Advertisement
ಪಟ್ಟಣದ ನಂದೀಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಜಿಲ್ಲಾಧಿಕಾರಿಗಳು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 2 ತಿಂಗಳಿನಿಂದ ಎಲ್ಲರೂ ಒಗ್ಗಟ್ಟಾಗಿ ಕೋವಿಡ್ ವಿರುದ್ದ ಹೋರಾಟ ನಡೆಸಿ ಜಿಲ್ಲೆಯನ್ನು ಗ್ರೀನ್ ಜೋನ್‌ನಲ್ಲಿ ಇರುವಂತೆ ನೋಡಿಕೊಂಡಿದ್ದೆವು. ದುರದೃಷ್ಟವಶಾತ್ ಇದೀಗ ಕೋವಿಡ್ ಸೋಂಕು ದೃಢಪಟ್ಟಿದೆ. ಅದರಲ್ಲೂ ವೈದ್ಯರೊಬ್ಬರಿಗೆ ಸೋಂಕು ತಗುಲಿರುವುದು ಹೆಚ್ಚಿನ ಆತಂಕ ಉಂಟು ಮಾಡುತ್ತದೆ. ಆದರೆ ಸಾರ್ವಜನಿಕರು ಹೆದರಬೇಕಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಎಚ್ಚರಿಕೆಯ ಕ್ರಮ ಕೈಗೊಂಡಿದೆ. ಮೊದಲಿಗಿಂತಲೂ ಈಗ ನಾವೆಲ್ಲರೂ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುವ ಅಗತ್ಯ ಇದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಲ್ಲಿ ಕೋವಿಡ್ ಸೋಂಕಿನ ವಿರುದ್ಧದ ಹೋರಾಟ ಯಶಸ್ವಿಗೊಳಿಸಬಹುದು ಎಂದರು.
ಕೋವಿಡ್ ಸೋಂಕು ಇದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆ ಪಟ್ಟಣದಾದ್ಯಂತ ಬಿಗಿ ಬಂದೋಬಸ್ತ್ ಮಾಡಿದ್ದು ಬ್ಯಾರಿಕೇಡ್‌ಗಳನ್ನು ಹಾಕಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಇತ್ತ ಸಾರ್ವಜನಿಕ ವಲಯದಲ್ಲಿ ಈ ವಿಚಾರ ವ್ಯಾಪಕ ಚರ್ಚೆಗೆ ಒಳಗಾಗಿದೆ.