ಮೂಡಿಗೆರೆ: ಪಟ್ಟಣ ಪಂಚಾಯ್ತಿಯ ಚುನಾವಣೆ ಘೋಷಣೆಯಾದರೂ ಯಾವ ಪಕ್ಷವೂ ಅಭ್ಯರ್ಥಿಗಳ ಪೂರ್ಣ ಪ್ರಮಾಣದ ಪಟ್ಟಿ ಅಂತಿಮಗೊಳಿಸಿಲ್ಲ. ಸುಮಾರು 7500ರಷ್ಟು ಮತದಾರರಿರುವ 11 ವಾರ್ಡುಗಳ ಪಟ್ಟಣಪಂಚಾಯ್ತಿಯಲ್ಲಿ ಎಲ್ಲ ಪಕ್ಷಗಳಿಂದ ಸೇರಿ ಸರಿಸುಮಾರು 75 ಮಂದಿ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ. ಆಕಾಂಕ್ಷಿಗಳು ಈಗಾಗಲೇ ಟಿಕೇಟಿಗಾಗಿ ಮೂರೂ ಪಕ್ಷಗಳ ನಾಯಕರ ದುಂಬಾಲು ಬಿದ್ದಿದ್ದಾರೆ. ಇದರಲ್ಲಿ ಹಾಲಿ ಸದಸ್ಯರೂ ಸೇರಿಕೊಂಡಿದ್ದಾರೆ. ಇದರಿಂದ ಮೂರೂ ಪಕ್ಷದ ವರಿಷ್ಠರಿಗೆ ಅಭ್ಯರ್ಥಿಗಳನ್ನು ಆಯ್ಕೆಮಾಡುವುದೇ ಗೊಂದಲವಾಗಿದೆ. ಕಳೆದ ಬಾರಿ ಕಾಂಗ್ರೆಸ್ ಮತ್ತು ಬಿಜಿಪಿ ಸಮ್ಮಿಶ್ರದೊಂದಿಗೆ ಆಡಳಿತ ನಡೆಸಿತ್ತು. ಜೆಡಿಎಸ್ ಶಾಸಕರಾದ ಬಿ.ಬಿ.ನಿಂಗಯ್ಯನವರ ಮತ ಸಮ್ಮಿಶ್ರಕ್ಕೆ ದೊರಕಿದ್ದರಿಂದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಹಕಾರಿಯಾಗಿತ್ತು. ಹಾಗಾಗಿ ಜೆಡಿಎಸ್ ಕೂಡಾ ಸಮ್ಮಿಶ್ರದಲ್ಲಿ ಸೇರಿಕೊಂಡಂತಾಗಿತ್ತು.
ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಸಂಪೂರ್ಣ ಅಧಿಕಾರ ಪಡೆಯಲು ಹೋರಾಟ ಮಾಡುತ್ತಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಎರಡೂ ಪಕ್ಷದ ನಾಯಕರುಗಳಿಗೂ ಮೈತ್ರಿಮಾಡಿ ಚುನಾವಣೆ ನಡೆಸುವ ಮನಸ್ಸಿದ್ದಂತಿಲ್ಲ. ಹಾಗಾಗಿ ಮೂರು ಪಕ್ಷಗಳೂ ಪ್ರತ್ಯೇಕವಾಗಿಯೇ ಚುನಾವಣೆ ಎದುರಿಸುವ ಹೆಚ್ಚಿನ ಸಾಧ್ಯತೆಗಳು ಕಂಡುಬರುತ್ತಿದೆ.
ಪಟ್ಟಣಪಂಚಾಯ್ತಿಯ ಚುನಾವಣೆಯಲ್ಲಿ ಪಕ್ಷಕ್ಕಿಂತಲೂ ಅಭ್ಯರ್ಥಿಗಳ ವರ್ಚಸ್ಸೇ ಗೆಲ್ಲಲು ಕಾರಣವಾಗುತ್ತದೆ. ಉತ್ತಮ ವರ್ಚಸ್ಸು ಹೊಂದಿದ ಅಭ್ಯರ್ಥಿಗಳನ್ನು ಮೂರು ಪಕ್ಷಗಳು ಸೆಳೆಯಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ದೊಡ್ಡ ಪಕ್ಷವಾದ ಕಾಂಗ್ರೆಸ್ ಮತ್ತು ಬಿಜೆಪಿ ಇದುವರೆಗೆ ಪಕ್ಷದಲ್ಲಿ ಸಕ್ರಿಯವಾಗಿ ದುಡಿದ ಕಾರ್ಯಕರ್ತರಿಗೆ ಟಿಕೇಟ್ ನೀಡುವ ಉದ್ದೇಶ ಹೊಂದಿದೆ. ಅದರಲ್ಲೂ ಹೊಸಮುಖಗಳಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ. ಈ ರೀತಿಯ ತೀರ್ಮಾನಗಳಿಂದ ಹಾಲಿ ಸದಸ್ಯರುಗಳಿಗೆ ತಲೆನೋವಾಗುವ ಸಾಧ್ಯತೆಯಿದೆ. ಅಲ್ಲದೇ ವಾರ್ಡುಗಳ ಮೀಸಲಾತಿ ಬದಲಾವಣೆಯಿಂದ ಹಾಲಿ ಸದಸ್ಯರುಗಳಿಗೂ ತಮ್ಮ ವಾರ್ಡನ್ನು ಬಿಟ್ಟು ಬೇರೆ ವಾರ್ಡಿನಲ್ಲಿ ನಿಲ್ಲಲು ಸಮಸ್ಯೆಯಾಗಲಿದೆ. ಆದರೆ ಅನ್ಯಮಾರ್ಗವಿಲ್ಲದಿರುವುದರಿಂದ ಹೊಸವಾರ್ಡಿನಲ್ಲಿ ನಿಂತು ಮತ ಗಿಟ್ಟಿಸಲೇಬೇಕಾಗಿದೆ. ಹೀಗಾಗಿ ಇತ್ತ ಟಿಕೆಟ್ ಸಿಕ್ಕರೂ ಜಯಶೀಲರಾಗಲು ಹರಸಾಹಸ ಪಡಬೇಕಿದೆ. ಇದರಿಂದಾಗಿ ಪಕ್ಷದ ವರಿಷ್ಠರಿಗೆ ಅಭ್ಯರ್ಥಿಗಳ ಪಟ್ಟಿ ಶೀಘ್ರ ಅಂತಿಮಗೊಳಿಸಬೇಕಿದೆ.
ನಾಗೇಶ ಹೆಬ್ಟಾರ್