Advertisement

ಮಲೆನಾಡಲ್ಲಿ ಹೊಸ ವರ್ಷದ ಸಂಭ್ರಮಾಚರಣೆ

03:36 PM Jan 02, 2020 | Team Udayavani |

ಮೂಡಿಗೆರೆ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಲವು ಭಾಗಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿತ್ತು. ನೂತನ ವರ್ಷ 2020ರ ಮೊದಲ ಕ್ಷಣವನ್ನು ಸವಿಯಲು ಸ್ಥಳೀಯರು ಸೇರಿದಂತೆ ನಗರ ಪ್ರದೇಶಗಳಿಂದ ಬಂದಿದ್ದ ಬಂಧುಗಳು, ಸ್ನೇಹಿತರು ಮತ್ತು ಹಲವು ಪ್ರವಾಸಿಗರು ತುದಿಗಾಲಲ್ಲಿ ನಿಂತಿದ್ದರು.

Advertisement

ಸೋಮವಾರದಿಂದಲೇ ಭರದ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಹಲವರು ತಮ್ಮ ಸ್ನೇಹಿತರೊಂದಿಗೆ ಮಲೆನಾಡಿನ ತಮ್ಮ ತಮ್ಮ ಮೂಲ ಸ್ಥಳಕ್ಕೆ ತೆರಳಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಿಕೊಂಡರು. ನಗರ ಪ್ರದೇಶಗಳಿಗೆ ಕಡಿಮೆ ಇಲ್ಲದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡು, ಪಾರ್ಟಿ ಮಾಡಿಕೊಳ್ಳಲು ತಯಾರಿ ನಡೆಸಲಾಗಿತ್ತು. ಅದರಲ್ಲೂ ಸ್ಥಳೀಯ ರೆಸಾರ್ಟ್‌, ಹೋಮ್‌ ಸ್ಟೇಗಳು ಒಂದು ತಿಂಗಳ ಮುಂಚಿತವಾಗಿಯೇ ಭರ್ತಿಯಾಗಿದ್ದವು.

ನೂತನ ವರ್ಷ ಅಂದಮೇಲೆ ಕುಡಿತ, ಮೋಜು, ಮಸ್ತಿ ಇಲ್ಲದಿದ್ದರೆ ಹೇಗೆ ಎಂದು ಸೋಮವಾರದಿಂದಲೇ ಮೂಡಿಗೆರೆ ಪಟ್ಟಣದಲ್ಲಿ ಖರೀದಿಯ ಭರಾಟೆ ಜೋರಾಗಿತ್ತು. ಕೆಲವರು ಗ್ರೀಟಿಂಗ್ಸ್‌, ಹೂ ಗುಚ್ಚಗಳನ್ನು ಖರೀದಿಗೆ ತಯಾರಿ ನಡೆಸಿದ್ದರೆ, ಬಹುತೇಕರು ಮದ್ಯ ಖರೀದಿಯಲ್ಲಿ ಮಗ್ನರಾಗಿದ್ದರು.

ಯುವ ಪೀಳಿಗೆ ಸೇರಿದಂತೆ ಹಲವರು ಮಂಗಳವಾರ ಇಡೀದಿನ ರಾತ್ರಿ ಪಾರ್ಟಿ ಆಚರಿಸಲು ಸಕಲ ತಯಾರಿಗಳನ್ನು ಮಾಡಿಕೊಳ್ಳುವುದರಲ್ಲಿ ಕಾರ್ಯನಿರತರಾಗಿದ್ದರು. ಸಂಜೆಯ ವೇಳೆಗೆ ಮದ್ಯದ ಜೊತೆಯಲ್ಲಿ ತಮಗಿಷ್ಟವಾದ ಮಾಂಸಾಹಾರದ ವಿವಿಧ ಶೈಲಿಯ ಖಾದ್ಯಗಳನ್ನು ತಯಾರಿಸಿಕೊಂಡು ಹಾಗೂ ಫೈರ್‌ ಕ್ಯಾಂಪ್‌ಗ್ಳನ್ನು ಸಿದ್ಧಪಡಿಸಿಕೊಂಡು ರಾತ್ರಿಗಾಗಿ ಕಾದು ಕುಳಿತಿದರು.

