ಮೂಡಿಗೆರೆ: ಗೋಣಿಬೀಡು ಗ್ರಾಮ ಪಂಚಾಯಿತಿ ಕಸವನ್ನು ರಸ್ತೆಬದಿಯ ನದಿಮೂಲಕ್ಕೆ ಸುರಿಯುತ್ತಿದ್ದು, ಇದರಿಂದ ಹೇಮಾವತಿ ನದಿ ಕಲುಷಿತವಾಗುತ್ತಿದೆ.
ಸಾರ್ವಜನಿಕರಿಗೆ ಸ್ವಚ್ಚತೆಯ ಅರಿವು ಮೂಡಿಸಬೇಕಾದ ಗ್ರಾಮ ಪಂಚಾಯಿತಿಯೇ ಸ್ವತಃ ತಾನೇ ಕುಡಿಯುವ ನೀರಿನ ಮೂಲಕ್ಕೆ ಕಸ ಸುರಿಯುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಗೋಣಿಬೀಡು ಜನ್ನಾಪುರ ರಸ್ತೆಯ ನಡುವೆ ಹರಿಯುತ್ತಿರುವ ಹೇಮಾವತಿ ನದಿಯ ಉಪನದಿ ಸುಣ್ಣದ ಹಳ್ಳದ ಸೇತುವೆಯ ಬಳಿ ಗ್ರಾಮ ಪಂಚಾಯಿತಿ ಕಸದ ವಾಹನ ದಿನನಿತ್ಯ ಕಸವನ್ನು ತಂದು ಸುರಿಯುತ್ತಿದೆ. ಹೊಳೆಯ ಪಕ್ಕದಲ್ಲಿ ಸುರಿಯುತ್ತಿರುವ ಕೊಳಚೆ ಕಸವು ಹೇಮಾವತಿ ನದಿಗೆ ಸೇರುತ್ತಿದೆ.
ಹೇಮಾವತಿ ನದಿಯು ಅನೇಕ ಗ್ರಾಮಗಳಿಗೆ ಕುಡಿಯುವ ನೀರಿನ ಮೂಲವಾಗಿದೆ. ಸಮೀಪದಲ್ಲಿಯೇ ಅಗ್ರಹಾರ ಆದಿಸುಬ್ರಮಣ್ಯ ದೇವಾಲಯವಿದ್ದು, ಪಕ್ಕದಲ್ಲಿಯೇ ಹರಿಯುತ್ತಿರುವ ಹೇಮಾವತಿ ನದಿಯಿಂದಲೇ ನೀರನ್ನು ಬಳಸಲಾಗುತ್ತದೆ. ಕಸದಿಂದ ನದಿಯಲ್ಲಿ ಜಲಚರಗಳ ಜೀವಕ್ಕೂ ಕುತ್ತು ಉಂಟಾಗಿದೆ.
ರಸ್ತೆ ಬದಿಯಲ್ಲಿಯೇ ಕಸದ ದೊಡ್ಡ ರಾಶಿಯಾಗಿದ್ದು, ದಾರಿಹೋಕರು, ವಾಹನ ಸವಾರರು ಮೂಗು ಮುಚ್ಚಿಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಸದ ರಾಶಿಗೆ ಜಾನುವಾರುಗಳು, ನಾಯಿಗಳು ಮುತ್ತಿಗೆ ಹಾಕಿ ತಿನ್ನುತ್ತಿದ್ದು, ಇದರಿಂದ ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ.
ಇಂತಹ ಬೇಜಾವಾಬ್ದಾರಿತನವನ್ನು ತೋರುತ್ತಿರುವ ಗ್ರಾಮ ಪಂಚಾಯಿತಿ ಆಡಳಿತ ಮತ್ತು ಅಧಿಕಾರಿಗಳ ವಿರುದ್ಧ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