Advertisement
ವಿಶ್ವಾಸಮತ ಯಾಚನೆ ನಿರ್ಣಯ ಮಂಡನೆಯಾಗಿ ಬಹುಮತ ಸಾಬೀತು ಬಳಿಕವಷ್ಟೇ ಸದನದ ಇತರ ಕಲಾಪ ನಡೆಯಬೇಕು. ಇಲ್ಲದಿದ್ದರೆ ನಾವು ಕಲಾಪಕ್ಕೆ ಬರುವುದಿಲ್ಲ ಎಂದು ವಿಪಕ್ಷ ಬಿಜೆಪಿ ಪಟ್ಟು ಹಿಡಿದಿದ್ದರಿಂದ ಗುರುವಾರ ಬೆಳಗ್ಗೆ 11 ಗಂಟೆಯವರೆಗೂ ವಿಧಾನಸಭೆ ಕಲಾಪವನ್ನು ಮುಂದೂಡಲಾಗಿದೆ.
Related Articles
ವಿಧಾನಸೌಧದಲ್ಲಿ ಸೋಮವಾರ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಸಮಯ ನಿಗದಿಗೊಳಿಸುವ ಬಗ್ಗೆ ಚರ್ಚೆ ನಡೆದು ಗುರುವಾರ ಸಮಯ ನಿಗದಿಪಡಿಸಲಾಯಿತು.
Advertisement
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಹಿತ ಮೂರೂ ಪಕ್ಷಗಳ ನಾಯಕರು ಭಾಗವಹಿಸಿದ್ದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಪ್ರಸ್ತಾವ ಮಾಡಿದ್ದು ಬುಧವಾರ ಸಮಯ ಕೋರಿದ್ದಾರೆ.
ಆದರೆ ವಿಪಕ್ಷ ನಾಯಕರನ್ನೊಳಗೊಂಡ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂಬ ಸಂಪ್ರದಾಯ ದಂತೆ ಇಂದುಸಭೆ ಕರೆಲಾಗಿದೆ ಎಂದು ಸ್ಪೀಕರ್ ತಿಳಿಸಿ ದರು. ಅನಂತರ ಗುರುವಾರ ವಿಶ್ವಾಸ ಮತಯಾಚನೆಗೆ ಒಮ್ಮತದಿಂದ ಸಮಯ ನಿಗದಿಪಡಿಸಲಾಯಿತು.
ಸ್ಪೀಕರ್ ರಮೇಶ್ ಕುಮಾರ್ ಅವರು ಸದನಕ್ಕೆ ಕಲಾಪ ಸಲಹಾಸಮಿತಿಯಲ್ಲಿ ನಡೆದ ಚರ್ಚೆಯ ಮಾಹಿತಿ ನೀಡಿದರು. ಬೆಳಗ್ಗೆ ಬಿಜೆಪಿಯ ಸಿ.ಎಂ. ಉದಾಸಿ ಸಹಿತ ಶಾಸಕರು ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ತಮ್ಮ ಕಚೇರಿಗೆ ಬಂದಿದ್ದರು. ಈಗಾಗಲೇ ಮುಖ್ಯಮಂತ್ರಿ ವಿಶ್ವಾಸಮತ ಯಾಚನೆ ಪ್ರಸ್ತಾವ ಮಾಡಿರುವುದರಿಂದ ಕಲಾಪ ಸಲಹಾ ಸಮಿತಿಯಲ್ಲಿ ಆ ಕುರಿತು ಸಮಯ ನಿಗದಿ ಮಾಡುವುದರಿಂದ ಅಲ್ಲೇ ತೀರ್ಮಾನವಾಗುತ್ತದೆ ಎಂದು ಹೇಳಿದ್ದೆ. ಅದರಂತೆ ಸಭೆಯಲ್ಲಿ ಚರ್ಚೆ ನಡೆದು ಗುರುವಾರ ವಿಶ್ವಾಸಮತ ಯಾಚನೆ ನಿರ್ಣಯ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಲು ಸಮಯ ನಿಗದಿಪಡಿಸಲು ಎಲ್ಲರೂ ಒಪ್ಪಿದ್ದಾರೆ ಎಂದರು.
