನ್.ಸಿ.ಸಿ. ಮತ್ತು ನೆವಲ್, ಭಾರತ್ ಸ್ಕೌಟ್ ಆ್ಯಂಡ್ ಗೈಡ್ಸ್, ಭಾರತ್ ಸೇವಾದಳ ಹಾಗೂ ಕಿಲ್ಪಾಡಿ ಮೆಡಲಿನ್ ಪ.ಪೂ. ಕಾಲೇಜು, ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆ, ಸಿ.ಎಸ್ .ಐ. ಕಾರ್ನಾಡು, ಎಂ.ಸಿ.ಟಿ. ಶಾಲೆ ಕಿಲ್ಪಾಡಿ, ಬೆಥನಿ ಶಾಲೆ ಕಿಲ್ಪಾಡಿ, ಮೆಡಲಿನ್ ಶಾಲೆ ಮೂಲ್ಕಿ ಮುಂತಾದ ವಿದ್ಯಾರ್ಥಿ ಘಟಕಗಳ ಸದಸ್ಯರು ಪರೇಡ್ ಕಮಾಂಡರ್ ಮೂಲ್ಕಿ ಸಬ್ ಇನ್‌ಸ್ಪೆಕ್ಟರ್ ಶೀತಲ್ ಅಲಗೂರು ಅವರ ನೇತೃತ್ವದ ಪರೇಡ್ ನಡೆಯಿತು.
ನ.ಪಂ. ಉಪಾಧ್ಯಕ್ಷೆ ರಾಧಿಕಾ ಯಾದವ, ನಗರ ಯೋಜನೆ ಹಾಗೂ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ.ಎಂ., ಮೂಲ್ಕಿ ತಹಶೀಲ್ದಾರ್ ಮಾಣಿಕ್ಯ, ಮೂಲ್ಕಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಅಜಿತ್ ಶೆಟ್ಟಿ, ಪೊಲೀಸ್ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ಮುಖ್ಯ ಅತಿಥಿಗಳಾಗಿದ್ದರು.
ಮುಖ್ಯಾಧಿಕಾರಿ ಇಂದು ಎಂ. ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಅಶೋಕ್ ವಂದಿಸಿದರು. ನ್ಯಾಯವಾದಿ ಭಾಸ್ಕರ ಹೆಗ್ಡೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಸಾಧಕರನ್ನು ಸಮ್ಮಾನಿಸಲಾಯಿತು. ಸ್ವತ್ಛ ಭಾರತ ಯೋಜನೆಯಲ್ಲಿ ವಿಶೇಷವಾಗಿ ಸಹಕರಿಸಿರುವ ನಾಗರಿಕರಾದ ಹರೀಶ್ ಅಮೀನ್ ಮತ್ತು ಸುಕೃತ ಎಸ್. ಪುತ್ರನ್, ವಿಜಯ ಕಾಲೇಜಿನ ಚಿನ್ನದ ಪದಕ ವಿಜೇತ ಎನ್‌ಸಿಸಿ ನೇವಲ್ ಕೆಡೆಟ್ ಹರ್ಷಲ್ ಕುಮಾರ್, ಗೃಹ ರಕ್ಷಕ ಘಟಕಾಧಿಕಾರಿಯಾಗಿ ನಿವೃತ್ತಿಯಾಗಿರುವ ಎಚ್. ಮನ್ಸೂರ್ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು.