Advertisement

ಮುದೂರು: ಶವಸಂಸ್ಕಾರಕ್ಕೆ ವಿನೂತನ ದಹನ ಯಂತ್ರ-ಸ್ಮಶಾನ ಕೊರತೆಗೆ ಶಾಶ್ವತ ಪರಿಹಾರ

10:27 AM Jan 25, 2023 | Team Udayavani |

ಕೊಲ್ಲೂರು: ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಮಶಾನದ ಕೊರತೆಗೊಂದು ಶಾಶ್ವತ ಪರಿಹಾರ ಈವರೆಗೆ ಲಭಿಸಿಲ್ಲ. ಗ್ರಾಮಸ್ಥರಿಗೆ ಶವಸಂಸ್ಕಾರಕ್ಕೆ ಅನನುಕೂಲವಾಗಿರುವ ಈ ದಿಸೆಯಲ್ಲಿ ಆರಂಭಗೊಂಡಿರುವ ಸಂಚಾರಿ ಶ್ಮಶಾನ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಅನುಕೂಲವಾಗಬಹುದೆಂಬ ನಿರೀಕ್ಷೆ ಜನಸಾಮಾನ್ಯರಲ್ಲಿ ಮೂಡಿದೆ.

Advertisement

ಅನೇಕ ಕಡೆ ಬಹುತೇಕ ಮಂದಿಗೆ ಎಕರೆಗಟ್ಟಲೆ ತೆಂಗು-ಕಂಗು, ಮಾವುಗಳ ಪ್ಲಾಂಟೇಶನ್‌ ಇದ್ದರೆ ಇನ್ನಿತರ ಕಡೆ ವಾಸವಾಗಿರುವವರಿಗೆ ಸೂರು ಕಟ್ಟಿಕೊಳ್ಳುವಷ್ಟು ಮಾತ್ರ ಜಾಗವಿದ್ದು ಮಿಕ್ಕುಳಿದ ಪ್ರದೇಶ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಸ್ವಾಮ್ಯದಲ್ಲಿದೆ, ಕೇವಲ 2-3 ಸೆಂಟ್ಸ್‌ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರು ಸಾವನ್ನಪ್ಪಿದವರ ಅಂತ್ಯಕ್ರಿಯೆಗೆ ವ್ಯವಸ್ಥೆಗೆ ಜಾಗವಿಲ್ಲದೆ ಮನೆಯಂಗಳವನ್ನೇ ಬಳಸಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗೊಂದು ಉದಾಹರಣೆ ಹಾಗೂ ಸಂದರ್ಭ ಮುದೂರು ಗ್ರಾಮದಲ್ಲಿ ನಡೆದ ಘಟನೆ ದೇಶವ್ಯಾಪ್ತಿ ಸುದ್ದಿಯಾಗಿತ್ತು.

ಸಂಚಾರಿ ಸ್ಮಶಾನ ಆರಂಭ
ಮರಣ ಹೊಂದಿದವರನ್ನು ದಹಿಸುವ ವಿನೂತನ ಮಾದರಿಯ ಯಂತ್ರ ಬಳಕೆಯ ಕ್ರಮ ಕೇರಳದಲ್ಲಿ ರೂಢಿಯಲ್ಲಿದ್ದು, ಇದೀಗ ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘವು ಇಲ್ಲಿ ಕೂಡ ಅದನ್ನು ಪರಿಚಯಿಸಿದೆ. 7 ಅಡಿ ಉದ್ದ , 2 ಅಡಿ ಅಗಲ, 4 ಅಡಿ ಎತ್ತರದ ಈ ಶವ ದಹನ ಯಂತ್ರವು ಗ್ರಾಸ್‌ ವಿದ್ಯುತ್‌ ಮೂಲಕ ಬಳಸಲಾಗುತ್ತಿದೆ.

ಯಂತ್ರದ ಒಳಭಾಗದಲ್ಲಿರುವ ಚೇಂಬರ್‌ ಮೇಲೆ ಶವ ಇಟ್ಟು ಕರ್ಪೂರವನ್ನು ಹಚ್ಚಿ ಮೇಲ್ಭಾಗವನ್ನು ಮುಚ್ಚಿ ಗ್ಯಾಸ್‌ ಸಂಪರ್ಕ ನೀಡಿದರೆ ಕ್ಷಣಾರ್ಧದಲ್ಲಿ ದಹನ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ವಾಯುಮಾಲಿನ್ಯ ರಹಿತವಾಗಿ ಪರಿಸರ ಸ್ನೇಹಿಯಾಗಿ ಈ ಯಂತ್ರ ಕಾರ್ಯಾಚರಿಸುತ್ತದೆ.

ಒಂದು ಶವಸಂಸ್ಕಾರಕ್ಕೆ 10 ಕಿಲೋ ಗ್ಯಾಸ್‌, 100 ಗ್ರಾಮ್‌ ಕರ್ಪೂರ ಬಳಕೆಯಾಗುತ್ತದೆ. ಸುಮಾರು 5 ಲಕ್ಷ 80 ಸಾವಿರ ರೂ. ವೆಚ್ಚದ ಸಂಚಾರಿ ಶವಪೆಟ್ಟಿಗೆಯನ್ನು ಕೇರಳದ ಖಾಸಗಿ ಕಂಪೆನಿಯೊಂದು ನಿರ್ಮಿಸಿದೆ. ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಈ ಭಾಗದ ಜನರ ಶವಸಂಸ್ಕಾರದ ಸಮಸ್ಯೆಗೊಂದು ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಘದ ಅಧ್ಯಕ್ಷ ಎಂ.ವಿಜಯಶಾಸ್ತ್ರೀ, ಉಪಾಧ್ಯಕ್ಷ ನಕ್ಷತ್ರ ಭೋವಿ, ನಿರ್ದೇಶಕರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಸಕಾರಾತ್ಮಕ ಸ್ಪಂದನೆಯಿಂದಾಗಿ ಸಂಚಾರಿ ಶವಸಂಸ್ಕಾರ ಯಂತ್ರವನ್ನು ಮುದೂರಿಗೆ ಒದಗಿಸಿದೆ.

Advertisement

ಸೂಕ್ತ ಜಾಗ ಗುರುತು ಮಾಡಿ
ಮುದೂರು ಜಡ್ಕಲ್‌ ಗ್ರಾ.ಪಂ.ವ್ಯಾಪ್ತಿಯ ನಿವಾಸಿಗಳಿಗೆ ಸಂಚಾರಿ ಸ್ಮಶಾನ ಉಪಯೋಗಿಯಾಗಲಿದೆ. ಈ ಕ್ರಮಕ್ಕೆ ಜನ ಹೊಂದಿಕೊಳ್ಳಬೇಕಾಗಿದೆ. ಕಂದಾಯ
ಹಾಗೂ ಅರಣ್ಯ ಇಲಾಖೆ ಗ್ರಾ.ಪಂ.ಗೆ ಸೂಕ್ತ ಜಾಗ ಗುರುತು ಮಾಡಿ ಅವಕಾಶ ಕಲ್ಪಿಸಿದಲ್ಲಿ ಸಾರ್ವಜನಿಕ ರುದ್ರಭೂಮಿ ನಿರ್ಮಿಸಲು ಬದ್ಧರಾಗಿದ್ದೇವೆ.
-ವನಜಾಕ್ಷಿ ಶೆಟ್ಟಿ
ಅಧ್ಯಕ್ಷರು, ಗ್ರಾ.ಪಂ. ಜಡ್ಕಲ್‌

Advertisement

Udayavani is now on Telegram. Click here to join our channel and stay updated with the latest news.

Next