ಕೊಟ್ಟಿಗೆಹಾರ: ಜನಗಳ ಕಣ್ಣಿನ ದೃಷ್ಟಿ ಬೀಳಬಾರದು ಎಂದು ದೃಷ್ಟಿ ತೆಗೆಸಿಕೊಂಡು ಬರುವಾಗಲೇ ಅಪಘಾತವಾಗಿ ನಾಲ್ವರು ಸಣ್ಣ-ಪುಟ್ಟ ಗಾಯಗಳಿಂದ ಪಾರಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರಿನಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಬಾಳೂರಿನ ಅಭಿ-ಅನುಷಾ ಎಂಬುವರಿಗೆ ವಾರದ ಹಿಂದೆ ಮದುವೆಯಾಗಿತ್ತು. ಹಾಗಾಗಿ, ಜನಗಳ ದೃಷ್ಠಿಯಾಗಬಾರದು ಎಂದು ಮೂಡಿಗೆರೆ ತಾಳೂಕಿನ ಕೆಸವಳಲು-ಕೂಡಿಗೆ ಗ್ರಾಮದಲ್ಲಿ ದೃಷ್ಟಿ ತೆಗೆಸಲು ಹೋಗಿದ್ದರು. ಅಲ್ಲಿಂದ ವಾಪಸ್ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಬಾಳೂರು ಸಮೀಪದ ಅಜ್ಜಿಕೂಡಿಗೆ ಎಸ್ಟೇಟ್ ಬಳಿ ಪಲ್ಟಿಯಾಗಿದೆ. ಕಾರಿನಲ್ಲಿದ್ದ ನವದಂಪತಿಗಳು ಹಾಗೂ ಅವರ ಪೋಷಕರು ಸೇರಿ ನಾಲ್ವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತ ಸಂಬಂಧ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರನ ತಾಯಿ ಕುತ್ತಿಗೆ ಭಾಗಕ್ಕೆ ಸ್ವಲ್ಪ ಹೆಚ್ಚಿನ ಹೊಡೆತ ಬಿದ್ದಿರುವುದರಿಂದ ಅವರನ್ನ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಸಣ್ಣ-ಪುಟ್ಟ ಗಾಯಗಳಾದವನ್ನ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡದಾಗಿ ಅಪಘಾತವಾಗುತ್ತಿತ್ತೋ ಏನೋ….ಆದರೆ , ದೃಷ್ಟಿ ತೆಗೆಸಿಕೊಂಡು ಬಂದ ಪರಿಣಾಮ ಚಿಕ್ಕದಾಗಿಯೇ ಮುಗಿದಿದೆ ಎಂದು ಕೆಸವಳಲು-ಕೂಡಿಗೆ ಸ್ಥಳದ ಮಹಿಮೆ ತಿಳಿದವರು ಭಾವಿಸಿದ್ದಾರೆ.
ಕೆಸವಳಲು-ಕೂಡಿಗೆ ಇಲ್ಲಿ ಹೇಮಾವತಿ ನದಿ ತೀರಿದಲ್ಲಿ ತಡೆ ಒಡೆಯುತ್ತಾರೆ.ದೃಷ್ಟಿ ತೆಗೆಯುತ್ತಾರೆ. ಹೊಸ ವಾಹನ ತೆಗೆದುಕೊಂಡುವರು ಇಲ್ಲಿ ಬಂದು ಪೂಜೆ ಮಾಡಿಸುತ್ತಾರೆ. ಮೂಡಿಗೆರೆ ಸುತ್ತಮುತ್ತ ಜನ ಸೇರಿ, ಹೊರಜಿಲ್ಲೆ, ಹೊರರಾಜ್ಯದಿಂದಲೂ ಇಲ್ಲಿಗೆ ಬಂದು ಪೂಜೆ ಮಾಡಿಸಿ, ತಡೆಯೊಡೆದು, ದೃಷ್ಟಿತೆಗೆಸುತ್ತಾರೆ. ಇಲ್ಲಿ ಭಾನುವಾರ-ಗುರುವಾರ ಮಾತ್ರ ಈ ರೀತಿ ತಡೆಯೊಡೆಯುವ ಪೂಜೆ ಮಾಡುತ್ತಾರೆ. ಇಂದು ಕೂಡ ಅಲ್ಲಿ ಪೂಜೆ ಮಾಡಿಸಿ, ದೃಷ್ಟಿ ತೆಗೆಸಿಕೊಂಡು ಬರುವಾಗ ಈ ದುರ್ಘಟನೆ ಸಂಭವಿಸಿದೆ.
ಮಾಟ-ಮಂತ್ರಕ್ಕೂ ಇಲ್ಲಿ ಹೇಮಾವತಿ ನದಿ ತೀರದಲ್ಲಿ ತಡೆಯೊಡೆಯುತ್ತಾರೆ. ಇಲ್ಲಿನ ರಾಮ-ಲಕ್ಷ್ಮಣ-ಸೀತೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ,ದಲಿತ ಕುಟುಂಬಗಳೇ ಈ ಆಚರಣೆ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿನ ಈ ಆಚರಣೆಗೆ ಸುಮಾರು ಐದು ಶತಮಾನಗಳ ಇತಿಹಾಸವಿದೆ.