ಚಿಕ್ಕಮಗಳೂರು: ನಗರದ ಶಂಕರಪುರ ಬಡಾವಣೆಯ ನಿವಾಸಿ ರವಿ ಎಂಬುವವರು ಮೃತಪಟ್ಟಿದ್ದು, ಮೃತ ವ್ಯಕ್ತಿಯ ಶವವನ್ನು ಚಿತಾಗಾರಕ್ಕೆ ತೆಗೆದುಕೊಂಡು ಹೋಗುವಾಗ ನಗರಸಭೆ ಮುಕ್ತಿಧಾಮ ಶಾಂತಿವಾಹನ ರಸ್ತೆ ಮಧ್ಯೆ ಕೆಟ್ಟು ನಿಂತು, ಮೃತನ ಸಂಬಂಧಿಕರು ಹಾಗೂ ಸ್ನೇಹಿತರು ವಾಹನವನ್ನು ತಳ್ಳಿಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನರು ನಗರಸಭೆ ಆಡಳಿತಕ್ಕೆ ಹಿಡಿಶಾಪ ಹಾಕಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ರವಿ (60) ಭಾನುವಾರ ಮೃತಪಟ್ಟಿದ್ದು, ಮೃತ ದೇಹವನ್ನು ಸ್ಮಶಾನಕ್ಕೆ ಸಾಗಿಸಲು ಕುಟುಂಬದವರು ನಗರಸಭೆಯ ಶಾಂತಿವಾಹನಕ್ಕೆ ಕರೆ ಮಾಡಿದ್ದಾರೆ. ಮೃತದೇಹವನ್ನು ವಾಹನದಲ್ಲಿ ಇರಿಸಿ ಚಿತಾಗಾರಕ್ಕೆ ತೆರಳುವಾಗ ಶಾಂತಿವಾಹನ ರಸ್ತೆ ಮಧ್ಯೆಯೇ ಕೆಟ್ಟು ನಿಂತಿದೆ. ಬಳಿಕ ಮೃತನ ಸಂಬಂಧಿ ಕರು ಹಾಗೂ ಸ್ನೇಹಿತರು ಶಾಂತಿ ವಾಹನವನ್ನು ತಳ್ಳಿ ಸ್ಟಾರ್ಟ್ ಮಾಡಿದ್ದಾರೆ. ನಗರಸಭೆಯಲ್ಲಿ ಇರುವುದು ಒಂದೇ ಶಾಂತಿವಾಹನ. ಆ ವಾಹನದಲ್ಲಿ ಮೃತದೇಹವನ್ನು ಚಿತಾಗಾರಕ್ಕೆ ಸಾಗಿಸುವಾಗ ರಸ್ತೆ ಮಧ್ಯೆಯೇ ಹಲವು ಬಾರಿ ಕೆಟ್ಟು ನಿಂತಿದೆ. ವಾಹನ ಕೆಟ್ಟು ನಿಂತಾಗೆಲ್ಲಾ ಸಂಬಂಧಿಕರು ತಳ್ಳಿ ಸ್ಟಾರ್ಟ್ ಮಾಡಿದ್ದಾರೆ. ನಗರಸಭೆ ಅಧ್ಯಕ್ಷರು ಲಕ್ಷಾಂತರ ರೂ. ಮೌಲ್ಯದ ಕಾರು ಖರೀದಿಸಿ ಓಡಾಡುತ್ತಾರೆ. ಆದರೆ ನಗರಸಭೆ ಶಾಂತಿ ವಾಹನಕ್ಕೆ ಒಂದು ವ್ಯವಸ್ಥಿತವಾದ ವಾಹನವನ್ನು ಕೊಟ್ಟಿಲ್ಲ ಎಂದು ಸ್ಥಳೀಯರು ನಗರಸಭೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಮೃತದೇಹವನ್ನು ಹೊತ್ತು ಹೊರಟ ಶಾಂತಿವಾಹನ ಕ್ರಿಶ್ಚಿಯನ್ ಸ್ಮಶಾನದವರೆಗೆ ಹೋಗುವಾಗ ಹತ್ತಾರು ಬಾರಿ ಕೆಟ್ಟು ನಿಂತಿದೆ. ರಸ್ತೆಯುದ್ದಕ್ಕೂ ಕೆಟ್ಟು ನಿಲ್ಲುತ್ತಿದ್ದ ವಾಹನವನ್ನು ಕಂಡು ರಸ್ತೆಯಲ್ಲಿದ್ದ ಜನಸಾಮಾನ್ಯರು ಕೂಡ ನಗರಸಭೆ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಲಕ್ಷಾಂತರ ರೂ. ವ್ಯಯಿಸಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಕಾರು ಖರೀದಿಸಿದ್ದಾರೆ. ಆದರೆ ಮೃತದೇಹವನ್ನು ಚಿತಾಗಾರಕ್ಕೆ ಸಾಗಿಲು ಸುಸಜ್ಜಿತ ವಾಹನ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ.
~ಎ.ಸಿ.ಕುಮಾರ್