Advertisement

ಅನಾವರಣಗೊಂಡ ಯುವಸಮೂಹದ ಸಾಂಸ್ಕೃತಿಕ ಸೊಬಗು

05:00 PM Nov 11, 2019 | Naveen |

ಮೂಡಿಗೆರೆ: ಅಡ್ಯಂತಾಯ ರಂಗಮಂದಿರದಲ್ಲಿ ನಡೆದ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ಬಗೆಬಗೆಯ ನೃತ್ಯಗಾಯನ ವೈವಿಧ್ಯಮಯ ವಾದ್ಯ ಸಂಗೀತದ ಮೂಲಕ ಯುವ ಪ್ರತಿಭೆಗಳು ಸಾಂಸ್ಕೃತಿಕ ಕಲಾ ಕೌಶಲ್ಯವನ್ನು ಮೆರೆದರು.

Advertisement

ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೂಡಿಗೆರೆಯ ಮಿತ್ರಜಾನಪದ ಕಲಾ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌ ಮಾತನಾಡಿ, ಇಂತಹ ಕಾರ್ಯಕ್ರಮಗಳ ಮೂಲ ಉದ್ದೇಶದ ಸದುಪಯೋಗವಾಗಬೇಕು. ಸಾರ್ವಜನಿಕರು ಹೆಚ್ಚಿನ ಮಟ್ಟದಲ್ಲಿ ಭಾಗವಹಿಸಬೇಕು.ಯುವಜನೋತ್ಸವ ವಿವಿಧ ಕಾರ್ಯಕ್ರಮಗಳ ಸಮ್ಮಿಲನವಾಗಿದೆ. ಸಂಗೀತ, ನಾಟಕ, ಭರತನಾಟ್ಯ, ಕುಚಿಪುಡಿಯಂತಹ ನೃತ್ಯಗಳ ಜೊತೆಗೆ ವಿವಿಧ ಸಂಗೀತ ಸಲಕರಣೆಗಳ ನುಡಿಸುವಿಕೆ ಹೀಗೆ ಹಲವು ವಿವಿಧ ರೀತಿಯ ಕಾರ್ಯಕ್ರಮಗಳ ಪರಿಚಯವಾಗುತ್ತದೆ. ಇಲ್ಲಿ ಗ್ರಾಮೀಣ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದ ವರೆಗೆ ಬೆಳೆಯುವ ಅವಕಾಶ ಇರುತ್ತದೆ ಎಂದರು.

ತಾಪಂ ಅಧ್ಯಕ್ಷ ಕೆ.ಸಿ. ರತನ್‌ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳು ಸಹಜ. ಆದರೆ ತಾಲೂಕು ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುವುದು ವಿರಳ. ಜನರು ಸಭೆ ಸಮಾರಂಭಗಳಿಗೆ ಭಾಗವಹಿಸುವದು ಕಡಿಮೆಯಾಗುತ್ತಿದೆ. ಮನೆಯಲ್ಲಿಯೇ ಕುಳಿತು ಎಲ್ಲವನ್ನೂ ನೋಡುವುದು ಒಳ್ಳೆಯ ಅಭ್ಯಾಸವಲ್ಲ. ಬರೀ ಪದವಿ ಗಳಿಸಿದರಷ್ಟೇ ವಿದ್ಯೆ ಸಂಪಾದಿಸಿದಂತೆ ಆಗುವುದಿಲ್ಲ. ಬದಲಾಗಿ ನೈತಿಕ ಮೌಲ್ಯಗಳೊಂದಿಗೆ ತನ್ನ ಸಮಾಜದ ಬಗ್ಗೆ ಉತ್ತಮ ಮನೋಭಾವ ಬೆಳೆಸಿಕೊಂಡವರೇ ನಿಜವಾದ ಜ್ಞಾನವಂತರಾಗುತ್ತಾರೆ ಎಂದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಸಂಸ್ಕೃತಿಗೆತಕ್ಕಂತೆ ವೇಷಭೂಷಣಗಳನ್ನು ಧರಿಸುವುದರಿಂದ ವಿವಿಧ ಸಂಸ್ಕೃತಿಗಳ ಪರಿಚಯ ಎಲ್ಲರಿಗೂ ಆಗುತ್ತದೆ. ಇವುಗಳ ಮಧ್ಯೆ ತಮ್ಮತನ ಕಳೆದು ಹೋಗದಂತೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.

Advertisement

ಭರತ ನಾಟ್ಯ, ನಾನಾ ಜನಪದ ನೃತ್ಯ ಪ್ರದರ್ಶನ, ಜನಪದಗೀತೆ ಗಾಯನ, ಶಾಸ್ತ್ರೀಯ ಸಂಗೀತ ಮತ್ತು ಸಂಗೀತ ವಾದ್ಯಗಳ ನಾದಮಯ ಲೋಕ ಅನಾವರಣಗೊಂಡಿತ್ತು. ಶಾಸ್ತ್ರೀಯ ನೃತ್ಯಗಳಾದ ಭರತ ನಾಟ್ಯ, ಒಡೆಸ್ಸಿ, ಮಣಿಪುರಿ, ಕುಚಿಪುಡಿ, ಕಥಕ್‌ ಪ್ರದರ್ಶನ ಎಲ್ಲರ ಗಮನ ಸೆಳೆದವು.

ಜಿಲ್ಲಾ ಪಂಚಾಯತಿ ಸದಸ್ಯ ಬಣಕಲ್‌ ಶ್ಯಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಮೂಡಿಗೆರೆ ತಹಶೀಲ್ದಾರ್‌ ಎಚ್‌.ಎಂ. ರಮೇಶ್‌ ಸೇರಿದಂತೆ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಪಟ್ಟಣ ಪಂಚಾಯತಿ ಸದಸ್ಯರು, ಪ್ರಮುಖರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next