ಸುಧೀರ್ ಬಿ.ಟಿ.
ಮೂಡಿಗೆರೆ: ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ಕಾಫಿ ನಾಡಿನ, ರೈತರು ಕಂಗಾಲಾಗಿದ್ದಾರೆ. ಮೂಡಿಗೆರೆ ತಾಲೂಕಿನ ಜೀವಬೆಳೆ ಕಾಫಿ , ಏಲಕ್ಕಿ ಮತ್ತು ಕಾಳುಮೆಣಸು ಸಂಪೂರ್ಣವಾಗಿ ನೆಲಕಚ್ಚಿದ್ದು, ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಬಾರಿಯ ಮಳೆ ಆರ್ಭಟದಿಂದಾಗಿ ಶೇ.60 ಕ್ಕೂ ಹೆಚ್ಚು ಫಸಲು ನಾಶವಾಗಿದ್ದು, ಇರುವ ಅಲ್ಪಸ್ವಲ್ಪ ಬೆಳೆಯನ್ನೇ ಬೆಳೆಗಾರರು ಕೊಯ್ಲು ಮಾಡಬೇಕಿದೆ. ಈ ಬಾರಿ ಮುಂಗಾರು ನಿಗದಿತ ವೇಳೆಗೆ ಬರದೆ ರೈತರನ್ನು ಚಿಂತೆಗೀಡುಮಾಡಿತ್ತು. ಆದರೆ ನಂತರದ ದಿನಗಳಲ್ಲಿ ವಾಡಿಕೆಗಿಂತ ಅತೀಹೆಚ್ಚು ಸುರಿದು ರೈತರ ಬದುಕನ್ನೇ ಕಿತ್ತುಕೊಂಡಿತು. ನಿರಂತರ ಕುಂಭದ್ರೋಣ ಮಳೆಯಿಂದ ಒದ್ದೆಯಾದ ಭೂಮಿ ಕುಸಿದು ಅಪಾರ ನಷ್ಟವಾಯಿತು.
ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಬಾಳೂರು, ಜಾವಳಿ, ನಿಡುವಾಳೆ, ಕೂವೆ ಮುಂತಾದ ಕಡೆಗಳಲ್ಲಿ ಗುಡ್ಡ, ಭೂಮಿ ಕುಸಿದ ಪರಿಣಾಮ ತೋಟಗಳಿಗೆ ಅಪಾರ ಹಾನಿ ಉಂಟಾಗಿತ್ತು.
ಇದರಿಂದ ಮೂಡಿಗೆರೆಯ ಹಲವು ಭಾಗಗಳಲ್ಲಿ ಪ್ರಮುಖ ಆರ್ಥಿಕ ಬೆಳೆಗಳಾದ ಕಾಫಿ , ಕಾಳುಮೆಣಸು, ಏಲಕ್ಕಿ ಫಸಲು ಬಹುತೇಕ ನಾಶವಾಗಿ ಹೋಗಿದೆ. ಅ ಧಿಕ ಮಳೆಯ ಪರಿಣಾಮ ಒಂದು ಎಕರೆ ತೋಟದಲ್ಲಿ ಕೇವಲ 6-9 ಚೀಲ ಕಾಫಿ ಮಾತ್ರ ಕೈ ಸೇರುವ ಅಂದಾಜಿದೆ. ಹಿಂದಿನ ವರ್ಷಗಳಲ್ಲಿ ಲಾರಿಗಳಲ್ಲಿ ಟನ್ ಗಟ್ಟಲೆ ಕಾಫಿ ಬೀಜದ ಚೀಲಗಳನ್ನು ಸಾಗಿಸುತ್ತಿದ್ದ ಬೆಳೆಗಾರರು ಈ ಬಾರಿ ಕೆಲವೇ ಮೂಟೆಗಳಷ್ಟು ಬೆಳೆಗೆ ತೃಪ್ತಿ ಪಟ್ಟುಕೊಳ್ಳಬೇಕಿದೆ.
ಈ ವರ್ಷದ ಮಹಾಮಳೆ ಮೂಡಿಗೆರೆ ತಾಲೂಕನ್ನು ಹೆಚ್ಚಾಗಿ ಕಾಡಿದ್ದು, ಹಲವು ಕಡೆ ತೋಟ, ಮನೆ, ಗದ್ದೆ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡು ಕೆಲ ಕೃಷಿಕರ ಕುಟುಂಬ ಬೀದಿಗೆ ಬಂದು ನಿಂತಿದೆ. ಸರಕಾರಗಳಿಂದ ಸಿಗಬೇಕಾದ ಪರಿಹಾರ ದೊರೆತರೂ ಅದು ಯಾತಕ್ಕೂ ಸಾಲುತ್ತಿಲ್ಲ. ರಾಜ್ಯದ ಹಲವೆಡೆಯಿಂದ ದಾನಿಗಳು ಹಲವು ವಸ್ತು ನೀಡಿದ್ದು ತಾತ್ಕಾಲಿಕ ರಿಲೀಫ್ ನೀಡಿದೆ. ಆದರೆ ಕಾಫಿ ತೋಟ, ಗದ್ದೆಗಳನ್ನೇ ನಂಬಿಕೊಂಡಿರುವ ಬೆಳೆಗಾರರು, ಕೂಲಿ ಕಾರ್ಮಿಕರು ಮಾತ್ರ ದಿಕ್ಕು ತೋಚದಂತಾಗಿದ್ದಾರೆ.
ವಿದೇಶಿ ವಿನಿಮಯದ ನೇರ ಲಾಭ, ಕಾಫಿ ಬೆಳೆಗೆ ವಿಮೆ ಸೌಲಭ್ಯ ಇಲ್ಲದಿರುವುದು, ಸಕಾಲಕ್ಕೆ ಎನ್‌ಡಿಆರ್‌ಎಫ್ ಪರಿಹಾರದಲ್ಲಿನ ಅಡೆತಡೆಗಳು ಮಲೆನಾಡಿನ ರೈತರು ನರಕಯಾತನೆ ಅನುಭವಿಸುವಂತೆ ಮಾಡಿದೆ.