Advertisement

ಮುಸ್ಲಿಂಮರೇ ಇಲ್ಲದ ಗ್ರಾಮದಲ್ಲಿ ಮೊಹರಂ

11:48 AM Aug 09, 2022 | Team Udayavani |

ಗದಗ: ಸಾಮಾನ್ಯವಾಗಿ ಆಯಾ ಸಮುದಾಯದವರು ಅವರವರ ಸಮುದಾಯದ ಹಬ್ಬಗಳನ್ನು ಆಚರಿಸುವುದು ವಾಡಿಕೆ. ಆದರೆ ಮುಸ್ಲಿಮರೇ ಇಲ್ಲದ ಗ್ರಾಮವೊಂದರಲ್ಲಿ ಹಿಂದೂಗಳು ಮೊಹರಂ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸುವ ಮೂಲಕ ಭಾವೈಕ್ಯ ಸಾರುತ್ತಿರುವುದು ವಿಶೇಷ.

Advertisement

ಹೌದು. ಇದಕ್ಕೆ ಸಾಕ್ಷಿಯಾದದ್ದು ಜಿಲ್ಲಾ ಕೇಂದ್ರದಿಂದ ಕೇವಲ ಇಪ್ಪತ್ತು ಕಿಲೋ ಮೀಟರ್‌ ದೂರದಲ್ಲಿರುವ ಶಾಗೋಟಿ ಗ್ರಾಮ. ಇಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಆದರೆ ಈ ಗ್ರಾಮದಲ್ಲಿ ಮುಸ್ಲಿಂ ಕುಟುಂಬಗಳೇ ಇಲ್ಲ.

ಈ ಗ್ರಾಮದಲ್ಲಿ ಮುಸ್ಲಿಮರಿಲ್ಲದಿದ್ದರೂ ಹಿಂದೂಗಳೇ ಒಂದು ಸುಂದರ ಮಸೀದಿ ನಿರ್ಮಿಸಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ ಸಾಗವಾಣಿ ಕಟ್ಟಿಗೆಯಿಂದ 1954 ರಲ್ಲೇ ಡೋಲಿ-ಪಾಂಜಾ ತಯಾರಿಸಿದ್ದಾರೆ. ಅಷ್ಟೇ ಅಲ್ಲ ಇಲ್ಲಿ ಪ್ರತಿ ವರ್ಷ ಮೊಹರಂ ಹಬ್ಬವನ್ನು ಶ್ರದ್ಧಾ- ಭಕ್ತಿಯಿಂದ ಚಾಚೂ ತಪ್ಪದೇ ಆಚರಿಸಿಕೊಂಡು ಬರುತ್ತಿದ್ದಾರೆ. ಗ್ರಾಮದಲ್ಲಿ ಶಾಲಾ ಮಕ್ಕಳಿಂದ ಹಿಡಿದು ಯುವಕರು, ವೃದ್ಧರು ತಮ್ಮ ಕೈಗಳಿಗೆ ಕೆಂಪು ಲಾಡಿ ಕಟ್ಟಿಕೊಳ್ಳುವ ಮೂಲಕ ಫಕೀರರಾಗುತ್ತಾರೆ.

ಐದು ದಿನಗಳ ಕಾಲ ನಡೆಯುವ ಈ ಹಬ್ಬದ ಸಂದರ್ಭದಲ್ಲಿ ಪಕ್ಕದ ಚಿಕ್ಕಹಂದಿಗೋಳ ಗ್ರಾಮದಿಂದ “ಮೌಲಾನಾ(ಧರ್ಮಗುರು)ರನ್ನು ಕರೆಯಿಸಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ. ಪ್ರತಿ ದಿನ ಬೆಳಿಗ್ಗೆ-ಸಂಜೆ ಎರಡೂ ಹೊತ್ತು ಗ್ರಾಮದ ಮಹಿಳೆಯರು ಮಡಿಯಿಂದ ದೇವರಿಗೆ ನೈವೇದ್ಯ ಸಲ್ಲಿಸಿ ಭಕ್ತಿಯಿಂದ ನಮಿಸುತ್ತಾರೆ.

