ಮೂಡಿಗೆರೆ: ಮಾನವ ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಬದುಕಲು ನೀರಿನ ಅವಶ್ಯಕತೆಯಿದೆ. ಇದನ್ನರಿತು ನೀರು ಉಳಿಸದಿದ್ದರೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸಾಹಿತಿ ಹಳೆಕೋಟೆ ರಮೇಶ್ ಎಚ್ಚರಿಕೆ ನೀಡಿದರು.
ಪಟ್ಟಣದ ಜೇಸಿ ಭವನದಲ್ಲಿ ಜೇಸಿ ಸಂಸ್ಥೆಯ ಅಂಬಾರಿ ಜೇಸಿ ಸಪ್ತಾಹ 2019 ಕಾರ್ಯಕ್ರಮದ ಅಂಗವಾಗಿ ಜೇಸಿ ಸಂಸ್ಥೆ, ತೋಟಗಾರಿಕಾ ಮಹಾವಿದ್ಯಾಲಯ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ‘ನೀರು ಉಳಿಸಿ, ಭವಿಷ್ಯ ರೂಪಿಸಿ’ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿ ನಾಶ ಮಾಡುತ್ತಿದ್ದಾನೆ. ಇದರಿಂದ ಭೂಮಿಯಲ್ಲಿ ಅಂತರ್ಜಲ ನಶಿಸಿ ಪ್ರಸ್ತುತ ನೀರಿಗೆ ಹಣ ಕೊಟ್ಟು ಕೊಂಡುಕೊಳ್ಳುವ ಕಾಲಘಟ್ಟಕ್ಕೆ ತಲುಪಿದ್ದೇವೆ. ಭೂಮಿಯಲ್ಲಿ ನಿರಂತರವಾಗಿ ನೀರು ಶೇಖರಣೆಯಾಗಲು ಪ್ರಕೃತಿ ಉಳಿಸಬೇಕು. ಹಾಗಾಗಿ, ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ನೀರು ಉಳಿಸಲು ಶ್ರಮಿಸಬೇಕೆಂದು ಹೇಳಿದರು.
ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ಅಜ್ಜಂಪುರ ಮಾತನಾಡಿ, ಪ್ರಕೃತಿ ಎಲ್ಲವನ್ನೂ ಕೊಟ್ಟಿದೆ. ಆದರೂ ಪ್ರಕೃತಿ ಮೇಲೆಯೇ ದೌರ್ಜನ್ಯ ನಡೆಸುತ್ತೇವೆ. ಅಲ್ಲದೇ ಪ್ರಕೃತಿಯನ್ನೇ ಸೃಷ್ಟಿಸುವ ರೀತಿಯಲ್ಲಿ ಬೀಗುತ್ತೇವೆ. ನೆಲದಲ್ಲಿ ನೀರಿಲ್ಲದಿದ್ದರೆ ಏನು ಮಾಡಲು ಸಾಧ್ಯವಿದೆ ಎಂದು ಒಮ್ಮೆ ಯೋಚಿಸಿದರೆ ಭಯವಾಗುತ್ತದೆ. ಗಾಳಿಯಿಲ್ಲದೇ ಜೀವಿಸಲು ಸಾಧ್ಯವಿಲ್ಲ. ಅದೇ ರೀತಿ ನೀರಿಲ್ಲದೇ ಬದುಕಲು ಸಾಧ್ಯವೇ ಇಲ್ಲ. ಇಂತಹ ಅನುಭವ ಆದಾಗ ಮಾತ್ರ ನೀರಿನ ಮಹತ್ವ ತಿಳಿಯುತ್ತದೆ. ಹಾಗಾಗಿ, ನೀರು ಉಳಿಸಲು ಪರಿಸರ ರಕ್ಷಿಸಬೇಕು ಎಂದರು.
ಈ ವೇಳೆ ವಿದ್ಯಾರ್ಥಿಗಳಿಗೆ ‘ನೀರು ಉಳಿಸಿ, ಭವಿಷ್ಯ ರೂಪಿಸಿ’ ವಿಷಯದ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ತೋಟಗಾರಿಕಾ ಮಹಾವಿದ್ಯಾಲಯ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು.
ಜೇಸಿ ಅಧ್ಯಕ್ಷ ಎಚ್.ಕೆ.ಯೋಗೇಶ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಂಸ್ಥೆ ಅಧ್ಯಕ್ಷ ಡಾ| ಜೀವನ್ ಕಳಾಮೆ, ಜೇಸಿ ಕಾರ್ಯದರ್ಶಿ ಜಿ.ಟಿ.ರಾಜೇಶ್, ಜೇಸಿರೇಟ್ ಅಧ್ಯಕ್ಷೆ ಗೀತಾ ಯೋಗೇಶ್, ಕಾರ್ಯದರ್ಶಿ ವಿದ್ಯಾರಾಜು, ಕಾರ್ಯಕ್ರಮದ ನಿರ್ದೇಶಕ ಬಸವರಾಜು, ಸಪ್ತಾಹದ ನಿರ್ದೇಶಕ ಕೆ.ಎಚ್.ಚಂದ್ರಶೇಖರ್ ಉಪಸ್ಥಿತರಿದ್ದರು