Advertisement

ಮೂಲ್ಕಿ-ಕಟೀಲು ಬೈಪಾಸ್‌; ಇನ್ನೂ ಅಂತಿಮವಾಗದ “ಪಥ’ನಿರ್ಧಾರ!

08:20 PM Sep 21, 2021 | Team Udayavani |

ಮಹಾನಗರ: ದ.ಕ. ಜಿಲ್ಲೆಯ ಬಹುನಿರೀಕ್ಷಿತ ಮೂಲ್ಕಿಯಿಂದ ಕಿನ್ನಿಗೋಳಿ, ಕಟೀಲು, ಕೈಕಂಬ, ಪೊಳಲಿ, ಬಿ.ಸಿ. ರೋಡ್‌, ಮುಡಿಪು, ತೊಕ್ಕೊಟ್ಟು ಹಾಲಿ ಮಾರ್ಗನಕ್ಷೆಯಲ್ಲಿ ಸುಸಜ್ಜಿತ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದು 2 ವರ್ಷ ಸಂದರೂ ರಸ್ತೆ ಹಾದು ಹೋಗುವ “ಪಥ ನಿರ್ಧಾರ’ ಮಾತ್ರ ಹೆದ್ದಾರಿ ಇಲಾಖೆಯಿಂದ ಇನ್ನೂ ಅಂತಿಮವಾಗಿಲ್ಲ!

Advertisement

ಶಿಲಾನ್ಯಾಸ ನಡೆಯುವ ಸಂದರ್ಭ ಸಿದ್ಧಪಡಿಸಿದ ಡಿಪಿಆರ್‌ಗೆ ಒಪ್ಪಿಗೆ ದೊರಕಿದ್ದರೂ, ಆ ಬಳಿಕ ವೆಚ್ಚ ಕಡಿಮೆ/ ಪರಿಸರ ಸ್ನೇಹಿ ಕಾರಣದಿಂದ ಹಳೆ ಡಿಪಿಆರ್‌ ಬಿಟ್ಟು ಹೊಸ ರೂಟ್‌ನಲ್ಲಿ “ಗ್ರೀನ್‌ ಫೀಲ್ಡ್‌ ಅಲೈನ್‌ಮೆಂಟ್‌’ ಆಗಿ ಹೆದ್ದಾರಿ ನಿರ್ಮಿಸಲು ಇಲಾಖೆ ಆಸಕ್ತಿ ತೋರಿದ ಕಾರಣದಿಂದ ಯಾವ ಪಥ ಅಂತಿಮ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಆದರೂ, ಹೆದ್ದಾರಿ ಇಲಾಖೆಯ ಮೂಲಗಳ ಪ್ರಕಾರ ಎರಡನೇ ಆಯ್ಕೆ ಕೈಬಿಟ್ಟು ಹಳೆಯ ಡಿಪಿಆರ್‌ ಮಾದರಿಯಲ್ಲಿಯೇ ರಸ್ತೆ ನಿರ್ಮಿಸಲು ಹೆದ್ದಾರಿ ಇಲಾಖೆ ಈಗ ಒಲವು ತೋರಿಸುತ್ತಿದ್ದು, ಅಂತಿಮ ತೀರ್ಮಾನ ಇನ್ನಷ್ಟೇ ಆಗಬೇಕಿದೆ.

ಈಗಾಗಲೇ ಡಿಪಿಆರ್‌ ಸಿದ್ಧಪಡಿಸಿದ ರಿಂಗ್‌ ರಸ್ತೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು 2019ರ ಮಾ. 5ರಂದು ಶಿಲಾನ್ಯಾಸ ಮಾಡಿದ್ದರು. ಈ ಮಾರ್ಗನಕ್ಷೆ ಪ್ರಕಾರ ಹಾಲಿ ಇರುವ ರಸ್ತೆಗಳನ್ನೇ ವಿಸ್ತರಣೆಗೊಳಿಸಿ ಹೆದ್ದಾರಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧಪಡಿಸಿ ಕೇಂದ್ರ ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಲಾಗಿತ್ತು.

