Advertisement

ಮೂಡುಬಿದಿರೆ ಸಂತೆ ಬಾಗಿಲು ಅಪಘಾತ ವಲಯ!

06:06 PM Jan 04, 2023 | Team Udayavani |

ಮೂಡುಬಿದಿರೆ: ಪುರಸಭೆಯ ದಿನವಹಿ ಮಾರುಕಟ್ಟೆ ಬೀಡು ಬಿಟ್ಟು ಬದಿಯಲ್ಲೇ ಹಾದು ಹೋಗಿರುವ ರಿಂಗ್‌ರೋಡ್‌ ಮತ್ತು ಪೇಟೆಯಿಂದ ಆಳ್ವಾಸ್‌ ಹೆಲ್ತ್‌ ಸೆಂಟರ್‌ ಹಾದು ಸಂತೆಯತ್ತ ಸಾಗುವ ಅಥವಾ ಅತ್ತ ಆಳ್ವಾಸ್‌ನ ಎಮರ್ಜೆನ್ಸಿ ವಾರ್ಡ್‌ನತ್ತ ಧಾವಿಸುವ ವಾಹನಗಳ ಬರುವ ರಸ್ತೆ ಲಂಬ ಕೋನದಲ್ಲಿ ಸಂಧಿಸುವುದರಿಂದ ಅಪಘಾತ ವಲಯವಾಗಿ ಮಾರ್ಪಟ್ಟಿದೆ.

Advertisement

ವಾರದ ಸಂತೆ ನಡೆಯುವ ಶುಕ್ರವಾರ ವಂತೂ ಇಲ್ಲಿ ಜೀವ ಹಿಡಿದುಕೊಂಡೇ ಸಂತೆ ಯತ್ತ ಸಾಗಬೇಕಾದ ಭಯಾನಕ ಸನ್ನಿವೇಶ ಯಾವಾಗಲೂ ಕಂಡುಬರುತ್ತಲೇ ಇದೆ. ಇದಕ್ಕೆ ಸಜೀವ ಉದಾಹರಣೆ ಮಂಗಳ ವಾರ ವರದಿಗಾರರ ಎದುರೇ ಅಚಾನಕ್‌ ಆಗಿ ನಡೆದ ಘಟನೆ. ಸುಮಾರು ಹನ್ನೊಂದು ಗಂಟೆಗೆ ಪೇಟೆಯಿಂದ ಆಳ್ವಾಸ್‌ ಆಸ್ಪತ್ರೆ ಹಾದಿಯಾಗಿ ಬಂದ ಮಣಿಪುರದ ವಿದ್ಯಾ ರ್ಥಿಯೋರ್ವನ ಬೈಕ್‌ ಮತ್ತು ರಿಂಗ್‌ ರೋಡ್‌ನ‌ ದಕ್ಷಿಣ ಭಾಗದಿಂದ ಬಂದ ಟೆಂಪೋ ವಾಹನ ಲಂಬಕೋನದಲ್ಲಿ ಢಿಕ್ಕಿ ಹೊಡೆದು ಬೈಕ್‌ ಅಡ್ಡ ಬಿತ್ತು. ಮಣಿ ಪುರದ ವಿದ್ಯಾರ್ಥಿ ಸಮರ ಕಲೆಗಳಲ್ಲಿ ನಿಷ್ಣಾತ ನಾಗಿದ್ದುದರಿಂದಲೋ ಏನೋ ಢಿಕ್ಕಿ ಹೊಡೆದ ತತ್‌ಕ್ಷಣ ಛಂಗನೆ ಜಿಗಿದು ಒಂದಷ್ಟು ದೂರ ಬಿದ್ದ ಪರಿನೋಡಿದರೆ ಒಮ್ಮೆ ನೋಟಕರ ಎದೆ ಝಲ್ಲೆನ್ನಿಸುವಂತಿತ್ತು. ಸುದೈವವಶಾತ್‌, ಟೆಂಪೋ ಸಾಧಾರಣ ವೇಗದಲ್ಲಿದ್ದುದರಿಂದ ಪ್ರಾಯಶಃ ಯಾವುದೇ ಜೀವಾಪಾಯ ಸಂಭವಿಸಲಿಲ್ಲ.

ಈ ಸಮಸ್ಯೆಯೂ ಸಹಿತ ರಿಂಗ್‌ ರೋಡ್‌ನ‌ಲ್ಲಿರುವ ಹತ್ತಾರು ಸಮಸ್ಯೆಗಳ ಬಗ್ಗೆ 40 ತಿಂಗಳ ಹಿಂದೆ ಲೋಕಾಯುಕ್ತಕ್ಕೆ ಸ್ಥಳೀಯರು ಲಿಖಿತ ಅರ್ಜಿ ಸಲ್ಲಿಸಿದ್ದರು. ಆ ಬಳಿಕ ಮೂರು – ನಾಲ್ಕು ತಿಂಗಳ ಬಳಿಕ ಅರ್ಜಿದಾರರಿಗೆ ಒಂದು ಪತ್ರದ ನೊಣಪ್ರತಿ ಬಂದದ್ದು ಹೊರತು ಪಡಿಸಿದರೆ ಯಾವುದೇ ಕಾರ್ಯ ನಡೆದಿಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ಪತ್ರಿಕೆಗಳಲ್ಲಿ ಹಲವಾರು ಬಾರಿ ಪ್ರಕಟವಾಗಿದ್ದರೂ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರೂ ಏನೂ ಆಗಿಲ್ಲ ಎಂಬುದು ದುರಂತ. ಇನ್ನಾದರೂ ಅಗತ್ಯ ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹ.

ಸಂಬಂಧ ಪಟ್ಟವರ ದಿವ್ಯ ಮೌನ
ಪುರಸಭೆ, ಪೊಲೀಸ್‌, ಪಿಡಬ್ಲ್ಯುಡಿ, ಲೋಕಾಯುಕ್ತ ಈ ವ್ಯವಸ್ಥೆಗಳೆಲ್ಲ ಈ ರಿಂಗ್‌ ರೋಡ್‌ ಸಮಸ್ಯೆಗಳ ಬಗ್ಗೆ ದಿವ್ಯ ಮೌನ ತಳೆದಿರುವಂತಿದ್ದು ಸಂತೆ ಬಾಗಿಲು, ಆಸ್ಪತ್ರೆ ತಿರುವು, ಬಿಎಸ್‌ಎನ್‌ಎಲ್‌ ಟವರ್‌, ಕನ್ನಡ ಭವನ, ಪಶ್ಚಿಮದತ್ತ ಸಾಗುವ ರಸ್ತೆ, ರಿಂಗ್‌ ಮುಂದುವರಿದ ಎಡಗಡೆ ಸಿಗುವ ಈಜುಕೊಳ ಮತ್ತಿತರ ಕಡೆಗಳಲ್ಲಿ ಸಂಭಾವ್ಯ ದುರಂತಗಳನ್ನು ತಡೆಯಲು ಏನು ಮಾಡಬಹುದೆಂದು ಮೌನವಾಗಿ ಚಿಂತಿಸುತ್ತಿವೆಯೋ ಎಂಬ ಗುಮಾನಿ ಹುಟ್ಟಿದರೆ ಆಚ್ಚರಿಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next