ಗ್ರಾಮದಲ್ಲಿರುವ ಆಂಜನೇಯ, ಈಶ್ವರ, ಮೈಲಾರಲಿಂಗ ದೇವಸ್ಥಾನದ ಪಕ್ಕದಲ್ಲೇ ಈ ಮಸೀದಿ ನಿರ್ಮಿಸಿರುವುದು ಮತ್ತೂಂದು ವಿಶೇಷ.

Advertisement

ಮುಸ್ಲಿಮರಿಲ್ಲದಿದ್ದರೂ ಮೊಹರಂ ಆಚರಣೆ ಮುಂದುವರಿಸಿಕೊಡು ಧರ್ಮ ಸಾಮರಸ್ಯ, ಕೋಮು ಸೌಹಾರ್ದತೆ ಮೆರೆಯುವ ಇಂಥ ಹಳ್ಳಿಗಳು ಇಂದಿನ ದಿನಗಳಲ್ಲಿ ದೇಶದಲ್ಲಿ ವಿರಳಾತಿವಿರಳ ಎನ್ನಬಹುದು.

ಶಾಗೋಟಿ ಗ್ರಾಮದಲ್ಲಿ ನನ್ನ ತಾತ-ಮುತ್ತಜ್ಜ ಪ್ರತಿ ವರ್ಷ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು. ಐದು ದಿನಗಳ ಕಾಲ ಗ್ರಾಮದಲ್ಲೇ ಉಳಿದುಕೊಂಡು ಪೂಜೆ ನೆರವೇರಿಸಲಾಗುತ್ತದೆ. ಪ್ರತಿದಿನ ಭಕ್ತರು ತಮ್ಮ ಮನೆಗೆ ಆಹ್ವಾನಿಸಿ ಊಟೋಪಚಾರ ಮಾಡುತ್ತಾರೆ. ಗ್ರಾಮಸ್ಥರು ಅಣ್ಣ-ತಮ್ಮಂದಿರಂತೆ ನೋಡಿಕೊಳ್ಳುತ್ತಾರೆ. –ಮುಕ್ತುಂಸಾಬ್‌ ಮುಲ್ಲಾನವರ, ಮೌಲಾನಾ, ಚಿಕ್ಕಹಂದಿಗೋಳ ಗ್ರಾಮ

ಈ ಸಂಪ್ರದಾಯ ನಮ್ಮ ಅಜ್ಜ-ಮುತ್ತಜ್ಜರ ಕಾಲದಿಂದಲೂ ನಡೆದುಕೊಂಡು ಬಂದಿದೆ. ನಮಗೆ ಆ ಧರ್ಮ, ಈ ಧರ್ಮ ಅಂತ ಭೇದಭಾವ ಇಲ್ಲ. ಎಲ್ಲರೂ ಒಂದೇ. ಈ ಕಾರಣಕ್ಕಾಗಿ ಇಲ್ಲಿ ಮುಸ್ಲಿಂ ಸಮಾಜದ ಯಾರೂ ಇರದಿದ್ದರೂ ನಾವೇ ಮೊಹರಂ ಹಬ್ಬ ಆಚರಿಸಿಕೊಂಡು ಹೋಗುತ್ತಿದ್ದೇವೆ. –ಮಾರ್ತಾಂಡಗೌಡ ನೀಲಪ್ಪಗೌಡರ, ಶಾಗೋಟಿ ಗ್ರಾಮದ ಹಿರಿಯರು

ಮೊಹರಂ ಹಬ್ಬದಂದು ಡೋಲಿ ಪಾಂಜಾಗಳ ಅದ್ಧೂರಿ ಮೆರವಣಿಗೆ ನಡೆಯುತ್ತದೆ. ಊರಿನ ಪ್ರತಿಯೊಬ್ಬರೂ ಹಬ್ಬದಲ್ಲಿ ಪಾಲ್ಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಮಜಲು, ಅಲಾವಿ ಕುಣಿತದ ಮೂಲಕ ಮೆರವಣಿಗೆ ನಡೆಸಿ ದೇವರನ್ನು ಹೊಳೆಗೆ ಕಳುಹಿಸಲಾಗುತ್ತದೆ. –ಮಂಜುನಾಥ ಕೊರ್ಲಹಳ್ಳಿ, ಶಾಗೋಟಿ ಗ್ರಾಮಸ್ಥ.

-ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next