ಈ ಮಧ್ಯೆ, ಅಲ್ಲಿಯವರೆಗೂ ಕಲಾಪ ನಡೆಸುವುದೋ ಬೇಡವೋ ಎಂಬ ಬಗ್ಗೆಯೂ ಪ್ರಸ್ತಾವವಾಗಿ ಸಂಸತ್‌ನಲ್ಲಿ ಯಾವ ಪರಿಪಾಠ ಇದೆ ಎಂದೆಲ್ಲ ಮಾಹಿತಿ ಪಡೆದು ತೀರ್ಮಾನಿಸಲು ನಾನು ನಿರ್ಧರಿಸಿದ್ದೆ. ಆದರೆ ಯಡಿಯೂರಪ್ಪ, ಸರಕಾರ ಬಹುಮತ ಸಾಬೀತು ಮಾಡುವರೆಗೂ ಯಾವುದೇ ಕಲಾಪ ಬೇಡ, ಕಲಾಪ ನಡೆಸಿದರೂ ನಾವು ಹಾಜರಾಗುವುದಿಲ್ಲ ಎಂದು ತಿಳಿಸಿದರು. ಹೀಗಾಗಿ ಕಲಾಪ ನಡೆಸು ವುದರಲ್ಲಿ ಅರ್ಥವಿಲ್ಲ ಎಂದು ಗುರುವಾರದವರೆಗೂ ಸದನ ಮುಂದೂಡಲಾಗಿದೆ ಎಂದರು.
ಗುರುವಾರ ಬಿಎಸ್‌ವೈ ದಿಲ್ಲಿಗೆ?ವಿಶ್ವಾಸಮತ ಯಾಚನೆ ಪ್ರಕ್ರಿಯೆ ಒಂದೇ ದಿನದಲ್ಲಿ ಮುಗಿದು ಸರಕಾರ ಪತನ ಗೊಂಡರೆ ಹೊಸದಾಗಿ ಸರಕಾರ ರಚನೆ ಸಂಬಂಧ ಯಡಿಯೂರಪ್ಪ ಅವರು ದಿಲ್ಲಿಗೆ ತೆರಳಿ ಹೈಕಮಾಂಡ್ ನಾಯಕರ ಜತೆ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ. ವಿಶ್ವಾಸಮತ ನಿರ್ಣಯ ಮಂಡನೆಗೆ ಗುರುವಾರ ದಿನಾಂಕ ನಿಗದಿಯಾಗಿರುವುದರಿಂದ ಈಗಾಗಲೇ ಕೇಂದ್ರ ನಾಯಕರ ಜತೆ ಮುಂದಿನ ಸಾಧ್ಯಾ-ಸಾಧ್ಯತೆಗಳ ಬಗ್ಗೆಯೂ ಯಡಿಯೂರಪ್ಪ ಚರ್ಚಿಸಿದ್ದಾರೆ ಎನ್ನಲಾಗಿದೆ.
ಗುರುವಾರ ವಿಶ್ವಾಸಮತ ಯಾಚಿಸಲು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸ್ಪೀಕರ್ ಅವರು ಸೂಚಿಸಿದ್ದಾರೆ. ಗುರುವಾರದವರೆಗೂ ಬೆಳವಣಿಗೆ ಕಾದು ನೋಡುತ್ತೇವೆ.
– ಬಿ.ಎಸ್. ಯಡಿಯೂರಪ್ಪ ವಿಪಕ್ಷ ನಾಯಕ
– ಬಿ.ಎಸ್. ಯಡಿಯೂರಪ್ಪ ವಿಪಕ್ಷ ನಾಯಕ
ಗುರುವಾರ ವಿಶ್ವಾಸಮತ ಯಾಚನೆಗೆ ಒಪ್ಪಿಗೆ ನೀಡಿದ್ದೇವೆ. ಬಿಜೆಪಿ ನಾಯಕರೂ ಇದಕ್ಕೆ ಒಪ್ಪಿಕೊಂಡಿದ್ದಾರೆ. ನಮಗೆ ವಿಶ್ವಾಸ ಇರುವುದರಿಂದಲೇ ವಿಶ್ವಾಸಮತ ಯಾಚನೆಗೆ ಮುಂದಾಗಿರುವುದು.
– ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷ ನಾಯಕ
– ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷ ನಾಯಕ