ಮಂಗಳೂರು: ಮತಾಂಧ ಮನಃಸ್ಥಿತಿಯನ್ನು ಹೊಂದಿದ್ದ ಮಹಮ್ಮದ್ ಶಾರೀಕ್‌ನ ಮೊಬೈಲ್‌ನಲ್ಲಿ ಸಾವಿರಕ್ಕೂ ಅಧಿಕ ಜೆಹಾದ್ ವೀಡಿಯೋಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಮನೆ ಮಂದಿ ಟಿವಿಯಲ್ಲಿ ಚಲನಚಿತ್ರ ನೋಡುವುದು ಸೇರಿದಂತೆ ಮನೋರಂಜನೆ ಪಡೆಯುವುದನ್ನು ನಿಷೇಧಿಸಿದ್ದ. ದೇವರ ಸ್ಮರಣೆ ಮಾತ್ರ ಮಾಡುವಂತೆ ಒತ್ತಾಯಿಸಿದ್ದ. ಐಸಿಸ್ ಉಗ್ರರ ವಿಧ್ವಂಸಕ ಕೃತ್ಯಗಳ ವೀಡಿಯೋ ಸೇರಿದಂತೆ 55 ಜಿಬಿಗೂ ಅಧಿಕ ವೀಡಿಯೋ, ಪೊಟೋಗಳು ಆತನ ಮೊಬೈಲ್ ಮತ್ತು ಪೆನ್‌ಡ್ರೈವ್‌ನಲ್ಲಿ ಪತ್ತೆಯಾಗಿವೆ.
ಅಶ್ಲೀಲ ವೀಡಿಯೋಗಳು, ಜೆಹಾದಿ ಸಾಹಿತ್ಯ ಕೂಡ ಮೊಬೈಲ್‌ನಲ್ಲಿತ್ತು. ಭಾರತದಲ್ಲಿ ಶರಿಯಾ ಕಾನೂನು ಜಾರಿಯಾಗಬೇಕೆಂಬುದು ಆತನ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಸ್ಯಾಟಲೈಟ್ ಕರೆ ದೃಢಪಟ್ಟಿಲ್ಲ: ಎಸ್‌ಪಿ
ಮಂಗಳೂರಿನಲ್ಲಿ ಕುಕ್ಕರ್ ಪ್ರಕರಣ ನಡೆದ ಹಿಂದಿನ ದಿನ ಬೆಳ್ತಂಗಡಿ ಭಾಗದಲ್ಲಿ ಸ್ಯಾಟಲೈಟ್ ಫೋನ್ ಕರೆ ಹೋಗಿತ್ತು ಎನ್ನಲಾಗಿದ್ದ ಮಾಹಿತಿಗೆ ದ.ಕ. ಜಿಲ್ಲಾ ಎಸ್‌ಪಿ ಹೃಷಿಕೇಶ್ ಸೋನಾವಣೆ ಅವರು ಸ್ಪಷ್ಟೀಕರಣ ನೀಡಿದ್ದು, “ಈ ಬಗ್ಗೆ ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Related Articles
ಸ್ಯಾಟಲೈಟ್ ಕರೆ ಹೋಗಿರುವುದು ದೃಢಪಟ್ಟಿಲ್ಲ’ ಎಂದಿದ್ದಾರೆ. ಅಲ್ಲದೆ ಚಾರ್ಮಾಡಿ ಪರಿಸರದಲ್ಲಿ ಉಗ್ರರು ಬಾಂಬ್ ಸ್ಫೋಟ ಪ್ರಯೋಗ ಮಾಡಿದ್ದರೆನ್ನಲಾದ ಮಾಹಿತಿಗೂ ಎಸ್‌ಪಿಯವರು ಸ್ಪಷ್ಟನೆ ನೀಡಿದ್ದು ” ಪಟಾಕಿ ಸ್ಫೋಟದಿಂದ ಶಬ್ಧವಾಗಿದೆ. ಈ ಭಾಗದಲ್ಲಿ ಸ್ಥಳೀಯರು ಆನೆಗಳನ್ನು ಹೆದರಿಸಲು ಪಟಾಕಿ ಸಿಡಿಸುತ್ತಾರೆ’ ಎಂದು ತಿಳಿಸಿದ್ದಾರೆ.
ವಾರ ಕಳೆದರೂ
ಸಿಗದ ಸಹಚರರ ಸುಳಿವು
ಕುಕ್ಕರ್ ಪ್ರಕರಣ ನಡೆದು ವಾರ ಕಳೆದರೂ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಹೆಚ್ಚಿನ ಯಶಸ್ಸು ಸಿಕ್ಕಿಲ್ಲ. ಪ್ರಕರಣದಲ್ಲಿ ಗಾಯಗೊಂಡಿರುವ ಉಗ್ರ ಮಹಮ್ಮದ್ ಶಾರೀಕ್ (24)ನ ಸಹವರ್ತಿಗಳು, ಆತನ ಮಾರ್ಗದರ್ಶಕರನ್ನು ಹಾಗೂ ಆತನಿಗೆ ಬೇರೆ ಬೇರೆ ರೂಪದಲ್ಲಿ ನೆರವು ನೀಡಿರುವವರನ್ನು ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ.
ಸುಮಾರು 10ಕ್ಕೂ ಅಧಿಕ ಪೊಲೀಸ್ ತಂಡಗಳು ತನಿಖೆಯಲ್ಲಿ ತೊಡಗಿಸಿಕೊಂಡಿವೆ. ನ.19ರಂದು ಬಾಂಬ್ ಸ್ಫೋಟಗೊಂಡಿತ್ತು.
ನ.20ರಂದು ಇದೊಂದು ಭಯೋತ್ಪಾದಕ ಕೃತ್ಯವೆಂಬ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿದ್ದರು. ಅನಂತರ ರಾಜ್ಯದ 11 ಕಡೆಗಳಲ್ಲಿ ಶೋಧ ನಡೆಸಿ ಕೆಲವರನ್ನು ವಿಚಾರಣೆಗೊಳಪಡಿಸಿ ಸಾಕ್ಷ್ಯಾಧಾರ ಸಂಗ್ರಹಿಸಿದ್ದರು. ನ.24ರಂದು ಎನ್‌ಐಎ ಎಫ್ಐಆರ್ ದಾಖಲಿಸಿಕೊಂಡು ಅಧಿಕೃತವಾಗಿ ತನಿಖೆ ಕೈಗೆತ್ತಿಕೊಂಡಿತ್ತು.
ಸದ್ಯ ಶಾರೀಕ್ ಗಂಭೀರವಾದ ಸುಟ್ಟ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿರುವುದರಿಂದ ಆತನನ್ನು ವಿಚಾರಣೆಗೊಳಪಡಿಸಲು ಸಾಧ್ಯವಾಗುತ್ತಿಲ್ಲ. ಆತನಿಂದ ವಶಪಡಿಸಿಕೊಂಡ ಮೊಬೈಲ್‌ನಲ್ಲಿರುವ ಮಾಹಿತಿಯಾಧರಿಸಿ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದರು. ಆದರೆ ಪ್ರಕರಣದಲ್ಲಿ ನೇರವಾಗಿ/ ಪರೋಕ್ಷವಾಗಿ ತೊಡಗಿಸಿಕೊಂಡ ಯಾರನ್ನು ಕೂಡ ವಶಕ್ಕೆ ಪಡೆದುಕೊಂಡಿಲ್ಲ ಎಂದು ತಿಳಿದುಬಂದಿದೆ.