ಇನ್ನು ರೆಸಾರ್ಟ್‌, ಹೋಮ್‌ ಸ್ಟೇಗಳಲ್ಲಿ ಎಲ್ಲಾ ಸಿದ್ಧತೆಗಳನ್ನು ವ್ಯವಸ್ಥಾಪಕರೇ ಮಾಡಿದ್ದರಿಂದ ಪ್ರವಾಸಿಗರು ಸುತ್ತಮುತ್ತಲಿನ ಪ್ರೇಕ್ಷಣೀಯ ಪ್ರದೇಶಗಳ ಭೇಟಿ ಮತ್ತು ವಿಶ್ರಾಂತಿ ಪಡೆಯುವುದರ ಬಗ್ಗೆ ಗಮನ ಹರಿಸಿದರು.

Advertisement

ಮದ್ಯ ಸೇವಿಸಿ ವಾಹನ ಚಲಾಯಿಸುವವರನ್ನು ಹಿಡಿದು ದಂಡ ಹಾಕಲಾಗುವುದು. ಕುಡಿದು ಗಲಾಟೆ ಮಾಡಿಕೊಳ್ಳುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿತ್ತು.

ಬಹುತೇಕ ಕಡೆಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಹೊರಗಿನಿಂದ ಬರುವ ಪ್ರವಾಸಿಗರ ಸಂಪೂರ್ಣ ಮಾಹಿತಿ ಪಡೆದು ಪ್ರವೇಶ ನೀಡುವಂತೆ ಎಲ್ಲಾ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿತ್ತು. ನಿಗದಿತ ಸಮಯಕ್ಕಿಂತ ಬಾಗಿಲು ತೆರೆಯದಂತೆ ಎಲ್ಲಾ ಬಾರ್‌ ಮಾಲಿಕರಿಗೆ ಎಚ್ಚರಿಕೆ ನೀಡಲಾಗಿದೆ. ಮಧ್ಯರಾತ್ರಿ ನಂತರ ಅನಾವಶ್ಯಕವಾಗಿ ತಿರುಗಾಡುವವರ ಮೇಲೆ ಗಮನ ಹರಿಸಿರುವುದಾಗಿ ಇನ್ಸ್‌ಪೆಕ್ಟರ್‌ ಅವರು “ಉದಯವಾಣಿ’ಗೆ ತಿಳಿಸಿದರು.

ಮದ್ಯ-ಮಾಂಸದ ಮಾರಾಟ ಜೋರು: ಪ್ರತಿ ವರ್ಷದಂತೆ ಈ ಬಾರಿಯೂ ಮದ್ಯ ಮತ್ತು ಮಾಂಸದ ಮಾರಾಟದಲ್ಲಿ ಏರಿಕೆ ಕಂಡಿದೆ. ಸೋಮವಾರದಿಂದ ಮದ್ಯ ಸಂಗ್ರಹಣೆ ಮತ್ತು ಮಾರಾಟ ಜೋರಾಗಿದ್ದರೆ, ಮಂಗಳವಾರ ಬೆಳಗ್ಗಿನಿಂದಲೇ ಮಾಂಸದ ಅಂಗಡಿಗಳಿಗೆ ಕ್ಯೂ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಇತ್ತ ರುಚಿಕರ ಮಾಂಸಾಹಾರಿ ಖಾದ್ಯಗಳನ್ನು ತಯಾರಿ ಮಾಡುವ ಅಡುಗೆ ಭಟ್ಟರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಇತ್ತು. ಕೊನೆಗೆ ಯಾರೂ ಸಿಗದಿದ್ದ ಪಕ್ಷದಲ್ಲಿ ಅಡುಗೆ ಸಹಾಯಕರನ್ನೇ ಅಡುಗೆ ಮಾಡಿಕೊಡಲು ಕರೆದೊಯ್ಯುತ್ತಿರುವ ದೃಶ್ಯ ತಮಾಷೆಯಾಗಿ ಕಂಡುಬರುತ್ತಿತ್ತು. ಒಟ್ಟಾರೆ ಅವರವರ ಮನೋಭಾವಕ್ಕೆ ತಕ್ಕಂತೆ ಹೊಸ ವರ್ಷಾಚರಣೆ ನಡೆಸಲಾಯಿತು. ಕೆಲ ಯುವಕರು ರಸ್ತೆಗಳ ಮಧ್ಯ ಭಾಗದಲ್ಲಿ ಶುಭಾಶಯ ಕೋರುವ ಬರಹಗಳನ್ನು ಬರೆದು, ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಕೆಲವರು ಜಾಲತಾಣಗಳಲ್ಲಿ ಶುಭಾಶಯ ವಿನಿಮಯ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next