Advertisement

ಮುಳಬಾಗಿಲು: ಅನಾಥಾಶ್ರಮದ ವಿದ್ಯಾರ್ಥಿ ಐಎಎಸ್‌ ಪಾಸ್‌!

06:21 PM May 26, 2023 | Team Udayavani |

ಮುಳಬಾಗಿಲು: ತಂದೆಯ ಅಕಾಲಿಕ ನಿಧನದ ನಂತರ ಬಾಲ್ಯದಲ್ಲೇ ಅನಾಥಾಲಯದಲ್ಲಿ ಬೆಳೆದ ಹುಡುಗ ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ 478ನೇ ರ್‍ಯಾಂಕ್‌ ಗಳಿಸಿದ್ದಾನೆ.

Advertisement

ಮುಳಬಾಗಿಲು ನಗರದ ಶ್ರೀಲಕ್ಷ್ಮೀ ವೆಂಕಟೇಶ್ವರ ಆರ್ಫನ್‌ ಎಜುಕೇಷನಲ್‌ ಚಾರಿಟಬಲ್‌ ಟ್ರಸ್ಟ್‌ ಅನಾಥ ಆಶ್ರಮದ ಮನೋಜ್‌ ಕುಮಾರ್‌ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮಾಡಿದ್ದಾರೆ. ಮನೋಜ್‌ ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯವರು. ಬಾಲ್ಯದಲ್ಲೇ ಅನಾಥಾಶ್ರಮ ಸೇರಿ ಇತರ ಅನಾಥ ಮಕ್ಕಳ ಜತೆ ಆಡಿ ಬೆಳೆದರು.

ಸ್ಫೂರ್ತಿ ಆಗಿದ್ದಾರೆ: ಟ್ರಸ್ಟ್‌ನ ಎಲ್ಲರ ಹೆಮ್ಮೆಯ ಹುಡುಗನಾಗಿದ್ದ ಮನೋಜ್‌ ಕುಮಾರ್‌ಗೆ ಟ್ರಸ್ಟ್‌ ನ ಸಂಸ್ಥಾಪಕಿ ಚಿನ್ಮಯಿ ಆಸರೆ ಹಾಗೂ ಸ್ಫೂರ್ತಿಯಾಗಿದ್ದಾರೆ. 2010ರಲ್ಲಿ ಆರಂಭವಾದ ಟ್ರಸ್ಟ್‌ನಲ್ಲಿ ಈವರೆಗೆ ಸುಮಾರು 500 ಬಡವರಿಗೆ ಹಾಗೂ ಅನಾಥರಿಗೆ ಬಿ.ಕಾಂ, ಎಸ್ಸೆಸ್ಸೆಲ್ಸಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ ಶಿಕ್ಷಣ ಕೊಡಿಸಿದ್ದಾರೆ. ಈಗ ಸುಮಾರು 50 ಮಂದಿ ಅನಾಥಾಲಯದಲ್ಲಿ ಓದುತ್ತಿದ್ದಾರೆ.

ನಗರಸಭೆಯಲ್ಲಿ ಉದ್ಯೋಗ: ಮನೋಜ್‌ ಮುಳಬಾಗಿಲು ನಗರದಲ್ಲಿ ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ, ಬಳಿಕ ಕೋಲಾರದಲ್ಲಿ ಪಿಯುಸಿ (ವಿಜ್ಞಾನ), ನಂತರ ಬೆಂಗಳೂರಿನಲ್ಲಿ ಬಿಸಿಎ ಪದವಿ ಶಿಕ್ಷಣ ಪೂರೈಸಿದರು.

ಹೈದರಾಬಾದ್‌ ನ ಲಾ ಎಕ್ಸಲೆನ್ಸ್‌ ಕೇಂದ್ರದಲ್ಲಿ ಯುಪಿಎಸ್‌ಸಿ ತರಬೇತಿ ಪಡೆದರು. ಈ ಮಧ್ಯೆ ಮುಳಬಾಗಿಲು ನಗರಸಭೆಯಲ್ಲಿ ತಾಂತ್ರಿಕ ಆಪರೇಟರ್‌ ಆಗಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ಮತ್ತು ಪಬ್ಲಿಕ್‌ ಅಡ್ಮಿನಿಸ್ಟ್ರೇಶನ್‌ ವಿಷಯ ಆಯ್ಕೆ ಮಾಡಿಕೊಂಡಿದ್ದರು.

Advertisement

ಮತ್ತೊಮ್ಮೆ ಬರೆಯುವೆ: ಮುಳಬಾಗಿಲು ನಗರಸಭೆಯಲ್ಲಿ ಉದ್ಯೋಗದಲ್ಲಿದ್ದು ಕೋವಿಡ್‌ ಸಮಯದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯಲು ತೀರ್ಮಾನಿಸಿದೆ. ಪ್ರತಿನಿತ್ಯ 8 ಗಂಟೆ ಓದುತ್ತಾ ಬಳಿಕ ಕೋಚಿಂಗ್‌ ಕೇಂದ್ರಕ್ಕೆ ಸೇರಿದೆ. ತಮ್ಮ ಕನಸು ಐಎಎಸ್‌ ಅಧಿಕಾರಿ ಆಗಬೇಕು ಎಂಬುದು. ಈಗ ಬಂದಿರುವ ಬ್ಯಾಂಕ್‌ ಸಾಲದು, ಮತ್ತೊಮ್ಮೆ ಪರೀಕ್ಷೆ ಬರೆದು ರ್‍ಯಾಂಕ್‌ ಸುಧಾರಿಸಿಕೊಳ್ಳುವೆ ಎಂದು 23 ವರ್ಷ ವಯಸ್ಸಿನ ಮನೋಜ್‌ ಕುಮಾರ್‌ “ಉದಯವಾಣಿ’ಗೆ ತಿಳಿಸಿದರು.

ಶ್ರಮ ಹಾಕಿದರೆ ಕಷ್ಟವಲ್ಲ: ತಮ್ಮ ಈ ಸಾಧನೆಗೆ ಟ್ರಸ್ಟ್ ನ ಚಿನ್ಮಯಿ ಅವರೇ ಸ್ಫೂರ್ತಿ. ಅವರೇ ಓದಲು‌ ಸಹಕಾರ ನೀಡಿದರು. ಯುಪಿಎಸ್‌ಸಿ ಪರೀಕ್ಷೆ ಬರೆಯಲು ಪ್ರೇರಣೆ ತುಂಬಿದರು. ಹಾಗೆಯೇ ಯುಪಿಎಸ್‌ಸಿ ಪರೀಕ್ಷೆ ಸಾಕಷ್ಟು ಕಷ್ಟ ಎಂದು ಹೇಳುತ್ತಾರೆ, ಆದರೆ, ಶ್ರಮಹಾಕಿ ಓದಿದರೆ ಯಾವುದೂ ಕಷ್ಟವಲ್ಲ. ಆಸಕ್ತಿ ವಹಿಸಿ ಶೇ.100 ಶ್ರಮ ಹಾಕಿದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು ಎಂದು ಮನೋಜ್‌ ಹೇಳಿದರು.

ಮನೋಜ್‌ ಯಾವುದೇ ಕಾರಣಕ್ಕೂ ಅನಾಥನಲ್ಲ. ಬದಲಾಗಿ ನಾನು ದತ್ತು ಪಡೆದಿರುವ ಮಗು. ತಮ್ಮ ಸ್ವಂತ ಮಗನೆಂದೇ ಭಾವಿಸಿದ್ದೇನೆ. ಆತನ ಸಾಧನೆಯಿಂದ ನನಗೆ ಅತೀವ ಸಂತೋಷವಾಗಿದೆ.
ಚಿನ್ಮಯಿ, ಶ್ರೀಲಕ್ಷ್ಮೀ ವೆಂಕಟೇಶ್ವರ ಆರ್ಫನ್‌ ಎಜುಕೇಶನಲ್‌ ಚಾರಿಟಬಲ್‌
ಟ್ರಸ್ಟ್‌ ಸಂಸ್ಥಾಪಕಿ, ಮುಳಬಾಗಿಲು

ಅನಾಥಾಶ್ರಮದ ಸಂಸ್ಥಾಪಕಿ ಆದ ಚಿನ್ಮಯಿ ಅವರು ಸ್ವಂತ ಮಗನಿ ಗಿಂತಲೂ ನನ್ನನ್ನು ಚೆನ್ನಾಗಿ ಬೆಳೆಸಿದ್ದಾರೆ. ಅವರು ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು, ಅಂದುಕೊಂಡಿದ್ದರು. ಅವರಿಗೆ ಸಾಧ್ಯವಾಗಿರಲಿಲ್ಲ.
ಮನೋಜ್‌ ಕುಮಾರ್‌, ಯುಪಿಎಸ್‌ಸಿಯಲ್ಲಿ 478ನೇ ಸ್ಥಾನ ಗಳಿಸಿದ ವಿದ್ಯಾರ್ಥಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next