ಲಾಹೋರ್: ಪಾಕಿಸ್ಥಾನದ ಹಿರಿಯ ಆಲ್ ರೌಂಡರ್ ಮೊಹಮ್ಮದ್ ಹಫೀಜ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. 18 ವರ್ಷಗಳ ತನ್ನ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಹೇಳಿರುವುದಾಗಿ ಹಫೀಜ್ ತಿಳಿಸಿದ್ದಾರೆ.
41 ವರ್ಷದ ಹಫೀಜ್ 2003ರಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ ಪಂದ್ಯದಲ್ಲಿ ಪದಾರ್ಪಣೆಗೈದಿದ್ದರು. ಕಳೆದ ಟಿ20 ವಿಶ್ವಕಪ್ ನ ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಪಂದ್ಯ ಹಫೀಕ್ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರೂ ಹಫೀಜ್ ಟಿ20 ಲೀಗ್ ಗಳಲ್ಲಿ ಆಡುವುದಾಗಿ ತಿಳಿಸಿದ್ದಾರೆ. ಪಿಎಸ್ ಎಲ್ ನ ಲಾಹೋರ್ ಖಲಂದರ್ ತಂಡದಲ್ಲಿ ಅವರು ಮುಂದಿನ ಲೀಗ್ ಆಡಲಿದ್ದಾರೆ.
ಇದನ್ನೂ ಓದಿ:ವಿಕೆಟ್ ಕೀಪರ್‌ಗಳಿಗೂ ಕೋಚ್ ಅಗತ್ಯ: ಸಯ್ಯದ್ ಕಿರ್ಮಾನಿ
ಪಾಕಿಸ್ಥಾನ ಪರ ಹಫೀಜ್ 55 ಟೆಸ್ಟ್, 218 ಏಕದಿನ ಮತ್ತು 119 ಟಿ20 ಪಂದ್ಯಗಳನ್ನಾಡಿದ್ದಾರೆ. ಎಲ್ಲಾ ಮಾದರಿ ಸೇರಿ 12,780 ರನ್ ಗಳಿಸಿದ್ದು, 32 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಪಾಕ್ ಪರ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಹಫೀಜ್ 2018ರ ಡಿಸೆಂಬರ್ ನಲ್ಲಿ ಟೆಸ್ಟ್ ಕ್ರಿಕೆಟ್ ನಿಂದ, 2019ರ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್ ನಿಂದ ದೂರವಾಗಿದ್ದರು. ಆಗಲೇ 2020ರ ಟಿ20 ವಿಶ್ವಕಪ್ ನಲ್ಲಿ ಕೊನೆಯ ಬಾರಿ ಆಡುವುದಾಗಿ ಹೇಳಿದ್ದರು. ಆದರೆ ಕೋವಿಡ್ ಕಾರಣದಿಂದ ಟಿ20 ವಿಶ್ವಕಪ್ 2021ಕ್ಕೆ ಮುಂದೂಡಿಕೆಯಾಗಿದ್ದರಿಂದ ಹಫೀಜ್ ಕೂಡಾ ತನ್ನ ವಿದಾಯ ಘೋಷಣೆಯನ್ನು ಮುಂದೂಡಿದ್ದರು.