ಮೂಲ್ಕಿ: ದೇವಸ್ಥಾನಗಳಲ್ಲಿ ನಡೆಯುವ ಬ್ರಹ್ಮಕಲಶ ವಿಧಿವಿಧಾನಗಳು ಕ್ಷೇತ್ರ ಸಾನ್ನಿಧ್ಯದ ಶಕ್ತಿಯನ್ನು ಸಂಚಯನಗೊಳಿಸಿ ಭಕ್ತ ಸಮುದಾಯಕ್ಕೆ ಮತ್ತು ಊರಿಗೆ ಕ್ಷೇಮವನ್ನು ಉಂಟು ಮಾಡುತ್ತವೆ, ಈ ಕಾರ್ಯದಿಂದ ನಾಡಿನ ಪ್ರಜೆಗಳಲ್ಲಿ ಒಗ್ಗಟ್ಟು ಮತ್ತು ಸಾಮೂಹಿಕ ಸಾಮರಸ್ಯದ ಶಕ್ತಿ ಉಂಟಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯ ಪರಂಪರೆಯಲ್ಲಿ ಅಧ್ಯಾತ್ಮ ಸಂಪತ್ತು ತುಂಬಿ ತುಳುಕುತ್ತಿದೆ. ಈ ಸಂಪತ್ತನ್ನು ದೇವರ ಆರಾಧನೆಯ ಮೂಲಕ ಭಕ್ತರಿಗೆ ತಲುಪಿಸುವ ಪವಿತ್ರ ಕಾರ್ಯ ದೇವಸ್ಥಾನಗಳ ಮೂಲಕ ನಡೆಯುತ್ತಿದೆ ಎಂದು ಡಾ|
ಹೆಗ್ಗಡೆಯವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮಹಾಬಲೇಶ್ವರ ಭಟ್ ಎಂ.ಎಸ್. ಮಾತನಾಡಿ, ದೇವಸ್ಥಾನಗಳ ಮೂಲಕ ಊರಿನ ಬೆಳವಣಿಗೆ ಮಾತ್ರವಲ್ಲದೆ ಸಮನ್ವಯದ ಉತ್ತಮ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮೋಹನ ಆಳ್ವ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಮೂಲಕ ಹೊರತರಲಾದ ವಿಶೇಷ ಅಂಚೆ ಲಕೋಟೆಯನ್ನು ಡಾ| ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶಾಸಕ ಕೆ. ಅಭಯಚಂದ್ರ ಜೈನ್ ಮತ್ತು ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮಾತನಾಡಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಮುಂಬಯಿ ಉದ್ಯಮಿ ಐಕಳ ಹರೀಶ್ ಶೆಟ್ಟಿ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಪ್ರಮೀಳಾ, ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ಪದ್ಮನಾಭ ಕೋಟ್ಯಾನ್, ದೇವಳ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ, ಆನುವಂಶಿಕ ಮೊಕ್ತೇಸರ, ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಂ. ನಾರಾಯಣ ಶೆಟ್ಟಿ, ಕಾರ್ಯಾಧ್ಯಕ್ಷ ಕಿಲ್ಪಾಡಿ ಬಂಡಸಾಲೆ ಶೇಖರ್ ಶೆಟ್ಟಿ, ಮಾಜಿ ಅಧ್ಯಕ್ಷ ಜಯಂತ್ ರೈ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ, ದಾನಿ ರೇಶ್ಮಾ ರವಿರಾಜ್ ದುಬೈ, ಕಟೀಲು ಕ್ಷೇತ್ರದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ, ಉದ್ಯಮಿ ಯದುನಾರಾಯಣ ಶೆಟ್ಟಿ, ಮಂಗಳೂರು ಕಾಳಿಕಾಂಬಾ ದೇವಸ್ಥಾನ ಆಡಳಿತ ಮೊಕ್ತೇಸರ ಕೇಶವ ಆಚಾರ್ಯ, ಉದ್ಯಮಿ ಪನಿಕೆರೆ ಜಗದೀಶ್ ಪ್ರಭು, ಪ್ರೇಮಲತಾ ಪಿ. ಬಂಗೇರ, ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀಕ್ಷಕ ಜಗದೀಶ ಪೈ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುನಿಲ್ ಆಳ್ವ ಸ್ವಾಗತಿಸಿದರು. ಸಂತೋಷ್ ಕುಮಾರ್ ಹೆಗ್ಡೆ ವಂದಿಸಿದರು.