ಏನಿದು 2 ಪಥ ?:

91.20 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣಕ್ಕೆ ಭಾರತೀಯ ರಾ.ಹೆ. ಪ್ರಾಧಿಕಾರವು ಡಿಪಿಆರ್‌ ಅನ್ನು ತಯಾರಿಸಿ, ಪ್ರಾಧಿಕಾರದ ಕೇಂದ್ರ ಕಚೇರಿಯು 2017ರಲ್ಲಿ ಅನುಮೋದನೆ ನೀಡಿ, ಸ್ಟುಫ್‌ ಕನ್ಸಲ್ಟೆನ್ಸಿ ಪ್ರೈ.ಲಿ. ಅಧಿಕಾರಿಗಳು ಸರ್ವೇ ವರದಿ ಕೂಡ ಸಲ್ಲಿಸಿದ್ದರು. ಈ ರಸ್ತೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು 2019ರ ಮಾ. 5ರಂದು ಶಿಲಾನ್ಯಾಸ ಕೂಡ ಮಾಡಿದ್ದರು. ಆದರೆ, ಪರಿಹಾರ ಹಾಗೂ ಯೋಜನೆ ವೆಚ್ಚವು ದುಪ್ಪಟ್ಟಾಗುತ್ತಿರುವ ಹಿನ್ನೆಲೆಯಲ್ಲಿ ಅನುಮೋದನೆ ನೀಡುವಲ್ಲಿ ತಡವಾಗಿತ್ತು.

Advertisement

ಇದೇ ಸಂದರ್ಭ ದೇಶದ ಎಲ್ಲ ಕಡೆಗಳಲ್ಲಿ ಹೊಸದಾಗಿ ಮಾಡುವ ರಿಂಗ್‌ ರಸ್ತೆ/ವರ್ತುಲ ರಸ್ತೆಯನ್ನು ಹಾಲಿ ರಸ್ತೆಯ ಪಕ್ಕ ಮಾಡುವ ಬದಲು ಹೊಸದಾಗಿ “ಗ್ರೀನ್‌ ಫೀಲ್ಡ್‌ ಅಲೈನ್‌ಮೆಂಟ್‌’ ಎಂಬ ಮಾದರಿಯಲ್ಲಿ ಮಾಡಲು ಹೆದ್ದಾರಿ ಇಲಾಖೆ ನಿರ್ಧರಿಸಿತು. ಹೀಗಾಗಿ ಅನುಮೋದನೆಗೆ ಹೋಗಿದ್ದ ಮೂಲ್ಕಿ-ಕಟೀಲು-ತೊಕ್ಕೊಟ್ಟು ರಸ್ತೆ ಬಾಕಿಯಾಗಿತ್ತು. ಬದಲಾಗಿ ಗ್ರೀನ್‌ ಫೀಲ್ಡ್‌ ಅಲೈನ್‌ಮೆಂಟ್‌ ಮಾದರಿಯಲ್ಲಿ ಹೊಸ ಡಿಪಿಆರ್‌ ಸಿದ್ಧಪಡಿಸುವಂತೆ ಸಚಿವಾಲಯವು ರಾ. ಹೆದ್ದಾರಿ ಪ್ರಾಧಿಕಾರದ ಮಂಗಳೂರು ಕಚೇರಿಗೆ ನಿರ್ದೇಶಿಸಿತ್ತು.

ಗ್ರೀನ್‌ ಫೀಲ್ಡ್‌ಗೆ ಆಕ್ಷೇಪ:

ಗ್ರೀನ್‌ ಫೀಲ್ಡ್‌ ಮಾದರಿಯು ಹಾಲಿ ಮುಖ್ಯ ರಸ್ತೆ ಹೊರತುಪಡಿಸಿ ಹೊಸದಾಗಿಯೇ ಇತರ ಭಾಗ ದಲ್ಲಿಯೇ ಹೋಗಲಿದೆ. ಜತೆಗೆ ಕರಾವಳಿ ಭಾಗದಲ್ಲಿ ಅರಣ್ಯ, ಗುಡ್ಡಗಾಡು ಪ್ರದೇಶ ಇರುವುದರಿಂದ ಹೊಸ ರಸ್ತೆ ಅಲ್ಲಿಂದ ಹಾದುಹೋದರೆ ಸ್ಥಳೀಯ ಜನರಿಗೆ ಉಪಯೋಗವಾಗದು. ಜತೆಗೆ ವೆಚ್ಚ ಕೂಡ ಅಧಿಕವಾಗುವ ಸಾಧ್ಯತೆಯಿದೆ. ಹೀಗಾಗಿ ಗ್ರೀನ್‌ ಫೀಲ್ಡ್‌ ಚಿಂತನೆಗೆ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದೆ. ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಕೂಡ ಈಗಾಗಲೇ ಪ್ರಸ್ತಾವಿತ ನೂತನ ವರ್ತುಲ ರಸ್ತೆಯ ಮಾರ್ಗನಕ್ಷೆ (ಅಲೈನ್‌ಮೆಂಟ್‌) ಯನ್ನು ಬದಲಿಸಿದರೆ ಒಪ್ಪಲು ಆಗುವುದಿಲ್ಲ ಎಂದು ಈಗಾಗಲೇ ಪ್ರಾಧಿಕಾರದ ಗಮನಕ್ಕೆ ತಂದಿದ್ದಾರೆ.

ಏನಿದು ಗ್ರೀನ್‌ ಫೀಲ್ಡ್‌ ಅಲೈನ್‌ಮೆಂಟ್‌?:

ಈಗಿರುವ ರಸ್ತೆಯಲ್ಲೇ ಬೈಪಾಸ್‌/ರಿಂಗ್‌ ರಸ್ತೆ ನಿರ್ಮಿಸು ವುದಾದರೆ ಅದರ ಇಕ್ಕೆಲಗಳ ಮನೆ, ಅಂಗಡಿ, ಶಾಲೆ ಇತ್ಯಾದಿ ಕಟ್ಟಡ ಬೆಲೆಬಾಳುವ ಜಾಗದ ಭೂಸ್ವಾಧೀನಕ್ಕೆ ಬಹುವೆಚ್ಚ ತಗಲುತ್ತದೆ. ಹೀಗಾಗಿ ಕಟ್ಟಡ, ಶಾಲೆ, ಮನೆ, ಮುಖ್ಯ ಭೂಮಿ, ನೀರಾವರಿ ಪ್ರದೇಶ, ಕೈಗಾರಿಕೆಗಳೆಲ್ಲವನ್ನು ಹೊರತುಪಡಿಸಿ “ಗ್ರೀನ್‌’ ಭಾಗದಲ್ಲಿ ಪರಿಸರಕ್ಕೆ ಪೂರಕವಾಗಿ ರಸ್ತೆ ನಿರ್ಮಿಸುವುದೇ ಈ ಪರಿಕಲ್ಪನೆ. ಹೀಗೆ ಮಾಡುವುದಾದರೆ ಭೂಸ್ವಾಧೀನ ಸಮಸ್ಯೆ ಬಹುವಾಗಿ ನಿವಾರಣೆಯಾಗಲಿದೆ ಎಂಬುದು ಹೆದ್ದಾರಿ ಇಲಾಖೆಯ ಲೆಕ್ಕಾಚಾರ.

ಮೂಲ್ಕಿ-ಕಟೀಲು ಬೈಪಾಸ್‌ ರಸ್ತೆಯು ಡಿಪಿಆರ್‌ ಹಂತದಲ್ಲಿದೆ. ಮೊದಲ ಮಾರ್ಗನಕ್ಷೆ ಹಾಗೂ ಗ್ರೀನ್‌ ಫೀಲ್ಡ್‌ ಎಂಬ ಎರಡು ಸಾಧ್ಯತೆಗಳ ಬಗ್ಗೆ ಕೇಂದ್ರ ಹೆದ್ದಾರಿ ಇಲಾಖೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ.ಶಿಶುಮೋಹನ್‌, ಯೋಜನಾ ನಿರ್ದೇಶಕರು, ರಾ.ಹೆ. ಪ್ರಾಧಿಕಾರ ಮಂಗಳೂರು.

 

-ದಿನೇಶ್‌ ಇರಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next