Advertisement

“ಇಸ್ರೋ ಯುವ ವಿಜ್ಞಾನಿಗೆ ಮುಡಿಪುವಿನ ವಸುಷ್ಣ ಆಯ್ಕೆ

12:43 AM May 18, 2022 | Team Udayavani |

ಉಳ್ಳಾಲ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ನಡೆಸುತ್ತಿರುವ ಯುವ ವಿಜ್ಞಾನಿ ಕಾರ್ಯಕ್ರಮಕ್ಕೆ ಮುಡಿಪುವಿನ ಜವಾಹರ್‌ ನವೋದಯ ವಿದ್ಯಾಲಯದ 9ನೇ ತರಗತಿಯ ವಸುಷ್ಣ ಟಿ. ರಾಷ್ಟ್ರೀಯ ಪರೀಕ್ಷೆಯ ಮೂಲಕ ಆಯ್ಕೆಯಾಗಿದ್ದಾರೆ.

Advertisement

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಉದಯೋನ್ಮುಖ ಪ್ರವೃತ್ತಿಗಳ ಬಗ್ಗೆ ಅರಿವು ಮೂಡಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಬೆಂಗಳೂರಿನ ಕೇಂದ್ರದಲ್ಲಿ ಮೇ 15ರಿಂದ 30ರ ವರೆಗೆ “ಯುವ ವಿಜ್ಞಾನ್‌ ಕಾರ್ಯಕ್ರಮ್‌'(ಯುವಿಕಾ 2022) ಆಯೋಜಿಸಿದೆ. ಇದರಲ್ಲಿ ದೇಶಾದ್ಯಂತ ಆಯ್ಕೆಯಾದ 150 ಕಿರಿಯ ವಿಜ್ಞಾನಿಗಳ ತಂಡದಲ್ಲಿ ವಸುಷ್ಣ ಟಿ. ಒಬ್ಬರಾಗಿದ್ದಾರೆ.

ಮಂಗಳೂರಿನ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ ಎಂಆರ್‌ಪಿಎಲ್‌ನ 9ನೇ ತರಗತಿಯ ಪ್ರಥಮ್‌ ಡಿ. ಇಸ್ರೋ ಯುವ ವಿಜ್ಞಾನಿ ಕಾರ್ಯಕ್ರಮಕ್ಕೆ ಆಯ್ಕೆಯಾದ ಇನ್ನೋರ್ವ ವಿದ್ಯಾರ್ಥಿ ಆಗಿದ್ದಾರೆ.

ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರ ಸೇರಿದಂತೆ ವಿವಿಧ ಇಸ್ರೋ ಕೇಂದ್ರಗಳ ಪ್ರಯೋಗಾಲಯಗಳಿಗೆ ಭೇಟಿ ನೀಡುವುದು, ಖ್ಯಾತ ವಿಜ್ಞಾನಿಗಳ ಜತೆ ಮಾತುಕತೆ ಮತ್ತು ಪ್ರಾಯೋಗಿಕ ಪ್ರದರ್ಶನಗಳನ್ನು ವೀಕ್ಷಿಸುವುದು ಈ ಕಾರ್ಯಕ್ರಮದ ಭಾಗವಾಗಿವೆ.

ವಿದ್ಯಾರ್ಥಿ ವಸುಷ್ಣ 2019ನೇ ಇಸವಿಯಲ್ಲಿ ಇಪ್ಪತ್ತೇಳನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನದಲ್ಲಿ ನವೋದಯ ವಿದ್ಯಾಲಯ ಶಾಲೆಗಳ ಒಕ್ಕೂಟವನ್ನು ಪ್ರತಿನಿಧಿಸಿದ್ದರು. 2021ರಲ್ಲಿ ನಡೆದ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನದ ಭಾಷಣ ಸ್ಪರ್ಧೆಯಲ್ಲಿ(ಐಐಎಸ್‌ಎಫ್‌-2021) ದ್ವಿತೀಯ ಬಹುಮಾನ ಪಡೆದಿದ್ದರು. ಅವರು ಮುಡಿಪಿನ ಯುವ ವೈದ್ಯ ದಂಪತಿ ಡಾ| ಅರುಣ್‌ ಪ್ರಸಾದ್‌ ಮತ್ತು ಡಾ| ನಯನಾ ಗೌರಿಯವರ ಪುತ್ರರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next