ದೇವಪ್ಪ ರಾಠೊಡ
ಮುದಗಲ್ಲ: ಸ್ಥಳೀಯ ಪುರಸಭೆ ವತಿಯಿಂದ ತರಕಾರಿ ಮಾರುಕಟ್ಟೆ ಪಕ್ಕದಲ್ಲಿ ನಿರ್ಮಿಸಿರುವ ಚಿಕನ್ ಮತ್ತು ಮಟನ್ ಮಳಿಗೆಗಳ ಉದ್ಘಾಟನೆ ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
2013-14ರಲ್ಲಿ ಪುರಸಭೆಯ ಬಿಆರ್‌ಜಿಎಫ್ ಯೋಜನೆಯಡಿ ಸುಮಾರು 11ಲಕ್ಷ ರೂ. ಗಳಲ್ಲಿ 8 ಮೀನು ಮತ್ತು ಮಟನ್ ವ್ಯಾಪಾರ ಮಳಿಗೆ ನಿರ್ಮಿಸಲು ಉಮೇಶ ನಾಗರಬೆಂಚಿ ಎಂಬುವರಿಗೆ ಟೆಂಡರ್ ನೀಡಲಾಗಿತ್ತು. ಇನ್ನು 10 ಲಕ್ಷ ರೂ.ಗಳಲ್ಲಿ 8 ಚಿಕನ್ ವ್ಯಾಪಾರ ಮಳಿಗೆಯನ್ನು ಯಲ್ಲಪ್ಪ ಭೋವಿ ಎಂಬುವರಿಗೆ ಗುತ್ತಿಗೆ ನೀಡಿದ ಆಗಿನ ಪುರಸಭೆ ಆಡಳಿತ ಕಟ್ಟಡ ಕಾಮಗಾರಿ ಮುಗಿದು 1 ವರ್ಷ ಗತಿಸಿದರೂ ಪುರಸಭೆ ಅಧಿಕಾರಿಗಳು ಮಳಿಗೆಗಳನ್ನು ತಮ್ಮ ಸುಪರ್ದಿಗೆ ಪಡೆದು ಮಳಿಗೆ ಉದ್ಘಾಟನೆಗೆ ಮುಂದಾಗಿಲ್ಲ. ಹೀಗಾಗಿ ನಾವು ಸಮಸ್ಯೆ ಎದುರಿಸುವಂತಾಗಿದೆ ಎನ್ನುತ್ತಾರೆ ಚಿಕನ್, ಮಟನ್ ವ್ಯಾಪಾರಿಗಳು.
ಈ ಹಿಂದೇ ಇದೇ ಬಯಲು ಜಾಗದಲ್ಲಿ ಸುಮಾರು ವರ್ಷಗಳಿಂದ ಚಿಕನ್ ಮತ್ತು ಮಟನ್ ಕಡಿದು ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದೇವು. ಆದರೆ 2013-14ರಲ್ಲಿ ಚಿಕನ್ ಮತ್ತು ಮಟನ್ ವ್ಯಾಪಾರದ ಮಳಿಗೆ ನಿರ್ಮಿಸಿಕೊಡುವುದಾಗಿ ಹೇಳಿದ ಪುರಸಭೆ ಅಧಿಕಾರಿಗಳು, ನಮ್ಮ ಅಂಗಡಿಗಳನ್ನು ತೆರವುಗೊಳಿಸಿದ್ದರು. ಚಿಕನ್-ಮಟನ್ ಮಾರ್ಕೆಟ್ ಮಳಿಗೆ ನಿರ್ಮಿಸಿ ವರ್ಷಗಳೇ ಗತಿಸಿದರೂ ಪುರಸಭೆ ಅಧಿಕಾರಿಗಳು ಮಳಿಗೆಗಳನ್ನು ಉದ್ಘಾಟಿಸಿ ನಮಗೆ ನೀಡುತ್ತಿಲ್ಲ. ಹೀಗಾಗಿ ಚಿಕನ್, ಮಟನ್ ವ್ಯಾಪಾರವನ್ನು ಬಯಲು ಜಾಗೆ, ರಸ್ತೆ ಬದಿಯಲ್ಲಿ ನಡೆಸಲಾಗುತ್ತಿದೆ. ಬಯಲಲ್ಲಿ ಚಿಕನ್ ಮತ್ತು ಮಟನ್ ಕತ್ತರಿಸುವುದರಿಂದ ಬಿಸಿಲು, ಧೂಳು ಹಾಗೂ ಗಾಳಿಯಿಂದ ರಕ್ಷಣೆ ಮಾಡುವುದು ಕಷ್ಟವಾಗಿದೆ. ನಾಯಿ, ಹಂದಿ, ಕಾಗೆ ಕಾಟ ತಡೆಯಲು ಆಗುತ್ತಿಲ್ಲ. ಕುಳಿತು ವ್ಯಾಪಾರ ಮಾಡಲು ನೆರಳು, ನೀರಿಲ್ಲ. ತೆರೆದ ಪ್ರದೇಶದಲ್ಲಿ ಚಿಕನ್-ಮಟನ್ ಇಟ್ಟು ವ್ಯಾಪಾರ ಮಾಡುವುದರಿಂದ ಖರೀದಿಸಲು ಜನ ಹಿಂಜರಿಯುತ್ತಿದ್ದಾರೆ ಎಂದು ಮಾಂಸ ವ್ಯಾಪಾರಿಗಳಾದ ಮುನ್ನಾ, ಶಬ್ಬೀರ, ಮೈಹಿಬೂಬ್, ಅನೀಫ್, ರಹಿಮಾನ್, ಮಹೆಬೂಬ್, ಖಾಜಾಸಾಬ್ ಹಾಗೂ ಅಲೀಫ್ ಪತ್ರಿಕೆ ಮುಂದೆ ತಮ್ಮ ಗೋಳು ತೋಡಿಕೊಂಡರು.
ಮಳಿಗೆ ನೀಡುವಂತೆ ಶಾಸಕ ಹೂಲಗೇರಿ ಅವರಿಗೆ ಮನವಿ ಮಾಡಿದಾಗ ಕಟ್ಟಡದ ಕೆಲ ಭಾಗ ನಿರ್ಮಾಣ ಹಂತದಲ್ಲಿದೆ. ಕಾಮಗಾರಿ ಮುಗಿದ ತಕ್ಷಣ ಉದ್ಘಾಟಿಸಿ ಚಿಕನ್-ಮಟನ್ ವ್ಯಾಪಾರಸ್ಥರಿಗೆ ಕೊಡಿಸುವುದಾಗಿ ಹೇಳಿ ಎರಡು-ಮೂರು ತಿಂಗಳು ಗತಿಸಿದೆ ಎಂದು ಮಾಂಸ ವ್ಯಾಪಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ. ಇನ್ನಾದರೂ ಪುರಸಭೆ ನಿರ್ಮಿಸಿದ ಮಳಿಗೆಗಳನ್ನು ಉದ್ಘಾಟಿಸಿ ಮಾಂಸ ವ್ಯಾಪಾರಿಗಳಿಗೆ ಹಸ್ತಾಂತರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಈಗಾಗಲೇ ಸಿದ್ಧಗೊಂಡಿರುವ ಚಿಕನ್-ಮಟನ್ ಮಾರ್ಕೆಟ್ ಮಳಿಗೆಗಳನ್ನು ಬಹಿರಂಗ ಹರಾಜು ಹಾಕದೇ, ಪುರಸಭೆ ವತಿಯಿಂದ ಬಾಡಿಗೆ ನಿಗದಿ ಮಾಡಿ ಇದೇ ಸ್ಥಳದಲ್ಲಿ ಚಿಕನ್
-ಮಟನ್ ಮಾರಾಟ ಮಾಡುತ್ತಿದ್ದವರಿಗೆ
ನೀಡಬೇಕು.
ಮುನ್ನಾ, ಮಾಂಸ ವ್ಯಾಪಾರಿ ಹೊಸದಾಗಿ ಅಧಿಕಾರ ವಹಿಸಿಕೊಳ್ಳಲಾಗಿದೆ. ಪುರಸಭೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸುವೆ.
ಡಾ| ದಿಲೀಶ್ ಶಶಿ ,
ಉಪವಿಭಾಗಾಧಿಕಾರಿಗಳು,
ಆಡಳಿತಾಧಿಕಾರಿ, ಪುರಸಭೆ ಮುದಗಲ್ಲ